ಏರುವ ಬಿಸಿಲು, ಇಳಿದ ಮಳೆ, ತಾಳಿಕೊಂಡೀತೆ ಅಡಿಕೆ ಬೆಳೆ

ಏರುವ ಬಿಸಿಲು, ಇಳಿದ ಮಳೆ, ತಾಳಿಕೊಂಡೀತೆ ಅಡಿಕೆ ಬೆಳೆ

ದಾವಣಗೆರೆ, ಜು. 10 – ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರಲ್ಲ ಎಂಬ ಮಾತಿತ್ತು. ಆದರೆ, ಆಧುನಿಕ ಕಾಲದಲ್ಲಿ ಅಡಿಕೆಗೇ ದೊಡ್ಡ ಮಾನ ದಕ್ಕಿದೆ. ಅದರಲ್ಲೂ ಮಾಜಿ ಶಾಸಕರೊಬ್ಬರು ಅಡಿಕೆ ಬೆಳೆಗಾರರ ಮನೆಯಲ್ಲಿ 2-3 ಕೋಟಿ ರೂ. ನಗದು ಇರುತ್ತದೆ ಎಂದು ಹೇಳುವ ಮೂಲಕ ಅಡಿಕೆ ಮಾನವನ್ನು ಇನ್ನೊಂದು ಹಂತಕ್ಕೆ ತಲುಪಿಸಿದ್ದೂ ಆಗಿದೆ.

ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಬೆಳೆ ಯುವ ಪ್ರದೇಶ ಸಾಕಷ್ಟು ವಿಸ್ತಾರಗೊಳ್ಳುತ್ತಿದೆ. ಕಳೆದ ಕೆಲ ವರ್ಷಗಳಲ್ಲಿ ಮಳೆರಾಯ ತುಸು ಅತಿಯಾಗಿಯೇ ಕೃಪೆ ತೋರಿದ್ದ. ಹೀಗಾಗಿ ಅಡಿಕೆ ಬೆಳೆಗಾರರಿಗೆ ಅನುಕೂಲವೂ ಆಗಿತ್ತು. ಆದರೆ, ಈ ವರ್ಷ ಎಲ್ – ನೀನೋ ಕಾಣಿಸಿಕೊಂಡಿದ್ದು, ಮಳೆಯ ಮೇಲೆ ಪರಿಣಾಮ ಬೀರುತ್ತಿದೆ. ಕಳೆದ ಜೂನ್‌ ತಿಂಗಳು ದಕ್ಷಿಣ ಭಾರತದಲ್ಲಿ ಕಳೆದ 120 ವರ್ಷಗಳಲ್ಲೇ ಅತ್ಯಂತ ಹೆಚ್ಚಿನ ತಾಪಮಾನ ದ್ದಾಗಿತ್ತು ಹಾಗೂ ಕಡಿಮೆ ಮಳೆ ತಂದಿತ್ತು.

ಇದೊಂದೇ ತಿಂಗಳ ಹೊಡೆತದಿಂದ ಜಿಲ್ಲೆಯಲ್ಲಿ ಅಂತರ್ಜಲ ತೀವ್ರವಾಗಿ ಕುಸಿದಿದೆ. ಕಳೆದ ವರ್ಷ ಅಂತರ್ಜಲ ಮಟ್ಟ 5.76 ಮೀಟರ್  ಇದ್ದದ್ದು, ಈ ವರ್ಷ 9.99 ಮೀಟರ್‌ಗಳಿಗೆ ತಲುಪಿದೆ. ಜಗಳೂರಿನಲ್ಲಂತೂ ಅಂತರ್ಜಲ ಮಟ್ಟ 15.64 ಮೀಟರ್‌ವರೆಗೆ ಕುಸಿದಿದೆ.

ಎರಡರಿಂದ ಏಳು ವರ್ಷಗಳಿಗೆ ಒಮ್ಮೆ ಬರುವ ಎಲ್ – ನೀನೋ ವಾಯುಗುಣ ಚಕ್ರ ವಾಗಿದೆ. ಪೆಸಿಫಿಕ್ ಮಹಾಸಾಗರದಲ್ಲಿ ನೀರು ಬಿಸಿಯಾದಾಗ ಎಲ್ – ನೀನೋ ಉಂಟಾ ಗುತ್ತದೆ. ಇದರಿಂದ ಭಾರತದಲ್ಲಿ ಬರ ಪರಿಸ್ಥಿತಿ ಉಂಟಾಗುತ್ತದೆ. ಎಲ್ – ನೀನೋ ಸಾಮಾನ್ಯ ವಾಗಿ 9ರಿಂದ 12 ತಿಂಗಳ ಕಾಲ ಇರುತ್ತದೆ. 

