ದಾವಣಗೆರೆ, ಡಿ.20 – ಮುಂಬ ರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಧಿವೇಶನ ವೀರಶೈವ ಸಮಾಜ ಬಾಂಧವರ ಶಕ್ತಿ ಪ್ರದರ್ಶನದ ವೇದಿಕೆಯಲ್ಲ. ಇದು ಜೊತೆಯಾಗಿ ಸಾಗುವ ವೇದಿಕೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಈಶ್ವರ್ ಖಂಡ್ರೆ ಹೇಳಿದರು.
ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ಕೆಲ ಮಾಧ್ಯಮ ಗಳಲ್ಲಿ ಅಧಿವೇಶನ ಶಕ್ತಿ ಪ್ರದರ್ಶನ ಎಂದು ಬಿಂಬಿತವಾಗುತ್ತಿದೆ. ಆದರೆ ಇದು ವಾಡಿಕೆಯಂತೆ ನಡೆಯುತ್ತಿರುವ ಅಧಿವೇಶನ ಎಂದು ಸ್ಪಷ್ಟಪಡಿಸಿದರು.
ಸಮಾಜದ ಪ್ರಸ್ತುತ ಸವಾಲು ಗಳು – ಸಮಸ್ಯೆಗಳ ಕುರಿತು ಚರ್ಚಿಸುವುದು, ಸಮುದಾಯದ ಒಗ್ಗೂಡುವಿಕೆ ಹಾಗೂ ಯುವಕರಿಗೆ ಮಾರ್ಗದರ್ಶನ ಕೊಡುವುದು ಈ ಸಮಾವೇಶದ ಉದ್ದೇಶವಾಗಿದೆ.
ಸಾಮಾಜಿಕ ನ್ಯಾಯ ಪ್ರತಿಪಾದಿಸಿರುವುದು ಲಿಂಗಾಯತ ಸಮುದಾಯ. ದುರ್ಬಲ ಹಾಗೂ ಶೋಷಿತ ಸಮುದಾಯವನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುವ ಜವಾಬ್ದಾರಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಇದೆ. ಈ ನಿಟ್ಟಿನಲ್ಲಿ ಅಧಿವೇಶನದಲ್ಲಿ ಅನೇಕ ಗೋಷ್ಠಿಗಳು ನಡೆಯಲಿವೆ ಎಂದವರು ಹೇಳಿದರು.
ಡಿ.23ರಿಂದ ಆರಂಭವಾಗುವ ಸಮಾವೇಶದಲ್ಲಿ ರೈತರ ಅಧಿವೇಶನ, ಮಹಿಳೆಯರು, ಯುವಕರು, ನೌಕರರ ಮತ್ತು ಧರ್ಮಸಭಾ ಅಧಿವೇಶನಗಳು ನಡೆಯಲಿವೆ. ಎರಡನೇ ದಿನವಾದ ಡಿ.24 ರಂದು ನಿರ್ಣಯಗಳ ಮಂಡನೆಯಾಗಲಿವೆ. ನಾಡಿನ ಪ್ರತಿಷ್ಠಿತ ಮಠಾಧೀಶರು, ಹಾಲಿ-ಮಾಜಿ ಮುಖ್ಯಮಂತ್ರಿಗಳು, ಸಾಹಿತಿಗಳು, ಚಿಂತಕರು, ಸಚಿವರು ಭಾಗವಹಿಸಲಿದ್ದಾರೆ. ಲಕ್ಷಾಂತರ ಜನರು ಸೇರುವ ನಿರೀಕ್ಷೆ ಇದೆ ಎಂದರು.
ಎರಡು ದಿನಗಳ ಅಧಿವೇಶನದಲ್ಲಿ ಸಮಾಜದ ಹಿತದ ಬಗೆ ಚರ್ಚೆ ನಡೆಯಲಿದೆ. ರೈತರಿಗೆ ಆಧುನಿಕ ಕೃಷಿ ಪದ್ಧತಿ, ಯುವಕರಿಗೆ ಉದ್ಯೋಗ, ಸರ್ಕಾರದ ಸೌಲಭ್ಯಗಳ ಕುರಿತು ಚರ್ಚೆ ನಡೆಯಲಿದೆ ಎಂದು ಖಂಡ್ರೆ ಹೇಳಿದರು.
ಮಹಾಸಭಾ ಜಾತಿಗಣತಿ ವಿರೋಧಿಯಲ್ಲ. ಆದರೆ ಜಾತಿಗಣತಿ, ಸಾಮಾಜಿಕ, ಆರ್ಥಿಕ ಸಮೀಕ್ಷೆ, ವಾಸ್ತವಾಂಶದ ಆಧಾರದ ಮೇಲೆ ಇರಬೇಕೆಂಬ ಬೇಡಿಕೆ ಇದೆ. ಈಗಾಗಲೇ ಈ ಸಂಬಂಧ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದೂ ಅವರು ಹೇಳಿದರು.