ವೀರಶೈವ ಧರ್ಮದ ಸಂಸ್ಕಾರದಿಂದ ಮಾನವ ಜೀವನದ ಉನ್ನತಿ, ಶ್ರೇಯಸ್ಸು ಸಾಧ್ಯ

ವೀರಶೈವ ಧರ್ಮದ ಸಂಸ್ಕಾರದಿಂದ ಮಾನವ ಜೀವನದ ಉನ್ನತಿ, ಶ್ರೇಯಸ್ಸು ಸಾಧ್ಯ

 ರಂಭಾಪುರಿ ಜಗದ್ಗುರುಗಳ ಹಿತನುಡಿ

ದಾವಣಗೆರೆ, ಆ. 11- ಮಾನವ ಜೀವನದ ಉನ್ನತಿ ಮತ್ತು ಶ್ರೇಯಸ್ಸಿಗೆ ವೀರಶೈವ ಧರ್ಮದ ಸಂಸ್ಕಾರಗಳು ಕಾರಣ. ಮನುಷ್ಯನಲ್ಲಿ ಆತ್ಮಬಲ ಬೆಳೆಯಲು ಅಧ್ಯಾತ್ಮದ ಹಸಿವು ಅಗತ್ಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರ ಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

 ನಗರದ ಅಭಿನವ ರೇಣುಕ ಮಂದಿರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಮಂಗಲ ಭವನದಲ್ಲಿ ಜರುಗಿದ ಅಧಿಕ ಶ್ರಾವಣ ಮಾಸದ 3ನೇ ದಿನದ ಇಷ್ಟಲಿಂಗ ಮಹಾಪೂಜೆ ಹಾಗೂ ಜನ ಜಾಗೃತಿ ಧರ್ಮ ಸಮಾವೇಶದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಧರ್ಮದಲ್ಲಿ ಮಾರ್ಗವಿದೆ ವೇಗವಿಲ್ಲ. ವಿಜ್ಞಾನದಲ್ಲಿ ವೇಗವಿದೆ ಮಾರ್ಗವಿಲ್ಲ. ಇವೆರಡರ ಸಮನ್ವಯದಿಂದ ಸರ್ವಾಂಗೀಣ ಪ್ರಗತಿ ಸಾಧ್ಯ. ಅಂತರಂಗ ಮತ್ತು  ಬಹಿರಂಗ ಶುದ್ಧಿಗೆ ಆದ್ಯತೆ ನೀಡಿದ ವೀರಶೈವ ಧರ್ಮ ಸಂವೇದನಾಶೀಲ ಆದರ್ಶತೆಯನ್ನು ಹೊಂದಿದೆ ಎಂದು ಹೇಳಿದರು.

ದೇಶಕ್ಕೊಂದು ಸಂವಿಧಾನ ಇರುವಂತೆ ವೀರಶೈವ ಧರ್ಮಕ್ಕೂ ಒಂದು ಸಂವಿಧಾನವಿದೆ. ಅಷ್ಟಾವರಣ, ಪಂಚಾಚಾರ ಮತ್ತು ಷಟ್‌ಸ್ಥಳಗಳೇ ತತ್ವ ತ್ರಯಗಳಾಗಿವೆ. ಇವುಗಳ ಆಚರಣೆಯಿಂದ ಮಾನವ ಜೀವನ ಉಜ್ವಲಗೊಳ್ಳುವುದೆಂದು ರೇಣುಕ ಗೀತೆಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಸ್ಪಷ್ಟಪಡಿಸಿದ್ದಾರೆ ಎಂದರು.

ಪ್ರಾಪಂಚಿಕ ಸಂಬಂಧಗಳು ಹೆಚ್ಚು ಕಮ್ಮಿ ಆಗಬಹುದು. ಆದರೆ, ಗುರು – ಶಿಷ್ಯರ ಸಂಬಂಧ ಯಾವಾಗಲೂ ಚಿರಂತನವಾಗಿರುತ್ತದೆ. ಲೋಕದ ಕತ್ತಲೆ ಕಳೆಯಲು ಸೂರ್ಯ ಬೇ.ಕು. ಅಜ್ಞಾನ ಕಳೆಯಲು ಗುರು ಬೋಧಾಮೃತ ಅವಶ್ಯಕ ಎಂದು ಹೇಳಿದರು 

ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ‘ಜನ ಸೇವಾ ಶಿರೋಮಣಿ’ ಪ್ರಶಸ್ತಿಯಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.

ಇದೇ ವೇಳೆ ಮಾತನಾಡಿದ ಡಾ. ಪ್ರಭಾ  ಅವರು, ಪ್ರತಿಯೊಬ್ಬರೂ ಸಹ ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕೆಂದು  ಸಲಹೆ ನೀಡಿದರು.

