ಹರಿಹರ, ಡಿ.17- ದಾವಣಗೆರೆಯಲ್ಲಿ ಇದೇ ದಿನಾಂಕ 23, 24 ರಂದು ನಡೆಯುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಅಧಿವೇಶನದಲ್ಲಿ ಸಮಸ್ತ ಪಂಚಮಸಾಲಿ ಸಮಾಜದವರು ಹಾಗೂ ಲಿಂಗಾಯತ ಸಮಾಜದ ಎಲ್ಲಾ ಒಳಪಂಗಡಗಳ ಸಮಾಜದವರು `ನಾವೆಲ್ಲರೂ ಒಂದೇ’ ಎಂಬ ಭಾವದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಧಿವೇಶನವನ್ನು ಯಶಸ್ವಿಯಾಗಿಸುವಂತೆ ಪಂಚಮಸಾಲಿ ಗುರುಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮೀಜಿ ಕರೆ ನೀಡಿದ್ದಾರೆ.
ನಗರದ ಹೊರವಲಯದ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀಗಳು ಮಾತನಾಡಿದರು.
ಈ ಅಧಿವೇಶನವು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಶಾಮನೂರು ಶಿವಶಂಕ್ರಪ್ಪನವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದು, ಧಾರ್ಮಿಕ, ಶೈಕ್ಷಣಿಕ, ಅಧ್ಯಾತ್ಮಿಕ, ಸಾಹಿತ್ಯಿಕ ಸೇರಿದಂತೆ ಅನೇಕ ಗೋಷ್ಠಿಗಳು, ಹಲವಾರು ಚಿಂತನ-ಮಂಥನ ಏರ್ಪಾಡಾಗಿವೆ. ನಾಡಿನ ಎಲ್ಲಾ ವೀರಶೈವ ಲಿಂಗಾಯತ ಮಠಾಧೀಶರು, ವಿವಿಧ ಪೀಠದ ಜಗದ್ಗುರುಗಳು, ನಾವೆಲ್ಲರೂ ಒಂದಾಗಬೇಕು, ಮನಸ್ಸುಗಳು ಒಂದಾಗಬೇಕು. ಆ ಮೂಲಕ ನಾವು ಮೇಲು-ಕೀಳು ಎಂಬ ಭಾವನೆ ಬಿಟ್ಟು ನಾವೆಲ್ಲರೂ ಒಂದು ಎಂಬ ಭಾವ ಬರಬೇಕು ಎಂದು, ಒಂದು ಸೇತುವೆಯ ರೂಪದಲ್ಲಿ ವೀರಶೈವ ಮಹಾಸಭಾ ಕಾರ್ಯವನ್ನು ಮಾಡುತ್ತಾ ಸಾಗಿದೆ. ಅದಕ್ಕೆ ನಾವು ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತೇವೆ ಎಂದು ಹೇಳಿದರು.
ನಾಡಿನಾದ್ಯಂತ ಇರುವ ಪಂಚಮಸಾಲಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಜೊತೆಗೆ ಎಲ್ಲಾ ಒಳಪಂಗಡಗಳು, ನಾವೆಲ್ಲರೂ ಒಂದೇ ಎಂಬ ಭಾವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಸಮಾಜ ಎಂದು ಬಂದಾಗ ಅಖಂಡ ವೀರಶೈವ ಲಿಂಗಾಯತರು ಒಂದೇ ಎಂಬ ಭಾವದ ಅಡಿಯಲ್ಲಿ ಹೋದರೆ ಸಮುದಾಯಕ್ಕೆ ಮತ್ತು ಮುಂದೆ ಬರುವ ಮಕ್ಕಳಿಗೆ ನಾವೆಲ್ಲರೂ ಮಾರ್ಗದರ್ಶನ ಮಾಡುವ ಸಾಮರ್ಥ್ಯ ಬರುತ್ತದೆ ಎಂದು ಶ್ರೀಗಳು ಪ್ರತಿಪಾದಿಸಿದರು.
