ದಾವಣಗೆರೆ, ಡಿ. 17 – ನಾನು ದೇಹವೆಂಬ ಸ್ಮೃತಿಯಲ್ಲಿದ್ದುಕೊಂಡು ದೇಹಾಭಿಮಾನಿಗಳಾಗಬಾರದು. ಆತ್ಮದ ಸ್ಮೃತಿಯಲ್ಲಿದ್ದುಕೊಂಡು ಆತ್ಮಾಭಿಮಾನಿಗಳಾಗಬೇಕು ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹುಬ್ಬಳ್ಳಿ ಉಪ ವಲಯದ ನಿರ್ದೇಶಕ ರಾಜಯೋಗಿ ಬ್ರಹ್ಮಾಕುಮಾರ ಡಾ.ಬಸವರಾಜ ರಾಜಋಷಿ ಆಶಯ ವ್ಯಕ್ತಪಡಿಸಿದರು.
ಇಲ್ಲಿನ ವಿದ್ಯಾನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ `ಶರಣರು ಕಂಡ ಶಿವ’ ಪ್ರವಚನ ಮಾಲೆಯ 14ನೇ ದಿನವಾದ ಭಾನುವಾರದ ಸಮಾರಂಭದಲ್ಲಿ ಅವರು ಪ್ರವಚನ ನೀಡಿದರು.
ಜೀವನದಲ್ಲಿ ಮಾಡಿದ ಪಾಪ – ಪುಣ್ಯಗಳು ಸತ್ತ ನಂತರ ದೇಹದ ರೀತಿಯಲ್ಲೇ ನಶಿಸಿ ಹೋಗುತ್ತವೆ ಎಂಬುದು ಭ್ರಮೆ. ಪಾಪ ಹಾಗು ಪುಣ್ಯಗಳು ಆತ್ಮಕ್ಕೆ ಅಂಟಿಕೊಂಡಿರುತ್ತವೆ. ಹೀಗಾಗಿಯೇ ಪುಣ್ಯಾತ್ಮ – ಪಾಪಾತ್ಮ ಎಂಬ ಪದಗಳು ಬಂದಿವೆ ಎಂದವರು ಪ್ರತಿಪಾದಿಸಿದರು.
ಈಗಿನ ಜನ್ಮದಲ್ಲಷ್ಟೇ ಅಲ್ಲದೇ, ಹಿಂದಿನ ಜನ್ಮಗಳ ಪಾಪ ಹಾಗು ಪುಣ್ಯಗಳು ಆತ್ಮಕ್ಕೆ ಅಂಟಿಕೊಂಡು ಬಂದಿರುತ್ತವೆ. ಕಳೆದ ಜನ್ಮದಲ್ಲಿ ಗೊತ್ತಿರದೇ ಏನೋ ತಪ್ಪುಗಳಾಗಿ ಪಾಪಗಳು ಬಂದಿರಬ ಹುದು. ಅದನ್ನು ಈ ಜನ್ಮದಲ್ಲಿ ಸರಿಪಡಿಸಿ ಕೊಳ್ಳಬೇಕು ಎಂದು ಅವರು ಹಿತ ನುಡಿದರು.
ಪ್ರಾರಬ್ಧ ಕರ್ಮ, ಸಂಚಿತ ಕರ್ಮ ಹಾಗೂ ಭೂಮ್ರ ಕರ್ಮಗಳು ಆತ್ಮಕ್ಕೆ ಅಂಟಿಕೊಂಡು ಬಂದಿರುತ್ತವೆ. ಈ ರೀತಿ ಕರ್ಮಗಳನ್ನು ಪುಣ್ಯದಿಂದ ನಿವಾರಿಸಿಕೊಳ್ಳಬೇಕು ಎಂದು ಬಸವರಾಜ ರಾಜಋಷಿ ಕರೆ ನೀಡಿದರು.
ಮನುಷ್ಯ ಮನಸ್ಸಿಗೆ ತೋಚಿದ ರೀತಿಯಲ್ಲಿ ಯಾವುದೇ ಕೆಲಸಗಳನ್ನು ಮಾಡಬಾರದು. ಬುದ್ಧಿಯ ಮೂಲಕ ನಿರ್ಣ ಯಗಳನ್ನು ತೆಗೆದುಕೊಳ್ಳಬೇಕು. ಸಂಸ್ಕಾರ ಉತ್ತಮ ಪಡಿಸಿಕೊಳ್ಳಬೇಕು ಎಂದವರು ಕಿವಿಮಾತು ಹೇಳಿದರು.
ಸರ್ಕಾರದಲ್ಲಿ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳು ಇರುತ್ತವೆ. ಅದೇ ರೀತಿ ಆತ್ಮದ ವಿಷಯದಲ್ಲೂ ಮೂರು ಅಂಗಗಳು ಇರುತ್ತವೆ. ಹಿಂದಿನ ಜನ್ಮಗಳಲ್ಲಿ ಮಾಡಿದ ಹಾಗೂ ಈ ಜನ್ಮದಲ್ಲಿ ಮಾಡಿದ ಕರ್ಮಗಳು ಸೇರಿಕೊಂಡು ಸಂಸ್ಕಾರವಾಗುತ್ತವೆ. ಇದನ್ನು ಶಾಸಕಾಂಗ ಎಂದು ಬಣ್ಣಿಸಬಹುದು. ಈ ಸಂಸ್ಕಾರಗಳಿಂದ ಸಂಕಲ್ಪಗಳು ಉತ್ಪತ್ತಿಯಾಗುತ್ತವೆ. ಇದನ್ನೇ ಕಾರ್ಯಾಂಗ ಎನ್ನಬಹುದು. ಈ ಸಂಕಲ್ಪಗಳ ಸರಿ ಹಾಗೂ ತಪ್ಪುಗಳನ್ನು ನಿರ್ಣಯಿಸುವ ಬುದ್ಧಿಯೇ ನ್ಯಾಯಾಂಗದ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂದವರು ವಿಶ್ಲೇಷಿಸಿದರು.
ಈಶ್ವರೀಯ ವಿಶ್ವವಿದ್ಯಾಲಯದ ದಾವಣಗೆರೆ ಶಾಖೆಯ ಪ್ರಧಾನ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ನೇತೃತ್ವದಲ್ಲಿ ಸಂಸ್ಥೆಯ ವಿದ್ಯಾನಗರ ಶಾಖೆ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಗೀತಾಜಿ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.
ನೇರ ಪ್ರಸಾರ : ಸುದೀರ್ಘ ಒಂದು ತಿಂಗಳ ಕಾಲ ಪ್ರತಿದಿನ ಸಂಜೆ 6.30 ರಿಂದ 7.30ರವರೆಗೆ 1 ಗಂಟೆ ಸಮಯ ನಡೆಯುವ ಈ ಪ್ರವಚನವನ್ನು ನೇರ ಪ್ರಸಾರ ವೀಕ್ಷಿಸಲು ಯು ಟ್ಯೂಬ್ ಚಾನಲ್ಲಾದ ರಾಜಯೋಗ ಟಿವಿ ಕನ್ನಡದಲ್ಲಿ (youtube/rajayogatvkannada) ವೀಕ್ಷಿಸಬಹುದು.