ಮಹಿಳಾ ಸಾಂತ್ವನ : ಶೀಘ್ರ ಇತ್ಯರ್ಥಪಡಿಸಿ

ಮಹಿಳಾ ಸಾಂತ್ವನ : ಶೀಘ್ರ ಇತ್ಯರ್ಥಪಡಿಸಿ

ಮಹಿಳೆ-ಮಕ್ಕಳ ಸಾಗಾಣಿಕೆ ತಡೆ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಜಿಪಂ ಸಿಇಒ

ದಾವಣಗೆರೆ, ಜು.12- ಜಿಲ್ಲೆಯ ಎಲ್ಲಾ ಮಹಿಳಾ ಸಾಂತ್ವನ ಕೇಂದ್ರಗಳಲ್ಲಿ ದಾಖಲಾಗಿ ರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿ ಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಕೆ. ಇಟ್ನಾಳ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಜಿಲ್ಲಾ ಪಂಚಾಯಿತಿ ಕಚೇರಿ ಮುಖ್ಯ ಸಭಾಂಗಣದಲ್ಲಿ ಮಹಿಳೆಯರು ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟುವ ಸಂಬಂಧ ಇಂದು ನಡೆದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ದೌರ್ಜನ್ಯಕ್ಕೆ ಒಳಗಾಗುವ ಮಹಿಳೆ ಯರು ಹಾಗೂ ಮಕ್ಕಳಿಗೆ ಸಹಾಯವಾಣಿ, ಸಾಂತ್ವನ ಕೇಂದ್ರ ಕುರಿತು ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವ್ಯಾಪಕವಾಗಿ ಅರಿವು ಮೂಡಿಸುವಂತೆ ಅವರು ಸೂಚನೆ ನೀಡಿದರು.

ಉದ್ಯೋಗಸ್ಥ ಮಹಿಳೆಯರು, ಕೂಲಿ ಮಾಡುವವರು ಮತ್ತು ವಲಸೆ ಬಂದ ಮಹಿಳೆಯರಿಗೆ ಕೆಲಸದ ಅವಧಿಯವರೆಗೂ ತಮ್ಮ ಮಕ್ಕಳನ್ನು ಶಿಶು ಪಾಲನಾ ಕೇಂದ್ರದಲ್ಲಿ ಬಿಟ್ಟು ಹೋಗಲು ಈ ಬಗ್ಗೆ ಹೆಚ್ಚಿನ ಪ್ರಚಾರ ಮಾಡಿ ಎಂದರು.

ಜಿಲ್ಲಾ ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಮಹಾವೀರ ಎಂ. ಕರೆಣ್ಣವರ ಮಾತನಾಡಿ, ಸಂವಿಧಾನದಲ್ಲಿ ಮಹಿಳೆ ಮತ್ತು ಮಕ್ಕಳ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಅವರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸಿದ್ದು, ಅವುಗಳ ಬಗ್ಗೆ ಮಹಿಳೆಯರಿಗೆ ಮಾಹಿತಿ ತಿಳಿಸುವ ಕೆಲಸಗಳನ್ನು ಮಾಡ ಬೇಕು. ಗ್ರಾಮೀಣ ಭಾಗಗಳಲ್ಲಿ ಮಹಿಳೆಯರ ನೆರವಿಗೆ ಸ್ವಯಂ ಸೇವಾ ಸಂಸ್ಥೆಗಳಿಂದ ನಿರ್ವಹಣೆಯಾಗುತ್ತಿರುವ ಸಾಂತ್ವನ, ಮಹಿಳಾ ಸಹಾಯವಾಣಿ ಕೇಂದ್ರಗಳ ಮಾಹಿತಿಯನ್ನು ಹೆಚ್ಚು ಪ್ರಚಾರ ಮಾಡಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ  ಉಪ ನಿರ್ದೇಶಕರಾದ ವಾಸಂತಿ ಉಪ್ಪಾರ್ ಮಾತನಾಡಿ, ಸಾಂತ್ವನ ಯೋಜನೆಯಡಿ ಜಗಳೂರು ತಾಲ್ಲೂಕಿನಲ್ಲಿ 29 ಪ್ರಕರಣಗಳು ದಾಖಲಾಗಿದ್ದು, 23 ಪ್ರಕರಣಗಳು ಇತ್ಯರ್ಥಗೊಂಡಿವೆ. ಇನ್ನೂ 4 ಪ್ರಕರಣಗಳು ಬಾಕಿ ಉಳಿದಿವೆ. ಚನ್ನಗಿರಿಯಲ್ಲಿ 28 ಪ್ರಕರಣಗಳು ದಾಖಲಾಗಿದ್ದು, 24 ಪ್ರಕರಣಗಳು ಇತ್ಯರ್ಥವಾಗಿವೆ. 4 ಪ್ರಕರಣಗಳು ಬಾಕಿ ಉಳಿದಿವೆ. ಹರಿಹರದಲ್ಲಿ 30 ಪ್ರಕರಣಗಳು ದಾಖಲಾಗಿದ್ದು 29 ಪ್ರಕರಣಗಳು ಇತ್ಯರ್ಥವಾಗಿವೆ. 1 ಪ್ರಕರಣ ಬಾಕಿ ಉಳಿದಿದೆ. ಹೊನ್ನಾಳಿಯಲ್ಲಿ 18 ಪ್ರಕರಣಗಳು ದಾಖಲಾಗಿದ್ದು, 16 ಪ್ರಕರಣಗಳು ಇತ್ಯರ್ಥಗೊಂಡಿವೆ. 2 ಪ್ರಕರಣಗಳು ಬಾಕಿ ಉಳಿದಿವೆ ಎಂದು ತಿಳಿಸಿದರು.

ಪಶು ಸಂಗೋಪನೆ ಉಪ ನಿರ್ದೇಶಕ ಸುಂಕದ್, ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್, ಸಮಿತಿಯ ಪದಾಧಿಕಾರಿಗಳು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!