ದಾವಣಗೆರೆ, ಡಿ. 17- ಉಪ್ಪಾರ ಸಮಾಜಕ್ಕೆ ಕುಲಶಾಸ್ತ್ರ ಅಧ್ಯಯನ ವರದಿ ಆಧರಿಸಿ ಸೂಕ್ತ ಮತ್ತು ನ್ಯಾಯೋಚಿತ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಹೊಸದುರ್ಗ ಭಗೀರಥ ಪೀಠದ ಡಾ. ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಶ್ರೀ ಜಯದೇವ ಮುರುಘ ರಾಜೇಂದ್ರ ವೃತ್ತದಲ್ಲಿ ಇಂದು ಹಮ್ಮಿಕೊಂಡಿದ್ದ ಶ್ರೀ ಭಗೀರಥ ಭಾರತ ಜನಕಲ್ಯಾಣ ರಥಯಾತ್ರೆಯ ಬಹಿರಂಗ ಸಭೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಉಪ್ಪಾರ ಸಮಾಜಕ್ಕೆ ಮೀಸಲಾತಿ ಕಲ್ಪಿಸಬೇಕೆಂದು ಆಗ್ರಹಿಸಿ ನಡೆಸಿದ ಹೋರಾಟದ ಪರಿಣಾಮ ಸರ್ಕಾರ ಕುಲಶಾಸ್ತ್ರೀಯ ಅಧ್ಯಯನ ನಡೆಸುತ್ತಿದ್ದು, ಮೊದಲ ಹಂತದ ವರದಿ ಪಡೆದಿದೆ. ಡಿಸೆಂಬರ್ ಅಂತ್ಯದೊಳಗೆ ಅಂತಿಮ ವರದಿಯನ್ನು ಪಡೆದು, ಸಮಗ್ರವಾಗಿ ಚರ್ಚಿಸಿ, ಸೂಕ್ತ ಮೀಸಲಾತಿ ಕಲ್ಪಿಸಲು ಕೇಂದ್ರ ಶಿಫಾರಸ್ಸು ಮಾಡಬೇಕೆಂದು ಶ್ರೀಗಳು ಆಗ್ರಹಿಸಿದರು.
ಸತ್ಯಹರಿಶ್ಚಂದ್ರ, ಶ್ರೀರಾಮಚಂದ್ರ, ಸಗರ ಮತ್ತೆ ಕೆಲವು ಮಹಾಪುರುಷರು ಉಪ್ಪಾರ ಸಮಾಜದವರೇ ಆಗಿದ್ದಾರೆ. ಉಪ್ಪು ತಯಾರಿಸಿ, ಮಾರಾಟ ಮಾಡುವ ಮೂಲಕ ಸರ್ಕಾರಕ್ಕೆ ತೆರಿಗೆ ಕಟ್ಟುವಂತಹ ಶ್ರೀಮಂತರು ಸಮಾಜದಲ್ಲಿದ್ದರು ಎಂದು ಹೇಳಿದರು.
ಬ್ರಿಟಿಷರು ಗುಡಿ ಕೈಗಾರಿಕೆಗಳನ್ನು ನಾಶ ಪಡಿಸಿದ ಮೇಲೆ ಉಪ್ಪು ತಯಾರಿಕೆ ಸ್ಥಗಿತ ಗೊಂಡಿದೆ. ಪ್ರಸ್ತುತ ಉಪ್ಪಾರ ಸಮಾಜ ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದೆ ಎಂದರು.
ಉಪ್ಪಾರ ಸಮಾಜ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಪ್ರಗತಿ ಹೊಂದಲು ಮೀಸಲಾತಿ ಅವಶ್ಯವಿದೆ. ಸರ್ಕಾರ ಕುಲಶಾಸ್ತ್ರ ಅಧ್ಯಯನದ ವರದಿ ಸ್ವೀಕರಿಸಿ, ಚರ್ಚಿಸಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಮೀಸಲಾತಿ ಸಿಗುವವರೆಗೂ ಹೋರಾಟ, ಬೃಹತ್ ಪ್ರತಿಭಟನಾ ಸಮಾವೇಶಗಳನ್ನು ಮುಂದುವರೆಸಲಾಗುವುದು ಎಂದು ಹೇಳಿದರು.
ಉಪ್ಪಾರ ಸಮಾಜದವರು ಅನ್ಯ ಸಮಾಜದ ಮೀಸಲಾತಿ ಸೌಲಭ್ಯ ಕಬಳಿಸಲು ಹೋಗುವ ಮಾತೇ ಇಲ್ಲ. ಮುಂದಿನ ಪೀಳಿಗೆಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಮುಂದೆ ಬರಲು ಅನುಕೂಲವಾಗುವಂತೆ ಸರ್ಕಾರ ಉಪ್ಪಾರ ಸಮಾಜಕ್ಕೆ ಸರಿಯಾದ ಮೀಸಲಾತಿ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಮೀಸಲಾತಿ ನೀಡುವ ಜೊತೆಗೆ ಸಮಾಜದ ಭಗೀರಥ ಮಹರ್ಷಿಗಳ ಪ್ರತಿಮೆ ಸ್ಥಾಪಿಸಬೇಕು. ಋಷಿಕೇಶ, ಬದರಿನಾಥ ಮಾದರಿಯಲ್ಲಿ ಗಂಗಾನದಿ ತೀರದಲ್ಲಿ ಭಗೀರಥ ಆಶ್ರಮ ಪ್ರಾರಂಭಿಸಬೇಕು. ರಾಷ್ಟ್ರಮಟ್ಟದಲ್ಲೂ ಭಗೀರಥ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕೆಂದರು.
ಎರಡು ಕೋಟಿ ರೂ. ಅನುದಾನ ನೀಡಬೇಕು. ದೇಶದೆಲ್ಲೆಡೆ ಏಕಕಾಲಕ್ಕೆ ಭಗೀರಥ ಮಹರ್ಷಿಗಳ ಜಯಂತಿ ಆಚರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಫೆ. 29 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ 10 ಲಕ್ಷ ಜನರ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ಶ್ರೀಗಳು ಹೇಳಿದರು.
ಮತ್ತಿ ಹನುಮಂತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ್ಪಾರ ಸಂಘದ ರಾಜ್ಯ ಗೌರವಾಧ್ಯಕ್ಷ ಎಸ್. ಬಸವರಾಜಪ್ಪ, ಹೆಚ್. ತಿಪ್ಪಣ್ಣ, ಪಾಲಿಕೆ ಮಾಜಿ ಮೇಯರ್ ಉಮಾ ಪ್ರಕಾಶ್, ಮಾಜಿ ಉಪ ಮೇಯರ್ ಮಂಜಮ್ಮ, ದೂಡಾ ಮಾಜಿ ಅಧ್ಯಕ್ಷ ಎ.ವೈ. ಪ್ರಕಾಶ್, ಹನುಮಂತಪ್ಪ, ಡಾ.ನಾಗರಾಜ್, ಅರ್ಜುನ್ , ಶ್ರೀನಿವಾಸಶೆಟ್ಟಿ, ಲೋಕೇಶ್, ದೊಡ್ಡಬಾತಿ ಬಿ.ಜಿ. ರೇವಣಸಿದ್ಧಪ್ಪ, ಡಾ. ಉಮೇಶ್ ಬಾಬು ಮತ್ತಿತರರು ಉಪಸ್ಥಿತರಿದ್ದರು.