ನಿರ್ದಿಗಂತ ರಂಗಪಯಣದ `ಗಾಯಗಳು’ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ್
ದಾವಣಗೆರೆ, ಆ. 17- ರಂಗ ಬಳಗ, ಅನ್ವೇಷಕರು ಆರ್ಟ್ಸ್ ಫೌಂಡೇಷನ್, ಎಸ್.ಎಸ್.ಕೇರ್ ಟ್ರಸ್ಟ್ ಆಯೋಜಿಸಿರುವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವ ವಿರುವ ನಿರ್ದಿಗಂತ ರಂಗಪಯಣ ಅಭಿನಯಿಸಿರುವ `ಗಾಯಗಳು’ ನಾಟಕ ಪ್ರದರ್ಶನ ಗುರುವಾರ ಸಂಜೆ ಬಿಐಇಟಿ ಕಾಲೇಜು ಆವರಣದಲ್ಲಿನ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಸಭಾಂಗಣದಲ್ಲಿ ನಡೆಯಿತು.
ಒಂದೂವರೆ ತಾಸಿನ ಈ ಪ್ರದರ್ಶನ ನೆರೆದಿದ್ದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು.
ಯುದ್ಧೋನ್ಮಾದದಲ್ಲಿ ನರಳುತ್ತಿರುವ, ದಲ್ಲಾಳಿಗಳ ಕೈಗಳಲ್ಲಿ ಸಿಲುಕಿದ ರಕ್ತದ ಕಲೆಗಳು, ಮನುಷ್ಯನನ್ನೇ ಭೇದಿಸಿ ಅಣಕಿಸುವ ವರ್ಣ ವ್ಯವಸ್ಥೆ, ಹಿಂಸೆಯ ಪರಿ ಣಾಮ, ದೇಶಾಭಿಮಾನ ಹಣದ ಹೆಸರಿನಲ್ಲಿ ಮಕ್ಕಳ ಬಲಿ, ಅಮಲಿನಲ್ಲಿ ವಾಸ್ತವ ಮರೆಮಾಚುವುದು, ಹುಸಿ ದೇಶಾಭಿ ಮಾನದ ಮುಖವಾಡ, ಮಾಸದ ದೇಶ ವಿಭಜನೆಯ ಕಲೆ, ಹಿಂಸೆ ಸಾಕಿ ನಾವೇ ಬಲಿಯಾಗುವ ಭೀಕರತೆಯ ಕ್ರೂರ ಸತ್ಯಗಳು, ಒಂದು ತಪ್ಪಿಗೆ ಪ್ರತಿ ತಪ್ಪನ್ನು ಸೃಜಿಸುವ ಕ್ರೂರ ಸತ್ಯಗಳಿಗೆ ಕನ್ನಡಿಯಾದ ಗಾಯಗಳು ನಾಟಕ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿತು.
ಆರಂಭದಲ್ಲಿ ನಾಟಕ ಪ್ರದರ್ಶನ ಉದ್ಘಾಟಿಸಿ, ನಾಟಕ ವೀಕ್ಷಿಸಿದ ನಂತರ ಮಾತನಾಡಿದ ಎಸ್.ಎಸ್.ಕೇರ್ ಟ್ರಸ್ಟ್ನ ಲೈಫ್ ಟ್ರಸ್ಟಿ ಡಾ.ಪ್ರಭಾ ಮಲ್ಲಿಕಾರ್ಜುನ್, ಪ್ರಸ್ತುತ ಸಮಸ್ಯೆಗಳಿಗೆ ಮುಲಾಮು ಹಚ್ಚುವಂತಹ ನಾಟಕ ಇದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಯಾವುದೇ ದೇಶದಲ್ಲಿ ಯುದ್ಧ ಅಥವಾ ಕೋಮು ಗಲಭೆಗಳು ಸಂಭವಿಸಿದಾಗ ಹೆಚ್ಚು ತೊಂದರೆಗೆ ಒಳಗಾಗುವುದು ಬಡ ಜನತೆ ಹಾಗೂ ಮಹಿಳೆಯರು. ರಾಜರು, ರಾಜಕಾರಣಿಗಳು, ಅಧಿಕಾರಸ್ಥರ ನೀತಿಗಳಿಂದ ಆಗುವ ಪರಿಣಾಮಗಳಿಗೆ ಜನಸಾಮಾನ್ಯರು ಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ ಎಂದು ಹೇಳಿದರು.
