ಹರಿಹರ, ಜು. 25 – ನಗರದ ಶಿವಮೊಗ್ಗ ರಸ್ತೆಯಲ್ಲಿರುವ ಶ್ರೀ ವಿಶ್ವಬಂಧು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ನಿಯಮಿತ ಇದರ ಬೆಳ್ಳಿ ಮಹೋತ್ಸವ ಹಾಗೂ ಶಿವ ಸದನದ ನೂತನ ಕಟ್ಟಡ ಉದ್ಘಾಟನಾ ಸಮಾರಂಭವನ್ನು ಜು. 27 ರ ಗುರುವಾರ ಬೆಳಿಗ್ಗೆ 12 ಗಂಟೆಗೆ ನಗರದ ಶ್ರೀ ಸಿದ್ದೇಶ್ವರ ಪ್ಯಾಲೇಸ್‍ನಲ್ಲಿ ನಡೆಸಲಾಗುತ್ತದೆ ಎಂದು ಸೊಸೈಟಿ ಅಧ್ಯಕ್ಷ ಬೆಳ್ಳೂಡಿ ರಾಮಚಂದ್ರಪ್ಪ ತಿಳಿಸಿದ್ದಾರೆ.
ನಗರದ ಶ್ರೀ ವಿಶ್ವಬಂಧು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸಭಾಂಗಣದಲ್ಲಿ ಮಾತನಾಡಿದ ಅವರು, ನೂತನ ಕಟ್ಟಡ ಉದ್ಘಾಟನೆ ಮತ್ತು ಸಮಾರಂಭದ ಸಾನ್ನಿಧ್ಯವನ್ನು ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಪಟ್ಟಾಧ್ಯಕ್ಷರಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ವಹಿಸಲಿದ್ದಾರೆ ಎಂದರು.
ಸ್ಮರಣ ಸಂಚಿಕೆ ಬಿಡುಗಡೆಯನ್ನು ಸಂಸದ ಜಿ.ಎಂ. ಸಿದ್ದೇಶ್ವರ, ಉದ್ಘಾಟನೆಯನ್ನು ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ನೂತನ ಶಾಖೆಗಳ ಉದ್ಘಾಟನೆಯನ್ನು ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ನೆನಪಿನ ಕಾಣಿಕೆ ಬಿಡುಗಡೆಯನ್ನು ಶಾಸಕ ಬಿ.ಪಿ. ಹರೀಶ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಸೊಸೈಟಿಯ ಅಧ್ಯಕ್ಷ ಬಿ. ರಾಮಚಂದ್ರಪ್ಪ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ದಾವಣಗೆರೆ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಬಿ. ಹಾಲೇಶಪ್ಪ ಸಿರಿಗೆರೆ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾದ ಬಿ. ಜಗದೀಶ್, ಸಹಕಾರ ಸಂಘಗಳ ಉಪ ನಿಬಂಧಕರಾದ ಅನ್ನಪೂರ್ಣಮ್ಮ , ಸಹಕಾರ ಸಂಘದ ನಿಬಂಧಕರಾದ ಮಂಜುಳಾ ಭಾಗವಹಿಸಲಿದ್ದಾರೆ. ನಿಟ್ಟೂರು ಸಾವಯವ ಕೃಷಿ ತಜ್ಞರಾದ ಸರೋಜಮ್ಮ ಎನ್.ಪಾಟೀಲ್ ಹಾಗೂ ಕರ್ನಾಟಕದಿಂದ ಭಾರತೀಯ ನೌಕಾಪಡೆಗೆ ಆಯ್ಕೆಯಾದ ಭೂಮಿಕಾ ಇವರುಗಳಿಗೆ ಗೌರವಿಸಿ, ಸನ್ಮಾನಿಸಲಾಗುತ್ತದೆ.
ಬೆಳಿಗ್ಗೆ 10 ಗಂಟೆಗೆ 25ನೇ ವಾರ್ಷಿಕ ಮಹಾಸಭೆಯನ್ನು ಆರಂಭಿಸಲಾಗುತ್ತದೆ ಎಂದು ರಾಮಚಂದ್ರಪ್ಪ ಹೇಳಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಟಿ. ಶಂಭುಲಿಂಗ ಕುಂಬಳೂರು ಮತ್ತಿತರರು ಉಪಸ್ಥಿತರಿದ್ದರು.