ಮಾನ್ಯರೇ,
ರೈಲ್ವೇ ಸಚಿವರು, ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಕಾಮಗಾರಿಯನ್ನು ಬೇಗನೆ ಪೂರ್ಣಗೊಳಿಸಬೇಕು. ದಾವಣಗೆರೆ ಜಿಲ್ಲೆಯ ತೋಳಹುಣಸೆಯಿಂದ ಭರಮಸಾಗರ ಮಧ್ಯೆ ಕಾಮಗಾರಿ ಪ್ರಾರಂಭವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಇನ್ನು ಕೆಲಸ ಪ್ರಾರಂಭವಾಗಿಲ್ಲ.
ಈ ಹೊಸ ರೈಲು ಮಾರ್ಗದ ಉಪಯೋಗ ಬಹಳಷ್ಟಿದೆ. ಬೆ೦ಗಳೂರಿನಿ೦ದ ಚಿತ್ರದುರ್ಗಕ್ಕೆ 110 ಕಿ.ಮೀ. ಅ೦ತರ ಕಡಿಮೆಯಾಗುತ್ತದೆ. ಸಿರಾ ಮತ್ತು ಹಿರಿಯೂರು ಹೊಸ ಸ್ಥಳಗಳು ರೈಲು ಸ೦ಪರ್ಕವನ್ನು ಪಡೆಯುತ್ತವೆ. ಬೆಂಗಳೂರು-ಅರಸೀಕೆರೆ-ಶಿವಮೊಗ್ಗ ಸಾಲಿನಲ್ಲಿ ರೈಲು ಸಂಚಾರ 50% ರಷ್ಟು ಕಡಿಮೆಯಾಗುತ್ತದೆ ಮತ್ತು ಶಿವಮೊಗ್ಗವು ಬೆಂಗಳೂ ರಿನಿಂದ ಹೆಚ್ಚು ಪ್ರಯಾಣಿಕ ರೈಲುಗಳನ್ನು ಹೊಂದಬ ಹುದು. ಅಲ್ಲದೆ ಬೆಂಗಳೂರಿನಿಂದ, ಬೆಳಗಾವಿ ಮತ್ತು ಬಿಜಾಪುರ ನಡುವಿನ ಅಸ್ತಿತ್ವದಲ್ಲಿರುವ ಮಾರ್ಗಗಳಲ್ಲಿ ಸಂಚಾರ ಕನಿಷ್ಠ 35% ಕಡಿಮೆಯಾಗುತ್ತದೆ. ಪರಿಣಾ ಮವಾಗಿ ಪ್ರಸ್ತುತ ಹರಿಹರ-ಬೀರೂರು-ಅರಸೀಕೆರೆ ಸಾಲಿನಲ್ಲಿ ದಟ್ಟಣೆ ಕಡಿಮೆಯಾಗುವುದರಿ೦ದ ಹೆಚ್ಚಿನ ಸರಕು ಸಾಗಣೆ ಮಾಡಬಹುದು.
ಪ್ರಯಾಣದ ದೂರ ಕಡಿಮೆಯಾಗುವುದರಿಂದ, ಇಂಧನ ಮತ್ತು ಸಾಕಷ್ಟು ಪ್ರಯಾಣದ ಸಮಯ ಉಳಿಸಬಹುದು. ಐತಿಹಾಸಿಕ ಚಿತ್ರದುರ್ಗ ಕೋಟೆ ನೋಡಲಿಕ್ಕೆ ದೇಶ, ವಿದೇಶದಿಂದ ಬರುವ ಪ್ರವಾಸಿಗರಿಗೆ ತುಂಬಾ ಅನುಕೂಲವಾಗುತ್ತದೆ. ಅಲ್ಲದೇ ದಾವಣಗೆರೆ, ಆನಗೋಡು, ಹೆಬ್ಬಾಳು, ಭರಮಸಾಗರ, ಸಿರಿಗೆರೆ ಕ್ರಾಸ್, ಐಮಂಗಲ, ಹಿರಿಯೂರು, ಸಿರಾ ಇತರೆಡೆಗೆ ರೈಲು ಸಂಪರ್ಕ ಕಲ್ಪಿಸಿದಂತಾಗುತ್ತದೆ
– ರೋಹಿತ್ ಎಸ್. ಜೈನ್