‘ಗಾಂಧಿ ಭವನ’ ಮತ್ತೆ ಗೋಚರಿಸಿತು, ಮುಂದೇನು..?

‘ಗಾಂಧಿ ಭವನ’  ಮತ್ತೆ ಗೋಚರಿಸಿತು, ಮುಂದೇನು..?

ಮಾನ್ಯರೇ, 

ಎರಡೆರಡು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ, ಪ್ರಮುಖ ನಗರವೂ ಜಿಲ್ಲಾ ಕೇಂದ್ರವೂ ಆಗಿರುವ ದಾವಣಗೆರೆ ನಗರದಲ್ಲಿ `ಗಾಂಧಿ ನಗರ’ ಎಂಬ ದಲಿತರೇ ಪ್ರಮುಖವಾಗಿ ವಾಸಿಸುವ ಪ್ರದೇಶವೊಂದನ್ನು ಬಿಟ್ಟರೆ, ಗಾಂಧಿ ಯವರ ಹೆಸರಿನ ಪ್ರಮುಖ ಸ್ಥಳವೊಂದು (ಗಾಂಧೀಜಿ ಹೆಸರಲ್ಲಿ ಎರಡು ಶಾಲೆಗಳಿವೆ) ಈ ನಗರದಲ್ಲಿದೆ ಎಂಬುದೇ ಬಹುತೇಕರಿಗೆ ಗೊತ್ತೇ ಇರಲಿಲ್ಲ!

ವಿಶ್ವ ಮಾನವ ಮಂಟಪದ ಗೆಳೆಯ ಆವರಗೆರೆ ರುದ್ರಮುನಿ ಮತ್ತು ನಿವೃತ್ತ ಅಧಿಕಾರಿ ಅಂಜನಪ್ಪ ಮತ್ತಿತರರ ಅನಿರೀಕ್ಷಿತ ಆಸಕ್ತಿಯ ಕಾರಣ ಸಾರ್ವಜನಿಕ ಹಣವಾದ ಕೋಟಿ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಬಹಳ ಹಿಂದೆಯೇ ಜಿಲ್ಲಾಡಳಿತ `ಗಾಂಧಿ ಭವನ’ ಎಂಬ ಸ್ಮಾರಕ ವೊಂದನ್ನು ನಿರ್ಮಿಸಿರುವುದು  ಗೊತ್ತಾಗಿದ್ದು ತೀರಾ ಇತ್ತೀಚೆಗೆ ! ಏಕೆಂದರೆ ಅದು ಇರುವುದು ಬೈಪಾಸ್‌ನ ಹತ್ತಿರ ಎಸ್.ಎಸ್. ಹೈಟೆಕ್ ಆಸ್ಪತ್ರೆಯ ಆಚೆಗೆ.

ಅಂತೂ ಇನ್ನು ಕೆಲವು ದಿನಗಳು ಕಳೆದಿದ್ದರೆ ಈ ಭವನ ಏನೇನೋ ಆಗಿ ರೂಪಾಂತರ ಗೊಳ್ಳುತ್ತಿತ್ತೋ ಅಥವಾ ಕಣ್ಮರೆಯೇ ಆಗುತ್ತಿತ್ತೋ ಗೊತ್ತಿಲ್ಲ. ಆದರೆ ಮೇಲ್ಕಂಡ ಗೆಳೆಯರ ಆಸಕ್ತಿಯ ಕಾರಣ ಯಾರ ಕಣ್ಣಿಗೂ ಬೀಳದೆ ಪಾಳುಬಿದ್ದಿದ್ದ ಈ ಸ್ಮಾರಕ ಬೆಳಕಿಗೆ ಬಂತು. ಅದು ಸಾರ್ಥಕತೆಯ ಕಡೆಗೆ ಹೆಜ್ಜೆ ಹಾಕಿದೆ ಎಂದರೂ ತಪ್ಪಲ್ಲ. ಏಕೆಂದರೆ,ಇದೇತಾನೆ ಬಂದಿರುವ ಹೊಸ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಅದಕ್ಕೆ ಕಾಯಕಲ್ಪ ಕೊಟ್ಟು, ಕ್ವಿಟ್ ಇಂಡಿಯಾ ಚಳುವಳಿಯ ನೆನಪಿನ ಕಾರ್ಯಕ್ರಮವನ್ನೂ ನಡೆಸಿ ಬಿಟ್ಟಿದ್ದಾರೆ. ಅವರಿಗೆ ಅಭಿನಂದನೆಗಳು.

