ಮಾನ್ಯರೇ,
ನಿನ್ನೆ ಬೆಳಗ್ಗೆ ಹಿರಿಯೂರಿಗೆ ಹೋಗಲು ಬಸ್ ಹತ್ತಿದೆ. ಕಂಡಕ್ಟರ್ ಕೈಗೆ ಆಧಾರ್ ಕಾರ್ಡ್ (ಸೀನಿಯರ್ ಸಿಟಿಜನ್ ಗಾಗಿ) ಜೊತೆಗೆ ಹಣವನ್ನೂ ಕೊಟ್ಟೆ. ಆಧಾರ್ ಕಾರ್ಡ್ ನೋಡಿ ಹಣ ಬೇಡ ಅಂದರು. ಟಿಕೆಟ್ ಕೊಡಪ್ಪ ಅಂದೆ ಯಾಕಮ್ಮ ನಿಮಗೆ ಫ್ರೀ ಇದೆ ಅಂದರು. ಸರ್ಕಾರ ನಿಮಗಾಗಿ ಮಾಡಿದೆ ಅಂತ ಒತ್ತಾಯ ಮಾಡಿದರು. ಇರಲಿ ಟಿಕೆಟ್ ಕೊಡಪ್ಪಾ ನನಗೆ ಪೆನ್ಷನ್ ಬರುತ್ತದೆ ಆದಾಯವಿದೆ. ನನಗೆ ಟಿಕೆಟ್ ಕೊಡಪ್ಪ ಅಂತ ಒತ್ತಾಯ ಮಾಡಿದ್ದಕ್ಕೆ ನೀನೇನೂ ದೇಶ ಉದ್ಧಾರ ಮಾಡ್ತೀಯೆನಮ್ಮ. ನಿಮ್ಮೊಬ್ಬರಿಂದ ಏನು ದೇಶ ಉದ್ಧಾರ ಆಗಲ್ಲಮ್ಮ ಅಂತ ಟಿಕೆಟ್ ಕೊಡಲು ಒಪ್ಪಲಿಲ್ಲ ಕಂಡಕ್ಟರ್.
ಪಕ್ಕದಲ್ಲಿ ಕುಳಿತಿದ್ದವರು ಒಬ್ಬರು ನಮ್ಮ ಸಹೋದ್ಯೋಗಿ ಲಕ್ಷಗಟ್ಟಲೆ ಸಂಬಳ ತಗೋತಾರೆ ದಿನ ಬಸ್ಸಿನಲ್ಲಿ ಫ್ರೀಯಾಗಿ ಹೋಗುವರು. ಅವರು ನಿಮ್ಮ ಹಾಗೆ ಯೋಚನೆ ಮಾಡಲ್ಲಮ್ಮ ಅಂದರು. ಯಾರಾದರೂ ಹೇಗಾದರೂ ಇರಲಿ ನಾನು ಫ್ರೀ ಹೋಗಲ್ಲ. ನಾನು ಸರ್ಕಾರದ ಅನುಕೂಲ ಪಡೆದಿದ್ದೇನೆ. ಅದರಿಂದಲೇ ಬದುಕುತ್ತಿದ್ದೇನೆ. ಬೇರೆಯವರಿಗೆ ಉಪಯೋಗವಾಗಲಿ ಅಂತೇಳಿದೆ. ಕಂಡಕ್ಟರ್ಗೆ ಅವಶ್ಯಕತೆ ಇರುವವರಿಗೆ ಗೌರವ ಕೊಟ್ಟು ಕರೆದುಕೊಂಡು ಹೋಗಿ, ಬಡವರಿಗೆ, ಕಷ್ಟಕ್ಕೆ ಹೋಗುವವರಿಗೆ ಅನುಕೂಲವಾಗುತ್ತದೆ ಅಂತ ಹೇಳಿದೆ. ಹೆಣ್ಣು ಮಕ್ಕಳು ಫ್ರೀ ಟಿಕೆಟ್ ಸಿಗುತ್ತದೆಂದು ಬರುತ್ತಾರೆಂದು ಅಸಡ್ಡೆ ತೋರಬೇಡಿ. ಅವರಿಗೆ ಸಹಾಯ ಮಾಡಿ ಎಂದೇ ಅಕ್ಕ ಪಕ್ಕದವರು ಎಷ್ಟೊಳ್ಳೆ ಮಾತು ಹೇಳಿದಿರಮ್ಮ ಅಂದರು. ಕಂಡಕ್ಟರ್ ಖುಷಿಯಿಂದ ಟಿಕೆಟ್ ಕೊಟ್ಟು ಅಭಿಮಾನದಿಂದ ನೋಡಿದರು.
