ಬದುಕಿದ್ದಾಗಲೇ ಮಾತನಾಡಿಸಿ

ಬದುಕಿದ್ದಾಗಲೇ ಮಾತನಾಡಿಸಿ

ಡಾ. ಜಿ.ಸಿ. ಬಸವರಾಜ ಅವರ `ಸಾಧನೆಯ ಹಾದಿಯಲ್ಲಿ’ ಕೃತಿ ಲೋಕಾರ್ಪಣೆ ಕಾರ್ಯಕ್ರಮದ ಡಾ.ಗುರುಬಸವ ಶ್ರೀ

ದಾವಣಗೆರೆ, ಜು. 9- ವ್ಯಕ್ತಿ ಮೃತಪಟ್ಟಾಗ ಇಂದ್ರ-ಚಂದ್ರ ಎನ್ನುವ ಬದಲು ಇದ್ದಾಗಲೇ ಸೌಜನ್ಯಕ್ಕಾದರೂ ಮಾತನಾಡಿಸುವ ಪ್ರವೃತ್ತಿ ಹೆಚ್ಚಾಗಬೇಕು ಎಂದು ಕಮ್ಮತ್ತಹಳ್ಳಿ ಪಾಂಡೋಮಟ್ಟಿ ಶ್ರೀ ವಿರಕ್ತಮಠದ ಡಾ.ಗುರುಬಸವ ಮಹಾಸ್ವಾಮೀಜಿ ಹೇಳಿದರು.

ಭಾನುವಾರ ಸಂಜೆ ರೋಟರಿ ಕ್ಲಬ್‌ನಲ್ಲಿ ಡಾ.ಜಿ.ಸಿ. ಬಸವರಾಜ ಸ್ನೇಹ ವೃಂದ ಬಳಗದ ವತಿಯಿಂದ ವೈದ್ಯಕೀಯ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ ಹಿರಿಯ ಕೀಲು ಮೂಳೆ ತಜ್ಞ ಡಾ.ಜಿ.ಸಿ. ಬಸವರಾಜ ಅವರ `ಸಾಧನೆಯ ಹಾದಿಯಲ್ಲಿ’ ಕೃತಿ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಮನುಷ್ಯ-ಮನುಷ್ಯನ ನಡುವೆ ದ್ವೇಷ, ಅಸೂಯೆ ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ  ಬಾಂಧವ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪ್ರೀತಿಯ ನೆಲೆಗಟ್ಟಿನ ಮೇಲೆ ಜೀವನ ನಡೆಸಲು ಮುಂದಾಗಬೇಕು ಎಂದು ಕರೆ ನೀಡಿದರು.

ವೈದ್ಯಕೀಯ ಕ್ಷೇತ್ರಕ್ಕೂ ಧಾರ್ಮಿಕ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿದೆ. ಧಾರ್ಮಿಕ ಕ್ಷೇತ್ರವು ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರ ಕಲಿಸಿದರೆ, ವೈದ್ಯಕೀಯ ಕ್ಷೇತ್ರವು ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳುವುದು ಹೇಗೆ ಎಂದು ತಿಳಿಸಿಕೊಡುತ್ತದೆ ಎಂದು ಹೇಳಿದರು.

ಇಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳು ಹೆಚ್ಚಾಗಿವೆ. ಬುದ್ಧಿವಂತ ವೈದ್ಯರಿದ್ದಾರೆ. ಆದಾಗ್ಯೂ ಮನುಷ್ಯನ ಜೀವ ಉಳಿಸುವ ಕೊನೆಯ ಹಂತದಲ್ಲಿ `ನಮ್ಮ ಪ್ರಯತ್ನ ನಾವು ಮಾಡಿದ್ದೇವೆ. ಇನ್ನೇನಿದ್ದರೂ ದೇವರ ಕೈಯಲ್ಲಿದೆ’ ಎಂದು ವೈದ್ಯರು ಹೇಳುವುದನ್ನು ನೋಡುತ್ತೇವೆ. ಎಲ್ಲರೂ ದೇವರಿಗೆ ಶರಣಾಗಲೇ ಬೇಕು ಎಂಬುದು ಇದರ ಅರ್ಥ ಎಂದು ಶ್ರೀಗಳು ಹೇಳಿದರು.

