ಭದ್ರಾ ನಾಲೆಗೆ ತಕ್ಷಣದಿಂದಲೇ ನೀರು ಹರಿಸಲು ಆಗ್ರಹ

ಭದ್ರಾ ನಾಲೆಗೆ ತಕ್ಷಣದಿಂದಲೇ ನೀರು ಹರಿಸಲು ಆಗ್ರಹ

ಮಲೇಬೆನ್ನೂರು ರೈತರ ಪ್ರತಿಭಟನೆ

ಮಲೇಬೆನ್ನೂರು, ಆ. 8- ಇಲ್ಲಿನ ಭದ್ರಾ ನಾಲಾ ನಂ 3 ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಕಛೇರಿ ಎದುರು ಮಳೆಗಾಲದ ಹಂಗಾಮಿಗೆ ಭದ್ರಾ ಜಲಾಶಯದಿಂದ ತಕ್ಷಣದಿಂದಲೇ ನೀರು ಹರಿಸುವಂತೆ ಒತ್ತಾಯಿಸಿ, ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಈಗಾಗಲೇ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಸಸಿ ಮಡಿ ತಯಾರಾಗಿದ್ದು ನಾಟಿ ಮಾಡಲು ನಾಲೆ ನೀರಿಗಾಗಿ ಕಾಯುತ್ತಿದ್ದೇವೆ.    

ಭದ್ರಾ ಅಣೆಕಟ್ಟೆ 166 ಅಡಿ ತಲುಪಿದ್ದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್ ಮಲ್ಲಿಕಾರ್ಜುನ್ ಅವರು ಆ.10ರಿಂದ ನಾಲೆಗೆ ನೀರು ಹರಿಸುವುದಾಗಿ ಹೇಳಿದ್ದಾರೆ. ಆದರೆ ಇಲಾಖೆಯಿಂದ ಇದುವರೆಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ತುರ್ತಾಗಿ ನಾಲೆಗೆ ನೀರು ಹರಿಸುವ ಕುರಿತು ಅಧಿಕೃತ ಪ್ರಕಟಣೆ ಹೊರಡಿಸುವಂತೆ ರೈತರು ಒತ್ತಾಯಿಸಿದರು.

ಭದ್ರಾ ನಾಲೆ  ನೀರಿನ ಸಮಸ್ಯೆ ಹಾಗೂ ರೈತರ ಇತರೆ ಬೇಡಿಕೆಗಳ ಕುರಿತು ಚರ್ಚಿಸಲು ಆ.7ರಂದು ಸಭೆ ನಡೆಸಲು ಕೋರಲಾಗಿತ್ತು. ಆದರೆ ಇವತ್ತು ಇಇ ಹಾಗೂ ಎಇಇ ಇಬ್ಬರೂ ಕಚೇರಿಯಲ್ಲಿ ಇಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಎಂಜಿನಿಯರ್‌ಗಳ ವರ್ತನೆ ಖಂಡಿಸಿ  ಘೋಷಣೆ ಕೂಗಿ ಸಿಬ್ಬಂದಿಯನ್ನು ಕಚೇರಿಯಿಂದ ಹೊರಗೆ ಕಳಿಸಿದ ಘಟನೆಯೂ ನಡೆಯಿತು.

ಡಿಬಿ ಕೆರೆ ನಾಲೆಗೆ ನೀರು ಹರಿಸಿ : ದೇವರಬೆಳಕೆರೆ ಪಿಕಪ್ ಡ್ಯಾಂನ ಎಡದಂಡೆ ನಾಲೆಗೆ ಕುಣೆಬೆಳಕೆರೆ ಬಳಿ ಸೇತುವೆ ಕಾಮಗಾರಿ ಪ್ರಗತಿ ಹಂತದಲ್ಲಿರುವುದರಿಂದ ನಾಲೆಗೆ ನೀರು ಬಂದ್ ಮಾಡಿ ಹಳ್ಳಕ್ಕೆ ನೀರು ಬಿಡಲಾಗಿದೆ. ನಾಲೆ ನೀರಿಲ್ಲದೆ, ಭತ್ತದ ಸಸಿಮಡಿ ಒಣಗುತ್ತಿವೆ. ಭತ್ತ ನಾಟಿ ಮಾಡುವ ಈ ಸಮಯದಲ್ಲಿ ಸೇತುವೆ ನಿರ್ಮಾಣ ಮಾಡುವ ಅವಶ್ಯಕತೆ ಏನಿತ್ತು? ಎಂದು ರೈತರು ಪ್ರಶ್ನಿಸಿದರು.

ಸೇತುವೆ ಕಾಮಗಾರಿ ಮುಂದೂಡಿ. ಎಡದಂಡೆ ನಾಲೆಗೆ ನೀರು ಹರಿಸಿ. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ನಂದಿತಾವರೆ ನಂದೀಶ್, ಪರಮೇಶ್ವರಪ್ಪ ಎಚ್ಚರಿಕೆ ನೀಡಿದರು.

ಆ 10ಕ್ಕೆ ನೀರು ಬಿಡುವಂತೆ ಮನವಿ ಪತ್ರ ನೀಡಿದ  ರೈತರು ಬೈಕ್ ಮೂಲಕ ದಾವಣಗೆರೆಯ ಡಿಸಿ ಕಚೇರಿಗೆ ಮನವಿ ನೀಡಲು ತೆರಳಿದರು.

ರೈತ ಸಂಘ, ಹಸಿರು ಸೇನೆಯ ಹಾಳೂರು ನಾಗರಾಜ್, ನಂದಿತಾವರೆ ಶಂಭುಲಿಂಗಪ್ಪ , ಬಸಣ್ಣ, ಕೆಂಚನಹಳ್ಳಿ ಪರಮೇಶ್, ಭಾನುವಳ್ಳಿ ಪರಮೇಶ್ವರಪ್ಪ, ನಂದೀಶ್, ರುದ್ರಮುನಿ, ಮಾಲತೇಶ್, ಹಾಲಿವಾಣ ಆಂಜಿನಪ್ಪ, ಶೇಖರಪ್ಪ, ಭಾನುವಳ್ಳಿ ಪ್ರಕಾಶ್, ಕುಂಬಳೂರಿನ ಕೆ ಆಂಜನೇಯ, ಜಿಗಳಿಯ ಕೆ. ಮಾಲತೇಶ್ ಸೇರಿದಂತೆ, ನೂರಾರು ರೈತರು ಪ್ರತಿಭಟನೆಯಲ್ಲಿದ್ದರು. ಪೊಲೀಸರು ಭದ್ರತೆ  ಒದಗಿಸಿದ್ದರು.

error: Content is protected !!