ನನಗೆ ಹಿರಿಯೂರಿಗೆ ಹೋಗಲು ಸೀದಾ ಬಸ್ ಸಿಗಲಿಲ್ಲ. ದಾವಣಗೆರೆ ಯಿಂದ ಚಿತ್ರದುರ್ಗಕ್ಕೆ ಚಿತ್ರದುರ್ಗದಿಂದ ಹಿರಿಯೂರಿಗೆ ಬೇರೆ ಬೇರೆ ಬಸ್ಸಿಗೆ ಹೋದೆ. ತಿರುಗಿ ಬರುವಾಗಲೂ ಹಾಗೇ ಆಯಿತು ನಾಲ್ಕು ಬಾರಿಯೂ ಇದೇ ಚರ್ಚೆ. ಇದೇ ಮಾತು ನನಗೆ ಹೊಸ ಅನುಭವವಾಯಿತು. ಚಿತ್ರದುರ್ಗದಿಂದ ಬರುವಾಗ ಬಸ್ಸುಗಳು ತುಂಬಿ ಬರುತ್ತಿದ್ದವು. ದಾವಣಗೆರೆಗೆ ಹೋಗುವ ಜನ ಬಹಳ ಇದ್ದರು. ಕೆಳಗೆ ನಿಂತಿದ್ದ ಗಂಡಸರು ಹೆಂಗಸರಿಗೆ ಫ್ರೀ ಬಸ್ ಆದ ಮೇಲೆ ಬಸ್ಸು ಹೀಗಾಗಿವೆ ಅಂದರು. ನಾನು ಅಲ್ಲ ರೀ ಸುಮ್ಮ ಸುಮ್ಮನೆ ಯಾರು ಓಡಾಡುವರು ಕೆಲಸ ಇದ್ದರೆ ತಾನೇ ಹೋಗುವುದು ಅಂದ ತಕ್ಷಣ ಅವರ ಜೊತೆಗಿದ್ದ ಅವರ ಹೆಂಗಸರು ಹೌದು ಹೌದು ಅಂದರು. ಆಗ ಆ ಗಂಡಸರು ತಕ್ಷಣ ಬಸ್ಸುಗಳನ್ನು ಕಡಿಮೆ ಮಾಡಿದ್ದಾರೆ ಅಂದರು. ಒಟ್ಟಿನಲ್ಲಿ ಬಸ್ಸಿನಲ್ಲಿ ಓಡಾಡಲು ಹಣ ಇಲ್ಲದೆ ಎಲ್ಲಿಗೂ ಹೋಗದೆ ಕಷ್ಟ-ಸುಖಗಳಿಗೆ ಭಾಗಿಯಾಗದೆ ಇದ್ದಂತಹ ಅಸಹಾಯಕ ಹೆಣ್ಣು ಮಕ್ಕಳಿಗೆ ಸಹಾಯವಾಗುತ್ತದೆ ಎನ್ನುವ ಸಂತಸ ನನಗಿದೆ.
– ಹೆಚ್.ಕೆ. ಸತ್ಯಭಾಮ ಮಂಜುನಾಥ, ದಾವಣಗೆರೆ.