ಡಾ.ಜಿ.ಸಿ. ಬಸವರಾಜ್ ಅವರ ಕುರಿತ ಈ ಕೃತಿ ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಬಸವರಾಜ್ ಅವರು ಸಾಕಷ್ಟು ಸಾಧನೆ ಮಾಡಿದ್ದಾರೆ. ನಾವು ಆಡುವ ಮಾತುಗಳು ನಶಿಸಿ ಹೋಗಬಹುದು. ಆದರೆ ಬರೆದ ಕೃತಿಗಳು ಶಾಶ್ವತವಾಗಿರುತ್ತವೆ. ಬಸವರಾಜ್ ಅವರ ಕುರಿತ ಕೃತಿ ಮತ್ತೊಬ್ಬರಿಗೆ ಮಾದರಿಯಾಗುವಂತಿದೆ ಎಂದು ಹೇಳಿದರು.

ಸಾಹಿತಿ ಡಾ.ಎನ್.ಜೆ. ಶಿವಕುಮಾರ್ ಕೃತಿಯ ಬಗ್ಗೆ ಮಾತನಾಡುತ್ತಾ, ಡಾ. ಜಿ. ಸಿ. ಬಸವರಾಜ್ ಅವರು  ಸರಳ ಸಜ್ಜನಿಕೆಯ ವ್ಯಕ್ತಿ.  ಹಸನ್ಮುಖಿಯಾಗಿ ಸದಾ ಲವಲವಿಕೆಯಿಂದ ಕೂಡಿದವರು. ಅಂತರ ರಾಷ್ಟ್ರೀಯ ಮಟ್ಟದಲ್ಲಿ ತರಬೇತಿ ಪಡೆದು ಸಾಕಷ್ಟು ಅನುಭವ ಪಡೆದಿದ್ದಾರೆ. ಸಾಹಿತ್ಯ, ಸಾಂಸ್ಕೃತಿಕ ಲೋಕದಲ್ಲೂ ತೊಡಗಿಸಿಕೊಂಡಿರುವ ಬಹುಮುಖ ಪ್ರತಿಭೆ ಎಂದು ಬಣ್ಣಿಸಿದರು.

ಉಪನ್ಯಾಸಕ ಬಸವರಾಜ ಹನುಮಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ವೈಯಕ್ತಿಕ ಜೀವನ ಅನುಭವಿದೆ, ಮತ್ತೊಬ್ಬರ ಪ್ರಾಣ ರಕ್ಷಣೆಗೆ ಮುಂದಾಗುವ ವೈದ್ಯ ಸೇವೆ ಅನನ್ಯವಾದದ್ದು ಎಂದರು. ಜೆಜೆಎಂ ಮೆಡಿಕಲ್ ಕಾಲೇಜು ನಿರ್ದೇಶಕ ಡಾ.ಎಂ.ಜಿ. ರಾಜಶೇಖರ್ ಕೃತಿ ಲೋಕಾರ್ಪಣೆಗೊಳಿಸಿದರು. 

ಚಿತ್ರದುರ್ಗ ಮುರುಘಾ ಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಖ್ಯಾತ ವೈದ್ಯ ಡಾ.ಸಿದ್ಧಲಿಂಗಪ್ಪ ಎಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ  ಡಾ.ಜಿ.ಸಿ. ಬಸವರಾಜ ಅವರಿಗೆ ಗೌರವ ಅಭಿನಂದನೆ ಸಲ್ಲಿಸಲಾಯಿತು.  ಒಬಿಜಿ ಪ್ರಸೂತಿ ತಜ್ಞರ ಸಂಘದ ಅಧ್ಯಕ್ಷರಾದ ಡಾ.ಜಿ.ಬಿ. ಶಿಲ್ಪ ಅತಿಥಿಗಳನ್ನು ಸ್ವಾಗತಿಸಿದರು.  ಸಾಫ್ಟ್‌ವೇರ್ ಇಂಜಿನಿಯರ್ ಶ್ವೇತ ಗುರುಪ್ರಸನ್ನ ವಂದಿಸಿದರು. ನಿವೃತ್ತ ಪ್ರಾಂಶುಪಾಲ ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿದರು. ಶಿವರುದ್ರಾಚಾರ್ ಹಾಗೂ ಸಂಗಡಿಗರು ವಚನ ಗೀತೆ ಹಾಡಿದರು.

error: Content is protected !!