ದಾವಣಗೆರೆ, ಡಿ. 20 – ಜಿಲ್ಲೆಯಲ್ಲಿ ಈ ವರ್ಷದ ಮಳೆಯ ಅಭಾವದಿಂದ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುವ ಸಾಧ್ಯತೆಯಿದ್ದು, ರೈತರು ಮೇವಿನ ಸಂಗ್ರಹಣೆ ಕುರಿತಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ತಿಳಿಸಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಮೇವು ಅಭಿವೃದ್ಧಿ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಈಗಾಗಲೇ ಬರ ಪರಿಸ್ಥಿತಿ ಯನ್ನು ಎದುರಿಸುತ್ತಿದ್ದು, ರೈತರು ಬರುವ ಬೇಸಿಗೆ ಕಾಲದಲ್ಲಿ ಜಾನುವಾರುಗಳಿಗೆ ಅವಶ್ಯಕವಾಗಿ ಬೇಕಾಗುವ ಮೇವಿನ ಉತ್ಪಾದನೆಯನ್ನು ಹೆಚ್ಚಿಸಬೇಕು, ಮೇವು ಸೇರಿದಂತೆ ನೀರು, ಆಶ್ರಯ ಮತ್ತು ಆರೋಗ್ಯ ಪಾಲನೆ ಸೇವೆಗಳನ್ನು ಒದಗಿಸುವ ಮೂಲಕ ಜಾನುವಾರುಗಳನ್ನು ರಕ್ಷಿಸಿಕೊಳ್ಳಬೇಕು ಎಂದರು.
ರೈತರು ಮೇವನ್ನು ಒಣಗಿಸಿ ಹುಲ್ಲು ಹಾಳಾಗದಂತೆ ಶೇಖರಣೆ ಮಾಡಬೇಕು, ನೀರಾವರಿ ಸೌಲಭ್ಯವಿರುವ ರೈತರು ಜಾನುವಾರುಗಳಿಗೆ ನೀಡಬೇಕಾಗುವ ಮೇವಿನ ಅನುಸಾರ ಹಸಿರು ಮೇವು ಉತ್ಪಾದನೆ ಮಾಡಿ ರಸ ಮೇವಿನ ರೂಪದಲ್ಲಿ ಮೇವನ್ನು ಸಂಗ್ರಹಿಸಿಟ್ಟು ಕೊಳ್ಳುವಂತೆ ತಿಳಿಸಬೇಕು. ಜಗಳೂರು ತಾಲ್ಲೂಕಿನಲ್ಲಿ ಹೆಚ್ಚು ಮೇವಿನ ಕೊರತೆ ಕಂಡುಬರುವ ಸಾಧ್ಯತೆಯಿದ್ದು, ಅಂತಹ ಸಂದರ್ಭದಲ್ಲಿ ಟೆಂಡರ್ ಮೂಲಕ ಮೇವನ್ನು ಪೂರೈಕೆ ಮಾಡಬೇಕು.
ಕೆ.ಎಂ.ಎಫ್ ಮತ್ತು ಪಶುಸಂಗೋಪನೆ ಇಲಾಖೆ ವತಿಯಿಂದ ಕ್ಯಾಂಪ್‍ಗಳ ಮೂಲಕ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕನಿಷ್ಠ ನೂರು ಜನ ರೈತರು ಮೇವಿನ ಬೆಳೆ ಬೆಳೆಯಬೇಕು ಈ ನಿಟ್ಟಿನಲ್ಲಿ ಅಧಿಕಾರಿಗಳು ರೈತರಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ. ಸುರೇಶ್ ಇಟ್ನಾಳ್ ಮಾತನಾಡಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ರೈತರು ಮೇವಿನ ಬೆಳೆ ಬೆಳೆಯಲು ಸರ್ಕಾರದಿಂದ ಎಕರೆಗೆ ರೂ. 16,000 ಸಹಾಯಧನ ಸೌಲಭ್ಯ ಒದಗಿಸುತ್ತಿದ್ದು, ರೈತರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾದಲ್ಲಿ ಅಂತಹ ಪ್ರದೇಶಗಳಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಪಶುಸಂಗೋಪನ ಇಲಾಖೆ ಉಪ-ನಿರ್ದೇಶಕ ಚಂದ್ರಶೇಖರ್ ಸುಂಕದ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್, ಶಿವಮೊಗ್ಗ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕರಾದ ಡಾ. ಜೆ. ಎಸ್. ಸ್ಮಿತಾ, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಪಶುವೈದ್ಯ ಡಾ .ಜಿ.ಕೆ. ಜಯದೇವಪ್ಪ, ಡಾ. ವಿಶ್ವನಾಥ್, ರೇಷ್ಮೆ ಇಲಾಖೆ ಉಪ-ನಿರ್ದೇಶಕ ಚಂದ್ರಪ್ಪ, ಉಪಸ್ಥಿತರಿದ್ದರು.