ರಾಷ್ಟ್ರೀಯ ವಿಜ್ಞಾನ ಸಮಾವೇಶಕ್ಕೆ ಈಶ್ವರಮ್ಮ ಶಾಲಾ ವಿದ್ಯಾರ್ಥಿನಿಯರು ಆಯ್ಕೆ

ರಾಷ್ಟ್ರೀಯ ವಿಜ್ಞಾನ ಸಮಾವೇಶಕ್ಕೆ ಈಶ್ವರಮ್ಮ ಶಾಲಾ ವಿದ್ಯಾರ್ಥಿನಿಯರು ಆಯ್ಕೆ

ದಾವಣಗೆರೆ, ಡಿ. 20 – ನಗರದಲ್ಲಿ ಈಚೆಗೆ ನಡೆದ 31ನೇ ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ನಗರದ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳು ರಾಜ್ಯ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಆಯ್ಕೆಯಾಗಿದ್ದಾರೆ.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಭಾರತ ಮತ್ತು ಕರ್ನಾಟಕ ಸರ್ಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪ್ರಾದೇಶಿಕ ಉಪ ವಿಜ್ಞಾನ ಕೇಂದ್ರ (ದಾವಣಗೆರೆ) ವತಿಯಿಂದ ಆಯೋಜಿಸಿದ್ದ 31ನೇ ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಬಿ.ಎನ್.ಭಾವನಾ (9 ನೇ ತರಗತಿ) ಮತ್ತು ಎಂ.ಪ್ರತೀಕ್ಷಾ (8 ನೇ ತರಗತಿ) ಇವರು `ಸ್ವಾವಲಂಬನೆಗಾಗಿ ಪರಿಸರ ವ್ಯವಸ್ಥೆ ಆಧಾರಿತ ವಿಧಾನಗಳು’ ಎಂಬ ಉಪ ವಿಷಯದ ಅಡಿಯಲ್ಲಿ `ಕತ್ತಾಳೆ ಪಟ್ಟಿ, ಪರಿಸರದ ಗಟ್ಟಿ’ ವಿಷಯವನ್ನು ಮಂಡನೆ ಮಾಡಿ ಗೆಲುವು ಸಾಧಿಸಿ, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿನಿಯರಿಗೆ ವಿಜ್ಞಾನ ಶಿಕ್ಷಕಿ ಸವಿತಾ ಎನ್. ಸ್ವಾಮಿ ಮಾರ್ಗದರ್ಶನ ನೀಡಿದ್ದರು.

ವಿದ್ಯಾರ್ಥಿನಿಯರನ್ನು ಈಶ್ವರಮ್ಮ ಆಡಳಿತ ಮಂಡಳಿಯ ಅಧ್ಯಕ್ಷರಾದ  ಕೆ.ಆರ್. ಸುಜಾತ ಕೃಷ್ಣ, ಕಾರ್ಯದರ್ಶಿ  ಎ.ಆರ್. ಉಷಾರಂಗ ನಾಥ, ಖಜಾಂಚಿ  ಸುಜಾತ ಎ.ಪಿ. ಮತ್ತು ಈಶ್ವರಮ್ಮ ಟ್ರಸ್ಟ್ ಕಾರ್ಯದರ್ಶಿ ಜಿ.ಆರ್. ವಿಜಯಾನಂದ್, ಶಾಲಾ ಪ್ರಾಂಶುಪಾಲ ಕೆ.ಎಸ್. ಪ್ರಭುಕುಮಾ‌ರ್, ಉಪಪ್ರಾಂಶು ಪಾಲರಾದ ಶಶಿರೇಖಾ ಜಿ.ಎಸ್.  ಅಭಿನಂದಿಸಿದ್ದಾರೆ.

error: Content is protected !!