ಭಕ್ತರಿಗೆ ಅನ್ನ ದಾಸೋಹ, ವಸತಿ ವ್ಯವಸ್ಥೆ
ಮಹಾ ಅಧಿವೇಶನದಲ್ಲಿ ಪಾಲ್ಗೊಳುವ ಪಂಚಮಸಾಲಿ ಸೇರಿದಂತೆ, ಎಲ್ಲಾ ಒಳಪಂಗಡಗಳ ಭಕ್ತರಿಗೆ ಮಠದ ಆವರಣದಲ್ಲಿ ಎರಡು ದಿನ ಅನ್ನದಾಸೋಹ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪಂಚಮಸಾಲಿ ಗುರುಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮೀಜಿ ತಿಳಿಸಿದ್ದಾರೆ.
ಮಹಾ ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ಲಿಂಗಾಯತ ಸಮಾಜದ ಎಲ್ಲಾ ಒಳಪಂಗಡಗಳನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸುವಂತೆ ಮಾತನಾಡಲಾಗುತ್ತದೆ ಎಂದರು.
ಪಂಚಮಸಾಲಿ ಸಮಾಜದ 2 ಎ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ, ಮಹಾ ಅಧಿವೇಶನದಲ್ಲಿ ವಿಷಯ ಪ್ರಸ್ತಾಪ ಮಾಡುತ್ತೀರಾ? ಎಂಬ ಮಾತಿಗೆ ಪಂಚಮಸಾಲಿ 2 ಎ ಮೀಸಲಾತಿ ವಿಚಾರಗಳು ನ್ಯಾಯಾಲಯದ ಮೆಟ್ಟಿಲು ಏರಿದ್ದು, ಅದಕ್ಕಾಗಿ ನ್ಯಾಯಾಲಯದಲ್ಲಿ ಕಾನೂನಾತ್ಮಕ ಹೋರಾಟ ಮಾಡಿದರೆ ಮಾತ್ರ ನ್ಯಾಯ ಸಿಗುತ್ತದೆ. ಸರ್ಕಾರ ಅದನ್ನು ಮುಚ್ಚಳಿಕೆಯಲ್ಲಿ ಬರೆದು ಕೊಟ್ಟಿದೆ.
ಸಿ.ಎಂ. ಕಾರ್ಯದರ್ಶಿಗಳ ಜೊತೆಗೆ ನಾನು ಚರ್ಚೆ ಕೂಡ ಮಾಡಿರುವೆ. ಹಿಂದೆ ಹೋರಾಟಕ್ಕೆ ಫಲವಾಗಿ ಸರ್ಕಾರ 2 ಸಿ 2 ಡಿ ಕೊಟ್ಟು ಬರೀ ಘೋಷಣೆ ಮಾಡಿತ್ತು. ಆದರೆ ಪಕ್ರಿಯೆಗಳು ಆಗಲಿಲ್ಲ. ಹಾಗಾಗಿ ಕಾನೂನಾತ್ಮಕ ಹೋರಾಟ ಅನಿವಾರ್ಯ. ಈಗ ಅದಕ್ಕಾಗಿ ವಕೀಲರು ಇದ್ದಾರೆ. ಅವರು ಅದನ್ನು ನೋಡಿಕೊಳ್ಳುತ್ತಾರೆ. ನಾವು ಸಮಾವೇಶದಲ್ಲಿ ಈ ವಿಚಾರಗಳ ಬಗ್ಗೆ ಮಾತನಾಡೊಲ್ಲ.
