ರಾಜ್ಯ ರೈತ ಸಂಘದ ತಾ.ಅಧ್ಯಕ್ಷರಾಗಿ ಚಿಕ್ಕಮಲ್ಲನಹೊಳೆ ಚಿರಂಜೀವಿ ಆಯ್ಕೆ

ರಾಜ್ಯ ರೈತ ಸಂಘದ ತಾ.ಅಧ್ಯಕ್ಷರಾಗಿ ಚಿಕ್ಕಮಲ್ಲನಹೊಳೆ ಚಿರಂಜೀವಿ ಆಯ್ಕೆ

ಜಗಳೂರು, ಡಿ.20- ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ ಬಣ) ತಾಲ್ಲೂಕು ಅಧ್ಯಕ್ಷರಾಗಿ ಚಿಕ್ಕಮಲ್ಲನಹೊಳೆ ಚಿರಂಜೀವಿ,  ಪ್ರಧಾನ ಕಾರ್ಯದರ್ಶಿಯಾಗಿ ರಾಜು,  ತಾಲ್ಲೂಕು ಹಸಿರು ಸೇನೆ ಅಧ್ಯಕ್ಷರಾಗಿ ನಾಗರಾಜು ಅವರನ್ನು ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ನೇತೃತ್ವದಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಜಿಲ್ಲಾ ಮುಖಂಡ ಕಾನನಕಟ್ಟೆ ತಿಪ್ಪೇಸ್ವಾಮಿ ತಿಳಿಸಿದರು.

ಪಟ್ಟಣದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯ್ಕೆಯಾಗಿರುವ ನೂತನ ಪದಾಧಿಕಾರಿಗಳು ರೈತರ ಸಮಸ್ಯೆಗಳಿಗೆ ಬೆನ್ನೆಲುಬಾಗಿ ನಿಂತು ಕೆಲಸ ಮಾಡಬೇಕೆಂದು ಅವರು ಕಿವಿಮಾತು ಹೇಳಿದರು.

ನೂತನ ಅಧ್ಯಕ್ಷ ಚಿಕ್ಕಮಲ್ಲನಹೊಳೆ ಚಿರಂಜೀವಿ ಮಾತನಾಡಿ,  ಬೆಸ್ಕಾಂ ಇಲಾಖೆಗೆ ರೈತರು ತಮ್ಮ ಹೊಲಗಳಿಗೆ ಹಲವಾರು ವರ್ಷಗಳ ಹಿಂದೆ ಕೊರೆಸಿರುವ ಬೋರ್‍ವೆಲ್‍ಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಕ್ರಮ-ಸಕ್ರಮ ಹಣ ಕಟ್ಟಿದ್ದರು. ಈಗ ಸರ್ಕಾರ ಅಕ್ರಮ-ಸಕ್ರಮ ಯೋಜನೆ ಸ್ಥಗಿತಗೊಳಿಸಿ ಸೋಲಾರ್ ಹಾಕುವಂತೆ ಆದೇಶ ಮಾಡಿ, ರೈತರಿಗೆ ಹಣಕಾಸಿನ ಹೊರೆ ಮಾಡಿದೆ. ಅಕ್ರಮ-ಸಕ್ರಮಕ್ಕೆ ಕಟ್ಟಿರುವ ರೈತರಿಗೆ ವಿದ್ಯುತ್ ಸಂಪರ್ಕ ಕೊಡಬೇಕು. ರೈತರಿಗೆ ಸೋಲಾರ್ ಹಾಕುವಂತೆ ನೀಡಿರುವ ಕಾನೂನನ್ನು ವಾಪಸ್‌ ಪಡೆಯಬೇಕು. ಈ ಸಂಬಂಧ ಡಿ.28 ರಂದು ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಬೃಹತ್ ಮೆರವಣಿಗೆಯ ಮೂಲಕ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಅವರು ತಿಳಿಸಿದರು. 

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ ಬಣ)ಯ ಪದಾಧಿಕಾರಿಗಳಾದ ಶರಣಪ್ಪ, ಗೋವಿಂದ, ಕ್ಯಾಸೇನಹಳ್ಳಿ ಬಸಪ್ಪ, ಬಸವರಾಜ್‌ ಉಪಸ್ಥಿತರಿದ್ದರು.

error: Content is protected !!