ಸೌಹಾರ್ದ, ಸಾಮರಸ್ಯ ಹಾಳು ಮಾಡುವ ಕೆಲಸ ಗಳು ನಿರಂತರವಾಗಿ ಸಾಗಿವೆ. ಈ ಎಲ್ಲಾ ಸಮಸ್ಯೆಗಳಿಗೆ ಈ ನಾಟಕ ಮುಲಾಮು ಹಚ್ಚುವಂತಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಮೊಬೈಲ್ ಲೋಕದಿಂದ ಹೊರ ಬಂದು ಈ ರೀತಿಯ ವಿಚಾರಗಳನ್ನು ಹೆಚ್ಚು ಅರ್ಥ ಮಾಡಿಕೊಳ್ಳಬೇಕು. ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಮಾತನಾಡಿ, ಸಮಾಜದ ಪರವಾದ, ಎಲ್ಲಾ ಜಾತಿ, ಧರ್ಮದ ಜನರನ್ನು ಕಟ್ಟುವಂತಹ ನಾಟಕಗಳನ್ನು ಹೆಚ್ಚು ಹೆಚ್ಚಾಗಿ ಪ್ರದರ್ಶನಗೊಳ್ಳಬೇಕು. ಇಂತಹ ನಾಟಕಗಳ ಆಯೋಜನೆಗೆ ಇಲಾಖೆಯಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
ಸಮಾಜದಲ್ಲಿ ಮನುಷ್ಯತ್ವ, ಮಾನವೀಯತೆ ಉಳಿಯಬೇಕು ಎಂಬುದನ್ನು ಸಾರುವ ನಾಟಕ ಇದಾಗಿದೆ. ಇಂತಹ ನಾಟಕಗಳು ಹೆಚ್ಚು ಹೆಚ್ಚು ಜನರನ್ನು ತಲುಪಲಿ ಎಂದು ಡಾ.ಪ್ರಭಾ ಆಶಯ ವ್ಯಕ್ತಪಡಿಸಿದರು. ಇದೇ ವೇಳೆ ನಾಟಕದ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು.
ಪತ್ರಕರ್ತೆ, ನಿರ್ದಿಗಂತ ನಿರ್ದೇಶಕಿ ಶ್ರೀಮತಿ ಪ್ರೀತಿ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಇಟಲಿಯಲ್ಲಿ ಆರಂಭವಾಗಿ, ಶ್ರೀರಂಗಪಟ್ಟಣದಲ್ಲಿ ಅಂತ್ಯಗೊಳ್ಳುವ ಈ ನಾಟಕವನ್ನು ವಿವಿಧ ನಾಟಕಗಳ ತುಣುಕು, ಕಲಾಪ್ರಕಾರಗಳಿಂದ ರಚಿಸಲಾಗಿದೆ. `ಜಗತ್ತಿಗೆ ಯುದ್ಧ ಬೇಡ, ಪ್ರೀತಿ’ ಬೇಕು ಎಂಬ ಸಾರಾಂಶವನ್ನು ನಾಟಕ ನೀಡುತ್ತದೆ ಎಂದರು.
ಬಾಪೂಜಿ ಇಂಜಿನಿಯರಿಂಗ್ ಕಾಲೇಜು ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ಸಾಹಿತಿ ಬಾ.ಮ. ಬಸವರಾಜಯ್ಯ, ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಈ ಸಂದರ್ಭದಲ್ಲಿದ್ದರು.