ದಾವಣಗೆರೆ, ಡಿ. 17 – ಪೊಲೀಸರು ಪ್ರಕರಣಗಳ ತನಿಖೆಗೆ ಅಗತ್ಯವಾದ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳುವುದರಿಂದ ಅದು ಪೊಲೀಸರಿಗಷ್ಟೇ ಅಲ್ಲದೇ ನ್ಯಾಯಾಧೀಶರಿಂದ ಹಿಡಿದು ಸಂತ್ರಸ್ತವರೆಗೆ ನೆರವಾಗುತ್ತದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ 2ನೇ ಹೆಚ್ಚುವರಿ ನ್ಯಾಯಾಧೀಶ ಆರ್.ಎನ್. ಪ್ರವೀಣ್ ಕುಮಾರ್ ತಿಳಿಸಿದರು.
ಜಿಲ್ಲಾ ಪೊಲೀಸ್ ಸಭಾಂಗಣದಲ್ಲಿ ಆಯೋಜಿಸ ಲಾಗಿದ್ದ ಪೂರ್ವ ವಲಯ ಪೊಲೀಸ್ ಕರ್ತವ್ಯ ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೊಲೀಸರ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ 18 ವಿವಿಧ ಸ್ಪರ್ಧೆ ಗಳನ್ನು ಆಯೋಜಿಸಲಾಗಿದೆ. ಇದರಿಂದ ಪೊಲೀಸರ ತನಿಖಾ ಸಾಮರ್ಥ್ಯ ಹೆಚ್ಚಾಗ ಲಿದೆ. ಇದು ಸಾರ್ವಜನಿಕ ಅಭಿಯೋ ಜಕರು ಹಾಗೂ ನ್ಯಾಯಾಧೀಶರಿಗೆ ನೆರವಾಗುತ್ತದೆ. ಇದರಿಂದ ಸಂತ್ರಸ್ತರಿಗೂ ನೆರವಾದಂತಾಗುತ್ತದೆ ಎಂದರು.
ಅನುಮಾನಕ್ಕೆ ಎಡೆಯಿಲ್ಲದಂತೆ ಆರೋಪ ಸಾಬೀತು ಪಡಿಸಿದಾಗ ಮಾತ್ರ ಶಿಕ್ಷೆ ವಿಧಿಸಲು ಸಾಧ್ಯ. ತನಿಖಾ ಹಂತದಲ್ಲಿ ಆಗುವ ಲೋಪಗಳು ಆರೋಪಿಯ ಪರವಾಗಿ ಬಳಕೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳ ಮೇಲೆ ಹೆಚ್ಚಿನ ಹೊಣೆ ಇದೆ ಎಂದು ಹೇಳಿದರು.
ತನಿಖಾಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನು ಸಿದ್ಧಪ ಡಿಸಿಕೊಳ್ಳಬೇಕು. ನಿಗದಿತ ಅವಧಿಯಲ್ಲಿ ತನಿಖೆ ಪೂರ್ಣಗೊಳಿಸಬೇಕು. ಅಗತ್ಯ ವಾದಲ್ಲಿ ಹೆಚ್ಚಿನ ಕೌಶಲ್ಯ ಹೊಂದಿರುವ ಇತರೆ ಪೊಲೀಸ್ ಅಧಿಕಾರಿಗಳ ನೆರವು ಪಡೆಯಬೇಕು ಎಂದವರು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಪೊಲೀಸರು ಅಪರಾಧಿಕ ಪ್ರಕರಣಗಳನ್ನು ತನಿಖೆ ಮಾಡಿದರಷ್ಟೇ ಸಾಲದು. ಪ್ರಕರಣಗಳನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸಿದಾಗ ಮಾತ್ರ ಸಂತ್ರಸ್ತರಿಗೆ ನ್ಯಾಯ ಸಿಗಲು ಸಾಧ್ಯ. ತನಿಖಾ ಸಂದರ್ಭದಲ್ಲಿ ಮೂಲ ವಿಷಯಗಳಲ್ಲೇ ತಪ್ಪಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಒಂದು ಲೋಪ ಖುಲಾಸೆಗೆ ಕಾರಣವಾಗಬಹುದೇ?
