ರಾಣೇಬೆನ್ನೂರು, ಡಿ.18- ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುವಷ್ಟು ಸಾಮರ್ಥ್ಯ ರಾಣೇಬೆನ್ನೂರಿಗಿದೆ. ನಗರಸಭೆ ಕ್ರೀಡಾಂಗಣದಲ್ಲಿ ಅತ್ಯಂತ ಅದ್ಧೂರಿಯಾಗಿ 13ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಮಾಡೋಣ, ಇಲ್ಲಿ ಉದಾರ ಹೃದಯದ ದಾನಿಗಳಿದ್ದಾರೆ ಎಂದು ಇಂದು ಸಮ್ಮೇಳನದ ಪೂರ್ವ ಬಾವಿ ಸಭೆಯಲ್ಲಿ ಮಾತನಾಡಿದ ಎಲ್ಲರೂ ಒಕ್ಕೊರಲಿನ ಅಭಿಪ್ರಾಯ ವ್ಯಕ್ತಪಡಿಸಿದರು.
ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಅಧ್ಯಕ್ಷೀಯ ಭಾಷಣ ಮಾಡಿದ ಜಿಲ್ಲಾಧ್ಯಕ್ಷ ಲಿಂಗಯ್ಯ ಅವರು, ಈಗ ಬರಗಾಲ ಇರುವುದರಿಂದ ಸರ್ಕಾರ ಹಾಗೂ ರಾಜ್ಯ ಕಸಾಪದ ಆದೇಶದಂತೆ ಫೆಬ್ರವರಿ 15 ರೊಳಗೆ ಅದ್ಧೂರಿಯಾಗಿ ಮಾಡದೆ ಅತ್ಯಂತ ಸರಳವಾಗಿ ಜಿಲ್ಲಾ ಸಮ್ಮೇಳನವನ್ನು ಆಚರಣೆ ಮಾಡಬೇಕು ಎಂದು ಘೋಷಿಸಿದರು.
ಶೀಘ್ರವಾಗಿ ಇನ್ನೊಂದು ಸಭೆ ಕರೆದು ಕಹಿಗೊಂಡಿರುವ ಎಲ್ಲ ಕನ್ನಡದ ಮನಸ್ಸುಗಳನ್ನು, ಗ್ರಾಮೀಣ ಘಟಕಗಳನ್ನು, ಎಲ್ಲ ಕ್ಷೇತ್ರದ ಹಿರಿಯರನ್ನು ಸೇರಿಸಿ ಅವರೊಡನೆ ಚರ್ಚಿಸಿ, ಸ್ಥಳ ಹಾಗೂ ದಿನಾಂಕ ನಿಗದಿಪಡಿಸಿ ರಾಣೇಬೆನ್ನೂರಿನಲ್ಲಿಯೇ ಸಮ್ಮೇಳನ ನಡೆಸುವುದಾಗಿ ಅಧ್ಯಕ್ಷ ಲಿಂಗಯ್ಯ ಪ್ರಕಟಿಸಿದರು.
ವರ್ತಕ ಸಂಘದ ಅಧ್ಯಕ್ಷ ಜಿ.ಜಿ.ಹೊಟ್ಟಿಗೌಡ್ರ, ನಗರಸಭೆ ಸದಸ್ಯರಾದ ಗಂಗಮ್ಮ ಹಾವನೂರ, ಪ್ರಕಾಶ ಪೂಜಾರ, ಮಲ್ಲಣ್ಣ ಅಂಗಡಿ, ಜಿಪಂ ಮಾಜಿ ಉಪಾಧ್ಯಕ್ಷ ಎಸ್.ಎಸ್ ರಾಮಲಿಂಗಣ್ಣನವರ, ಕೆ.ಎಚ್ ಮುಕ್ಕಣ್ಣನವರ, ಸಂಗಾಪೂರ ಸಹೋದರರು, ಎ.ಬಿ. ರತ್ನಮ್ಮ, ವೀರೇಶ್ ಜಂಬಗಿ, ಕೊಟ್ರೇಶ್ ಎಮ್ಮಿ, ಪ್ರಭಾಕರ್ ಶಿಗ್ಲಿ, ಬಿ.ಪಿ. ಶಿಡೇನೂರ, ಬಿ.ಬಿ.ನಂದಿಹಳ್ಳಿ, ರವೀಂದ್ರಗೌಡ ಪಾಟೀಲ್, ಮಂಜುನಾಥ ದುಗ್ಗತ್ತಿ ಮತ್ತಿತರರಿದ್ದರು.