ಎಸ್.ಎಸ್. ಕೇರ್ ಟ್ರಸ್ಟ್‌ನಿಂದ ಶಿಕ್ಷಣ ಮತ್ತು ಆರೋಗ್ಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು, ವಿಶೇಷವಾಗಿ ಅಪೌಷ್ಠಿಕತೆಯಿಂದ ನರಳುತ್ತಿರುವ ಮಕ್ಕಳು, ಮಹಿಳೆಯರ ಕ್ಯಾನ್ಸರ್ ಹಾಗೂ ಗರ್ಭಿಣಿ ಮಹಿಳೆಯರಿಗೆ ಆರೋಗ್ಯ ತಪಾಸಣೆ, ಹೆಚ್ಚಿನ ಚಿಕಿತ್ಸೆಗೂ ಸಹ ವ್ಯವಸ್ಥೆ ಮಾಡಲಾಗುವುದು ಎಂದರು.

ದಾವಣಗೆರೆಯ ಜಗಳೂರು ಬಸ್ ನಿಲ್ದಾಣದ ಬಳಿ ಇರುವ ಎಸ್.ಎಸ್. ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಕೇಂದ್ರವನ್ನು ತೆರೆಯಲಾಗಿದ್ದು, 12 ಯಂತ್ರಗಳು ಕಾರ್ಯನಿ ರ್ವಹಿಸುತ್ತಿವೆ. ಎಸ್.ಎಸ್. ಕೇರ್ ಟ್ರಸ್ಟ್‌ನಿಂದ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ತಡೆ ಗಟ್ಟಲು ಸಾಧ್ಯವಿದ್ದು, ತಪಾಸಣೆ ಮಾಡಿಸಿ ಕೊಳ್ಳು ವುದು ಸೂಕ್ತ. ಬಿಪಿ ಮತ್ತು ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ವರ್ಷಕ್ಕೊಮ್ಮೆಯಾದರೂ ತಪಾ ಸಣೆ ಮಾಡಿಸುತ್ತಿರಬೇಕೆಂದು ಸಲಹೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾಬಾಯಿ ಮಾಲತೇಶರಾವ್ ಜಾಧವ್ ಮಾತನಾಡಿದರು.

ಅಮ್ಮಿನಬಾವಿ ಪಂಚಗೃಹ ಹಿರೇಮಠದ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಮರಿಯಮ್ಮನಹಳ್ಳಿ ಗುರುಪಾದೇಶ್ವರ ಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ಮಾಜಿ ಶಾಸಕ ಮಹಿಮಾ ಜೆ. ಪಟೇಲ್, ಶ್ರೀ ಮದ್ವೀರಶೈವ ಸದ್ಭೋಧನಾ ಸಂಸ್ಥೆ ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ್,  ಅಕ್ಕಮಹಾದೇವಿ ಸಮಾಜದ ಅಧ್ಯಕ್ಷೆ ಕಂಚಿಕೇರಿ ಸುಶೀಲಮ್ಮ, ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ನೀಲಗುಂದ ಜಯಮ್ಮ, ದಾವಣಗೆರೆ-ಹರಿಹರ ಅರ್ಬನ್ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷೆ ಜಯಮ್ಮ ಬಿ.ಹೆಚ್.ಪರಶುರಾಮಪ್ಪ, ವೀರಶೈವ ಸಮಾಜದ ಮಹಿಳಾ ಮುಖಂಡರಾದ ಜ್ಯೋತಿ ರಾಧೇಶ್ ಜಂಬಿಗಿ, ದಾವಣಗೆರೆ ಅರ್ಬನ್ ಬ್ಯಾಂಕ್ ನಿರ್ದೇಶಕರಾದ ಅರ್ಚನ ಅಂದನೂರು ರುದ್ರಮುನಿ ಉಪಸ್ಥಿತರಿದ್ದರು.

ಪಾಲಿಕೆ ಎಇಇ ಉದಯಕುಮಾರ್,  ಬಾಪೂಜಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಬಸವರಾಜ್ ಉತ್ತಂಗಿ, ವಿಜಯನಗರ ಕೋ-ಆಪ್ ಸೊಸೈಟಿ ಅಧ್ಯಕ್ಷ ಚೆಲುವಪ್ಪ ಮತ್ತಿತರರು ಗುರು ರಕ್ಷೆಗೆ ಪಾತ್ರರಾದರು.

ರಿಯಲ್ ಎಸ್ಟೇಟ್ ಉದ್ಯಮಿ ಕೆ.ಎಂ. ಚನ್ನಬಸವಯ್ಯ ಜಗದ್ಗುರುಗಳಿಗೆ ಗೌರವ ಮಾಲಾರ್ಪಣೆ ಸಲ್ಲಿಸಿದರು. ಉಪನ್ಯಾಸಕ ಮಲ್ಲಯ್ಯ ನಿರೂಪಿಸಿದರು. ಬಾದಾಮಿ ಮಲ್ಲಿಕಾರ್ಜುನ್ ಸ್ವಾಗತಿಸಿದರು.

error: Content is protected !!