ಹಲವು ಸಾಕ್ಷಿಗಳು ಅಪರಾಧ ಸಾಬೀತು ಪಡಿಸುವಂತಿದ್ದರೂ ಸಹ, ಒಂದು ಲೋಪದ ಕಾರಣದಿಂದ ಆರೋಪಿಯನ್ನು ಖುಲಾಸೆ ಮಾಡಬಹುದೇ? ಈ ರೀತಿಯ ಪ್ರಶ್ನೆ ಹುಟ್ಟು ಹಾಕುವ ಒಂದು ಪ್ರಕರಣ ಸುಪ್ರೀಂ ಕೋರ್ಟ್ವರೆಗೂ ತಲುಪಿತ್ತು. ನ್ಯಾಯಾಧೀಶರ ಕೆಲಸ ಸಂತ್ರಸ್ತರಿಗೆ ನ್ಯಾಯ ಕೊಡಿಸುವುದೇ ಹೊರತು, ತನಿಖಾಧಿಕಾರಿಯಿಂದ ಆದ ತಪ್ಪುಗಳನ್ನು ಹುಡುಕುವುದಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿತ್ತು.
ಈ ಪ್ರಕರಣವನ್ನು ತಿಳಿಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ 2ನೇ ಹೆಚ್ಚುವರಿ ನ್ಯಾಯಾಧೀಶ ಆರ್.ಎನ್. ಪ್ರವೀಣ್ ಕುಮಾರ್, ಹತ್ಯೆ ಪ್ರಕರಣವೊಂದರಲ್ಲಿ ಪ್ರತ್ಯಕ್ಷದರ್ಶಿಗಳೂ ಸೇರಿದಂತೆ ಹಲವು ಸಾಕ್ಷಿಗಳು ಆರೋಪಿಗೆ ವಿರುದ್ಧವಾಗಿದ್ದವು. ಆದರೆ, ತನಿಖಾಧಿಕಾರಿಗಳು ಎಸಗಿದ ಲೋಪವೊಂದರ ಕಾರಣದಿಂದ ವೈದ್ಯರ ಸಾಕ್ಷಿ ಆರೋಪಿಗೆ ಅನುಕೂಲವಾಗುವಂತಿತ್ತು. ಈ ಅಂಶ ಪರಿಗಣಿಸಿ ಜಿಲ್ಲಾ ನ್ಯಾಯಾಲಯ ಹಾಗೂ ಹೈಕೋರ್ಟ್ಗಳು ಆರೋಪಿ ಪರ ತೀರ್ಪು ನೀಡಿದ್ದವು ಎಂದರು.
ಆದರೆ, ಇದೇ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ನ್ಯಾಯಾಧೀಶರ ಕೆಲಸ ಪ್ರಕರಣದ ತನಿಖೆಯಲ್ಲಿನ ಲೋಪಗಳನ್ನು ಹುಡುಕುವುದಲ್ಲ. ನ್ಯಾಯಾಧೀಶರು ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ತಿಳಿಸಿತ್ತು. ಹಾಗೂ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ವಿಧಿಸಿತ್ತು ಎಂದು ನ್ಯಾಯಾಧೀಶ ಪ್ರವೀಣ್ ಕುಮಾರ್ ಹೇಳಿದರು.
ಕೂದಲೂ ಸಾಕ್ಷಿ ಆಗಬಹುದು
ವಿಧಿ ವಿಜ್ಞಾನ ವಲಯ ಈಗ ಸಾಕಷ್ಟು ಪ್ರಗತಿ ಹೊಂದಿದೆ ಹಾಗೂ ಪೊಲೀಸರಿಗೆ ಹೆಚ್ಚು ಸುಲಭವಾಗಿ ಲಭ್ಯವಾಗುತ್ತಿದೆ. ಈ ತಂತ್ರಜ್ಞಾನವನ್ನು ಪೊಲೀಸರು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಎಸ್ಪಿ ಉಮಾ ಪ್ರಶಾಂತ್ ಹೇಳಿದರು.