ಅಲ್ಲದೇ ತಾಪಮಾನ ಹೆಚ್ಚಳವೂ ನಿರಂತರ ಸಮಸ್ಯೆ ತರುತ್ತಿದೆ. ಈ ಎಲ್ಲದರ ನಡುವೆ ಸಾಂಪ್ರದಾಯಿಕವಾಗಿ ತಮ್ಮ ಪ್ರದೇಶ ದ್ದಲ್ಲದ ಬೆಳೆ, ಅದರಲ್ಲೂ ದೀರ್ಘಾವಧಿಯ ತೋಟಗಾರಿಕೆ ಬೆಳೆಗೆ ಮುಂದಾದಾಗ ಸಾಕಷ್ಟು ಎಚ್ಚರಿಕೆ ವಹಿಸುವ ಅಗತ್ಯವಿದೆ.

ಅಡಿಕೆ ಬೆಳೆ ಈಗಾಗಲೇ ಅತಿಯಾಗಿದೆ. ಬೇಳೆ ಹಾಗೂ ಖಾದ್ಯ ತೈಲಕ್ಕಾಗಿ ವಿದೇಶಗಳನ್ನು ಅವಲಂಬಿಸಿದ್ದೇವೆ. ಬೇಳೆ ಬೆಲೆ ಗಗನಕ್ಕೆ ಮುಟ್ಟಿದೆ. ಕೆಲ ತಿಂಗಳ ಹಿಂದೆ ಖಾದ್ಯ ತೈಲದ ಬೆಲೆ ದುಬಾರಿಯಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ, ದೇಶದ ಸ್ವಾವಲಂಬ ನೆಗೆ ಅನುಕೂಲವಾಗುವ ಬೆಳೆ ಬೆಳೆಯದೇ, ಅಡಿಕೆ ಪ್ರದೇಶವನ್ನು ಹೆಚ್ಚಿಸುವುದು ಸರಿಯಲ್ಲ ಎಂದು ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಜ್ಞಾನಿ ಎಂ.ಜಿ. ಬಸವನಗೌಡ ಅಭಿಪ್ರಾಯ ಪಡುತ್ತಾರೆ.

ಮಳೆ ಕೈ ಕೊಟ್ಟ ಸಂದರ್ಭದಲ್ಲಿ ಅಡಿಕೆ ಕಾಪಾಡಿಕೊಳ್ಳುವುದು ಕಠಿಣವಾಗಲಿದೆ. ಅದ ರಲ್ಲೂ ಬಯಲು ಪ್ರದೇಶಗಳಲ್ಲಿ ಬಿಸಿಲು ಸಾಮಾನ್ಯಕ್ಕಿಂತ ಒಂದು ಡಿಗ್ರಿಯಷ್ಟು ಹೆಚ್ಚಾ ದರೂ ಅಡಿಕೆ ತಾಳದು ಎಂದವರು ಹೇಳುತ್ತಾರೆ.

ಈ ಹಿಂದೆ ಬೋರ್‌ಗಳಲ್ಲಿ ನೀರು ನಿಧಾನವಾಗಿ ಕಡಿಮೆಯಾಗುತ್ತಿತ್ತು. ಕಳೆದ ತಿಂಗಳು ಕೆಲವೆಡೆ ಬೋರ್‌ಗಳಲ್ಲಿ ಹಠಾತ್ತನೆ ನೀರು ನಿಂತಿದೆ. ಈಗ ಅಂತರ್ಜಲ ಬಳಕೆದಾರರ ಸಂಖ್ಯೆ ಅತಿಯಾಗಿರುವುದೇ, ಹಠಾತ್ ನಿಲುಗಡೆಗೆ ಕಾರಣ ಎಂದು ಬಸವನಗೌಡ ತಿಳಿಸುತ್ತಾರೆ.

ಅಡಿಕೆ ಬೆಳೆಗಾರರು ಈ ಎಲ್ಲ ಪರಿಸ್ಥಿತಿಗಳನ್ನು ಗಮನಿಸಬೇಕಿದೆ. ಒಂದು ವೇಳೆ ಅಡಿಕೆ ಬೆಳೆ ಬೆಳೆಯುವುದೇ ಆದರೆ, ಅದನ್ನು ಕಡಿಮೆ ನೀರಿಗೆ ಒಗ್ಗಿಸಿಕೊಳ್ಳಬೇಕಿದೆ. ಇದಕ್ಕೆ ಅಗತ್ಯ ಕ್ರಮಗಳಿಗಾಗಿ ತಜ್ಞ ಪರಿಣಿತರಿಂದ ಸಲಹೆಗಳನ್ನು ಪಡೆಯಬೇಕಿದೆ ಎಂದವರು ಹೇಳಿದ್ದಾರೆ.


– ಎಸ್‌. ಎ. ಶ್ರೀನಿವಾಸ್‌

error: Content is protected !!