ಪಂಚಮಸಾಲಿ ಗುರುಪೀಠಾಧ್ಯಕ್ಷರಾದ ಇನ್ನೊಬ್ಬ ಜಗದ್ಗುರುಗಳು ರಸ್ತೆ ಮೇಲೆ ಲಿಂಗ ಪೂಜೆ ಮಾಡಿ ಹೋರಾಟ ಮಾಡುತ್ತಿದ್ದಾರೆ. ನೀವು ಯಾಕೆ ಆ ರೀತಿಯ ಹೋರಾಟಕ್ಕೆ ಮುಂದಾಗುತ್ತಿಲ್ಲ ಎಂಬುದಕ್ಕೆ, ಎಲ್ಲಾ ಮನುಷ್ಯನ ಮನಸ್ಥಿತಿ ಒಂದೇ ತರಹದಲ್ಲಿ ಇರುವುದಿಲ್ಲ. ಹಾಗೆ ನಾವು ನಮ್ಮ ಸಮುದಾಯದ ಜನರಿಗೆ ನ್ಯಾಯವನ್ನು ಕೊಡಿಸಲು ಕಾನೂನು ಹೋರಾಟ ನಡೆಸಿರುವುದಾಗಿ ಶ್ರೀ ವಚನಾನಂದ ಮಹಾಸ್ವಾಮಿಗಳು ಹೇಳಿದರು.
ಪಂಚಮಸಾಲಿ ಗುರುಪೀಠದ ಆಡಳಿತ ಅಧಿಕಾರಿ ಡಾ. ರಾಜಕುಮಾರ್ ಮಾತನಾಡಿ, ಲಿಂಗಾಯತ ಧರ್ಮವನ್ನು ಕಟ್ಟುವಲ್ಲಿ ಅನೇಕರು ತಮ್ಮದೇ ಆದ ಕೊಡುಗೆಯನ್ನು ಕೊಟ್ಟಿದ್ದಾರೆ. ಭೀಮಣ್ಣ ಖಂಡ್ರೆ ಅವರು ಸಮಾಜದ ಒಳಿತಿಗಾಗಿ ದೊಡ್ಡ ಮಟ್ಟದಲ್ಲಿ ಆಂದೋಲನವನ್ನು ಮಾಡಿದ್ದಾರೆ. ಒಕ್ಕೂಟ ವ್ಯವಸ್ಥೆಯ ಎಲ್ಲಾ ಒಳಪಂಗಡಗಳಲ್ಲಿ ಪಂಚಮಸಾಲಿ ಸಮುದಾಯ ತಾಯಿ ಸ್ಥಾನವನ್ನು ಪಡೆದಿದೆ ಎಂದರು.
ಜಾತಿ ಗಣತಿ, ವಿಚಾರದಲ್ಲಿ ಪಂಚಮಸಾಲಿ ಸಮುದಾಯಕ್ಕೆ ಬಹಳ ದೊಡ್ಡ ಮಟ್ಟದಲ್ಲಿ ತಾರತಮ್ಯ ನಡೆಯುತ್ತಿದೆ. ಜೊತೆಗೆ ಹಿಂದುಳಿದ ಆಯೋಗ ಕೊಟ್ಟಿರುವ ವರದಿ ವೈಜ್ಞಾನಿಕವಾಗಿ ಆಗಿಲ್ಲ, ಸರ್ಕಾರ ಇದನ್ನು ಒಪ್ಪದೇ ಕಾನೂನಾತ್ಮಕವಾಗಿ ಮಾಡಬೇಕು ಎಂದು ಅವರು ಹೇಳಿದರು.
ಧರ್ಮದರ್ಶಿ ಬಿ.ಸಿ. ಉಮಾಪತಿ ಮಾತನಾಡಿದರು. ಈ ಸಂದರ್ಭದಲ್ಲಿ ಪಂಚಮಸಾಲಿ ಗುರುಪೀಠದ ಧರ್ಮದರ್ಶಿ ಚಂದ್ರಶೇಖರ್ ಪೂಜಾರ್, ದೊಡ್ಡಪ್ಪ, ಬಾದಾಮಿ ಜಯಣ್ಣ, ಉಚ್ಚಂಗಿದುರ್ಗ ಬಸವರಾಜ್, ಕರಿಬಸಪ್ಪ ಗುತ್ತೂರು, ಪುರುವಂತರ ಮಂಜುನಾಥ್, ಬೆಂಡಿಗೇರಿ ಅಶೋಕ, ಶಿವಪ್ಪ ಇತರರು ಹಾಜರಿದ್ದರು.