ಇತ್ತೀಚೆಗೆ ಸಂಪೂರ್ಣ ಸುಟ್ಟು ಹೋದ ಮೃತದೇಹವೊಂದು ಪತ್ತೆಯಾಗಿತ್ತು. ಮೃತದೇಹ ಗುರುತಿಸುವುದು ಕಷ್ಟವಾಗಿತ್ತು. ಆದರೆ, ಸೂಕ್ಷ್ಮವಾಗಿ ಶೋಧಿಸಿದಾಗ ಮೃತರ ಕೆಲ ಕೂದಲುಗಳು ದೊರೆತವು. ಇದನ್ನು ಡಿ.ಎನ್.ಎ. ಪರೀಕ್ಷೆಗೆ ಒಳಪಡಿಸಿದಾಗ ಮೃತರ ಗುರುತು ಪತ್ತೆ ಮಾಡಲು ಸಾಧ್ಯವಾಯಿತು. ವಿಧಿ ವಿಜ್ಞಾನ ಸಾಕ್ಷಿಗಳು ಹಾಗೂ ದಾಖಲೆಗಳ ಆಧಾರದ ಮೇಲೆ ಹಲವಾರು ಪ್ರಕರ ಣಗಳು ಇತ್ಯರ್ಥವಾಗುತ್ತಿವೆ ಎಂದವರು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗಿವೆ. ಸೈಬರ್ ವಲಯದ ಬಗ್ಗೆಯೂ ಹೆಚ್ಚಿನ ತಿಳುವಳಿಕೆ ಹೊಂದಬೇಕು. ವಿಧಿ ವಿಜ್ಞಾನ ವಲಯದ ಕಾರ್ಯನಿರ್ವಹಣೆ, ಶ್ವಾನ ದಳದ ಕಾರ್ಯನಿರ್ವಹಣೆಯ ಬಗ್ಗೆಯೂ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಿವೈಎಸ್ಪಿ ಹಾಗೂ ಕರ್ತವ್ಯ ಕೂಟದ ನೋಡಲ್ ಅಧಿಕಾರಿ ಎ.ಕೆ. ರುದ್ರೇಶ್, ಪೂರ್ವ ವಲಯದ ನಾಲ್ಕು ಜಿಲ್ಲೆಗಳ ಪೊಲೀಸರು ಕರ್ತವ್ಯ ಕೂಟದಲ್ಲಿ ಭಾಗಿಯಾಗಿದ್ದಾರೆ. 2016ರಲ್ಲಿ ಕರ್ತವ್ಯ ಕೂಟ ಆರಂಭಿಸಲಾಗಿತ್ತು. ಈಗ ಐದನೇ ಕರ್ತವ್ಯ ಕೂಟ ನಡೆಯುತ್ತಿದೆ. ಜಿಲ್ಲಾ ಮಟ್ಟದಿಂದ ಹಿಡಿದು ರಾಷ್ಟ್ರಮಟ್ಟದವರೆಗೆ ಪೊಲೀಸ್ ಕರ್ತವ್ಯ ಕೂಟಗಳು ನಡೆಯುತ್ತವೆ ಎಂದು ಹೇಳಿದರು.
ವೇದಿಕೆಯ ಮೇಲೆ ದೊಡ್ಡಬಾತಿಯ ಆರ್.ಎಫ್.ಎಸ್.ಎಲ್. ಉಪ ನಿರ್ದೇಶಕಿ ಡಾ. ಛಾಯಾ ಕುಮಾರಿ ಉಪಸ್ಥಿತರಿದ್ದರು.
ಬೆಸ್ಕಾಂ ಜಾಗೃತ ದಳ ಠಾಣೆಯ ಸಿ.ಪಿ.ಸಿ. ಸಂಗೇನಹಳ್ಳಿ ದೇವರಾಜ ನಿರೂಪಿಸಿದರೆ, ಪೊಲೀಸ್ ಉಪಾಧೀಕ್ಷಕ ಪಿ.ಬಿ. ಪ್ರಕಾಶ್ ವಂದಿಸಿದರು.