ಇದನ್ನು ನೋಡಲೆಂದೇ ಸಮಾರಂಭದ ನೆಪದಲ್ಲಿ ನಾನೂ ಸೇರಿದಂತೆ ಆಸಕ್ತ ಅಧ್ಯಾಪಕ ಮಿತ್ರರೊಂದಿಗೆ ಅಲ್ಲಿಗೆ ಅವಕಾಶವೊಂದು ದೊರೆತು, ಇಡೀ ಕಟ್ಟಡದ ವಿನ್ಯಾಸ, ಗಾಂಧೀಜಿ ಮತ್ತು ಅವರ ಚಳವಳಿ ಪ್ರತಿಬಿಂಬಿಸುವ ಪ್ರತಿಮಾ ಶಿಲ್ಪಗಳನ್ನು ನೋಡಿದಾಗ ಅಚ್ಚರಿಯಾಗುತ್ತದೆ. ಕಟ್ಟಡದ ಆವರಣ ಮತ್ತು ಸೌಲಭ್ಯಗಳಿಗಿರುವ ಅವಕಾಶಗಳು ಬಹು ಉಪಯೋಗಿ ಅನಿಸುತ್ತವೆ.

   ನಮಗನಿಸಿರುವುದು ಇಷ್ಟೇ, ನಿನ್ನೆ ನಡೆದ ಇದೊಂದು ಕಾರ್ಯಕ್ರಮಕ್ಕಷ್ಟೇ ತಮ್ಮ ಆ‌ಸಕ್ತಿಯನ್ನು ಮೊಟಕು, ಗೊಳಿಸದೆ ಈ ಭವನದಲ್ಲಿ ಆಗಾಗ್ಗೆ ಕಾರ್ಯಕ್ರಮ ಗಳು ನಿರಂತರವಾಗಿ ನಡೆಯುವಂತಾಗಬೇಕು. ಸಂಪೂರ್ಣ ಖಾಲಿ ಬಿದ್ದಿರುವ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯಗಳು ತಮ್ಮ ಉದ್ದೇಶಿತ ಕಾರ್ಯಗಳು ನಡೆಸುವಂತಾಗಲು ಸ್ವಾತಂತ್ರ್ಯ ಸಂಗ್ರಾಮದ ಕುರಿತ ಸಂಗ್ರಹಗಳು ಮತ್ತು ಸ್ವಾತಂತ್ರ್ಯ ಚಳುವಳಿ ಮತ್ತು ಗಾಂಧಿಯವರ ಕುರಿತ ಪುಸ್ತಕಗಳು ಈ ಕಟ್ಟಡದ ಸಂಗ್ರಹಾಲಯಗಳಿಗೆ ತ್ವರಿತ ಸೇರುವಂತಾಗ ಬೇಕು.

ಇವೆಲ್ಲ ಸಹಜವಾಗಿ ನಡೆಯುಂತಾಗಲು ಇಲ್ಲಿಗೆ ಪೂರ್ಣ ಪ್ರಮಾಣದ ಸಿಬ್ಬಂದಿಯನ್ನು ನೇಮಿಸಬೇಕು.

ಮುಖ್ಯವಾಗಿ ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿವರ್ಷವೂ ಒಂದು ದಿನ ಇಲ್ಲಿಗೆ ಭೇಟಿ ನೀಡುವ ಕಾರ್ಯಕ್ರಮಗಳನ್ನು ನಿಯೋಜಿಸು ವಂತೆ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಕಡ್ಡಾಯ ಮಾಡಿ ಆದೇಶಿಸಬೇಕು. ಹೀಗೆ ವರ್ಷ ಪೂರ್ತಿ ಗಾಂಧಿ ಭವನದಲ್ಲಿ ಚಟುವಟಿಕೆಗಳು ನಡೆಯುವಂತೆ ಪ್ರೇರೇ ಪಿಸಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ನೆನಪುಗಳು ಶಾಶ್ವತವಾಗಿ ಇರುವಂತೆ ಮಾಡಬೇಕೆಂದು ಆಶಿಸುವೆ.


ಇಮ್ತಿಯಾಜ್ ಹುಸೇನ್,  ದಾವಣಗೆರೆ.

error: Content is protected !!