ಸೃಜನಶೀಲ ಕಲಾವಿದ ಚಂದ್ರಶೇಖರ ಸಂಗಾ

ಸೃಜನಶೀಲ ಕಲಾವಿದ ಚಂದ್ರಶೇಖರ ಸಂಗಾ

ಸೃಜನಶೀಲ ಕಲಾವಿದ ಚಂದ್ರಶೇಖರ ಸಂಗಾ - Janathavaniಗಾಳಿಯಲ್ಲಿ ಕೈ ಆಡಿಸಿದಂತೆ ಬಿಳಿ ಹಾಳೆಯ ಮೇಲೆ ಇವರು ಕೈ ಆಡಿಸಿದರೆಂದರೆ, ಕ್ಷಣಾರ್ಧ ದಲ್ಲೊಂದು ಅಂದದ ಚಿತ್ರ ರೂಪುಗೊಳ್ಳುತ್ತದೆ.

ಕಲ್ಲು, ಮಣ್ಣು, ಉದುರಿ ಬಿದ್ದ ಮರದ ಎಲೆಗಳು ಹೀಗೆ ಅನುಪಯುಕ್ತ ವಸ್ತುಗಳಿಂದ ಸುಂದರ ಕಲಾಕೃತಿಯೊಂದನ್ನು ರೂಪಿಸುವ ಜಾದುಗಾರ, ಕಟ್ಟಡದ ಖಾಲಿ ಗೋಡೆಗಳಿಗೆ ಜೀವ ತುಂಬುವ ಸೃಜನಶೀಲ ಕಲಾವಿದ ಇವರು. 

ಹೌದು, ಹೆಸರು ಚಂದ್ರಶೇಖರ ಎಸ್. ಸಂಗಾ. ದಾವಣಗೆರೆಯಲ್ಲಿನ ಹಲವಾರು ಕಟ್ಟಡಗಳು ಇವರ ಹೆಸರು ಹೇಳುತ್ತವೆ. ದಾವಣಗೆರೆ ನಗರದ ಸೌಂದರ್ಯಕ್ಕೆ ಇವರ ಕೊಡುಗೆ ಅಪಾರವೆಂದರೆ ತಪ್ಪಾಗದು.

ಸಾಂಸ್ಕೃತಿಕ ಕ್ಷೇತ್ರದಲ್ಲಿ ಲಲಿತ ಕಲೆಗಳಲ್ಲೊಂದುದಾದ  ಚಿತ್ರ ಕಲೆ ತನ್ನದೇ ಆದ ಅಸ್ತಿತ್ವ ಉಳಿಸಿಕೊಂಡು ಬಂದಿದೆ. ಭಾರತೀಯ ಸಂಸ್ಕೃತಿಯ ಪರಂಪರೆಯ ಪ್ರತಿಬಿಂಬವೂ ಹೌದು ಈ ಚಿತ್ರಕಲೆ.

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ವಿದ್ಯಾರ್ಥಿ ದೆಸೆ ಯಲ್ಲಿಯೇ ಇಂತಹ ಕಲಾವಂತಿಕೆಯನ್ನು ಮೈಗೂಡಿಸಿಕೊಂಡಿದ್ದ ಚಂದ್ರಶೇಖರ ಸಂಗಾ,  ವಿದ್ಯಾರ್ಥಿ ದೆಸೆಯಲ್ಲಿಯೇ ಚಿತ್ರರಚನೆ, ರಂಗೋಲಿ ಹಾಕುವುದರಲ್ಲಿ  ಸಿದ್ಧ ಹಸ್ತರಾಗಿ ಹಲವಾರು ಬಹುಮಾನಗಳನ್ನು ಮುಡಿಗೇರಿಸಿಕೊಂಡಿದ್ದರು. ನಗರದ ಹಲವಾರು ಕಟ್ಟಡಗಳಲ್ಲಿ ಇವರ ಕೈಚಳಕದ ಉಬ್ಬು ಚಿತ್ರಗಳು ಗಮನ ಸೆಳೆಯುತ್ತಿವೆ.

ದಾವಣಗೆರೆ ಬಕ್ಕೇಶ್ವರ ಕಲ್ಯಾಣ ಮಂಟಪದಲ್ಲಿನ ಶ್ರೀ ಬಕ್ಕೇಶ್ವರ ಸ್ವಾಮೀಜಿ ಅವರ ಕಲಾಕೃತಿ,  ದೇವರಾಜ ಅರಸು ಬಡಾವಣೆಯಲ್ಲಿನ ಶಿವ ಪಾರ್ವತಿ ಕಲ್ಯಾಣ ಮಂಟಪದಲ್ಲಿ 30×10 ಅಡಿ ಅಳತೆಯಲ್ಲಿನ ಗಿರಿಜಾ ಕಲ್ಯಾಣ ದೃಶ್ಯ ಮನ ಸೆಳೆಯುತ್ತದೆ. ಇನ್ನು ಜಿಲ್ಲಾ ನ್ಯಾಯಾಲಯ ಭವನದಲ್ಲಿನ ನ್ಯಾಯ ದೇವತೆಯ ಶಿಲ್ಪ, ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನ ಗಾಂಧೀ ಪ್ರತಿಮೆ, ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಮದುವೆ ದಿಬ್ಬಣ ದೃಶ್ಯದ ಉಬ್ಬು ಶಿಲ್ಪಗಳು ಕಣ್ಣಿಗೆ ಮುದ ನೀಡುತ್ತವೆ. ಸರ್ಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳ ಕಟ್ಟಡಗಳ ಮೇಲೆ ಲೋಗೋ ಕಲಾಕೃತಿಗಳ ರಚನೆಕಾರರು ಇವರು.

ಇತ್ತೀಚೆಗೆ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಕುಟುಂಬದವರ ವಂಶ ವೃಕ್ಷದ ಉಬ್ಬು ಶಿಲ್ಪಗಳನ್ನು ರಚಿಸಿ ಕುಟುಂಬದವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸಾಧನೆಯ ಮೆಟ್ಟಿಲುಗಳು: ಸೃಜನಶೀಲ ಕಲಾವಿದ ಚಂದ್ರಶೇಖರ ಸಂಗಾ - Janathavani

ಚಂದ್ರಶೇಖರ ಎಸ್.ಸಂಗಾ ಅವರು ಜನಿಸಿದ್ದು  1965ರ ಜುಲೈ 20ರಂದು. ಡಿಪ್ಲೊಮಾ ಇನ್ ಫೈನ್ ಆರ್ಟ್ಸ್ (ಪೇಂಟಿಂಗ್) ನಲ್ಲಿ ಲಲಿತ ಕಲಾ ಮಹಾವಿದ್ಯಾಲಯದಲ್ಲಿ 1989ರಲ್ಲಿ 5ನೇ
ರಾಂಕ್ ಪಡೆದು, ಅದೇ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದರು. ನಂತರ ಉಪನ್ಯಾಸಕ ಹುದ್ದೆ ಬಿಟ್ಟು ಕಲೆಯನ್ನೇ ವೃತ್ತಿಯಾಗಿಸಿಕೊಂಡರು.

1992ರಲ್ಲಿ ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಏರ್ಪಡಿಸಿದ್ದ ಏಕ ವ್ಯಕ್ತಿ ಕಲಾ ಪ್ರದರ್ಶನ ನಡೆಸಿದ್ದರು. ನಂತರ 1993ರಲ್ಲಿ ಕಲಾ ಗುರು ಆರ್ಟ್ ಗ್ಯಾಲರಿಯಲ್ಲಿ, 2007ರಲ್ಲಿ ಬಿಲ್ಡ್ ಮ್ಯಾಟ್ ಹಾಗೂ 2008ರಲ್ಲಿ ಜಿಲ್ಲಾ ಶಿಶು ಕಲ್ಯಾಣ ಮಂಡಳಿ ರಜತ ಮಹೋತ್ಸವದಲ್ಲಿ ಏಕ ವ್ಯಕ್ತಿ ಚಿತ್ರ ಕಲಾ ಪ್ರದರ್ಶನ ನಡೆಸಿದ್ದಾರೆ. ಏಳು ಬಾರಿ ವಿವಿಧೆಡೆ ಸಮೂಹ ಕಲಾ ಪ್ರದರ್ಶನ ನಡೆಸಿರುವ ಇವರು `ಲಯ ಕಲಾ ಮನೆ’ ಗದಗ ಸಹಯೋಗದೊಂದಿಗೆ 60ಕ್ಕೂ ಹೆಚ್ಚು ಸಮೂಹ ಕಲಾ ಪ್ರದರ್ಶನ ನಡೆಸಿದ್ದಾರೆ. ಹಲವಾರು ಕಲಾ ಶಿಬಿರಗಳಲ್ಲೂ ಭಾಗವಹಿಸಿದ್ದಾರೆ.

1992ರಲ್ಲಿ ಮೈಸೂರು ದಸರಾ ಕಲಾ ಪ್ರದರ್ಶನದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಇವರಿಗೆ, ದಾವಣಗೆರೆ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ 2012ರಲ್ಲಿ ಕಲಾ ಕೇಸರಿ ಪ್ರಶಸ್ತಿ, ಜಿಲ್ಲಾಡಳಿತದಿಂದ 2013ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮೆಯಿಂದ 2016ರಲ್ಲಿ ಭಾರತ ಸೇವಾರತ್ನ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಸೃಜನಶೀಲ ಕಲಾವಿದ ಚಂದ್ರಶೇಖರ ಸಂಗಾ - Janathavani


ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ

error: Content is protected !!