ಪ್ರಚಾರದ ಕೊರತೆ, ತಾಂತ್ರಿಕ ಕಾರಣಗಳಿಂದ ಫಲ ನೀಡದ ಬೈಸಿಕಲ್ ಶೇರಿಂಗ್ ಸಿಸ್ಟಿಮ್ ಸ್ಕೀಂ
ದಾವಣಗೆರೆ, ಜು. 6- ಪಬ್ಲಿಕ್ ಬೈಸಿಕಲ್ ಶೇರಿಂಗ್ ಸಿಸ್ಟಿಮ್, ಇದು ದಾವಣಗೆರೆ ಸ್ಮಾರ್ಟ್ ಸಿಟಿಯ ಪಬ್ಲಿಕ್ ಪ್ರೈವೇಟ್ ಪಾರ್ಟ್ನರ್ ಶಿಪ್ (ಪಿಪಿಪಿ) ಯೋಜನೆ. ಸದ್ಯ ಸ್ಮಾರ್ಟ್ ಸಿಟಿಯ ಹಳ್ಳ ಹಿಡಿದಿರುವ ಯೋಜನೆಗಳ ಪೈಕಿ ಇದೂ ಒಂದು.
ವಿದ್ಯಾರ್ಥಿಗಳು, ನೌಕರರು, ಸಾರ್ವಜನಿಕರನ್ನು ಗಮನದಲ್ಲಿಟ್ಟುಕೊಂಡು 9.99 ಕೋಟಿ ರೂಪಾಯಿ ವೆಚ್ಚದಲ್ಲಿ ರೂಪಿಸಲಾಗಿರುವ ಈ ಯೋಜನೆ ನಿರೀಕ್ಷಿತ ಫಲ ನೀಡಿಲ್ಲ. ಇದಕ್ಕೆ ಮುಖ್ಯ ಕಾರಣ ಪ್ರಚಾರದ ಕೊರತೆ.
ದಾವಣಗೆರೆ ನಗರದ ವಿವಿಧ 20 ಸ್ಥಳಗಳಲ್ಲಿ ಬೈಸಿಕಲ್ ಡಾಕಿಂಗ್ ಸೆಂಟರ್ಗಳನ್ನು ಸ್ಥಾಪಿಸಲಾಗಿದೆ. 100 ಸಾಮಾನ್ಯ ಬೈಸಿಕಲ್ಗಳು ಹಾಗೂ ಬ್ಯಾಟರಿ ಚಾಲಿತ 100 ಇ ಬೈಸಿಕಲ್ಗಳು ಈ ಸೆಂಟರ್ಗಳಲ್ಲಿವೆ. ರಸ್ತೆ ಬದಿಯಲ್ಲಿ ಈ ಸೈಕಲ್ಗಳಿದ್ದರೂ ಇವುಗಳ ಕುರಿತ ಮಾಹಿತಿ ಶೇ.90ರಷ್ಟು ಜನರಿಗೆ ತಿಳಿದಿಲ್ಲ. ಬಹಳಷ್ಟು ಜನರು ಇವು ಮಾರಾಟಕ್ಕೆ ಇಟ್ಟಿರುವ ಸೈಕಲ್ಗಳೆಂದೇ ಭಾವಿಸಿದ್ದಾರೆ. ಕೆಲವರು ಇದು ಸೈಕಲ್ ಹಾಗೂ ಸ್ಟ್ಯಾಂಡ್ ಎಂದು ತಿಳಿದು ಬೈಕುಗಳನ್ನು ಪಾರ್ಕ್ ಮಾಡಿದ ಉದಾಹರಣೆಗಳೂ ಇವೆ.
ದಾವಣಗೆರೆ ರೈಲ್ವೇ ನಿಲ್ದಾಣದ ಬಳಿ ಇರುವ ಸೈಕಲ್ಗಳ ಸ್ಟ್ಯಾಂಡ್ನಲ್ಲಿ ಬಟ್ಟೆಗಳ ಬ್ಯಾಗ್ಗಳನ್ನು ಮಾರಾಟ ಮಾಡುತ್ತಿರುವುದು.
ನಿರ್ವಹಣಾ ಅವಧಿ ಇನ್ನೂ ಆರಂಭವಾಗಿಲ್ಲ !
ಬೈಸಿಕಲ್ ಶೇರಿಂಗ್ ಯೋಜನೆ 9.99 ಕೋಟಿ ರೂ.ಗಳ ಯೋಜನೆ. ಪ್ರತಿ ವರ್ಷ 1 ಕೋಟಿ ರೂ.ಗಳಂತೆ ಹತ್ತು ವರ್ಷಗಳ ಕಾಲಕ್ಕೆ 10 ಕೋಟಿ ಎಂಬ ಅಂದಾಜಿನ ಪ್ರಕಾರ ಹಣ ನಿಗದಿ ಮಾಡಲಾಗಿದ್ದು, ನಿಯಮಗಳಂತೆ ಎಲ್ಲಾ ಸೌಕರ್ಯಗಳನ್ನು ನೀಡಿದ ದಿನದಿಂದ ಯೋಜನಾ ಅವಧಿ ಆರಂಭವಾಗುತ್ತದೆ. ಮುಂಬೈನ ಕಂಪನಿಯೊಂದಕ್ಕೆ ನಿರ್ವಹಣಾ ಹೊಣೆ ನೀಡಲಾಗಿದೆ. ಆದರೆ ಕೆಲವು ಡಾಕಿಂಗ್ ಸ್ಟೇಷನ್ಗಳಲ್ಲಿ ಇನ್ನೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸದ ಕಾರಣ, ಗುತ್ತಿಗೆದಾರರಿಗೆ ಇನ್ನೂ ಸ್ಮಾರ್ಟ್ ಸಿಟಿ ಲಿಮಿಟೆಡ್ನಿಂದ ಹಣ ನೀಡಿಲ್ಲ. ಅಂದರೆ ಅಧಿಕಾರಿಗಳ ಪ್ರಕಾರ ಬೈಸಿಕಲ್ ಶೇರಿಂಗ್ ಯೋಜನೆ ಗುತ್ತಿಗೆ ಪಡೆದಿರುವವರಿಗೆ ಇನ್ನೂ `ಕಮರ್ಷಿಯಲ್ ಆಪರೇಷನ್ ಡೇಟ್’ ಕೊಟ್ಟಿಲ್ಲ. ಜೊತೆಗೆ ನಿರ್ವಹಣಾ ವೆಚ್ಚವನ್ನೂ ನೀಡಿಲ್ಲ ಎನ್ನುತ್ತಾರೆ ಸ್ಮಾರ್ಟ್ ಸಿಟಿ ಲಿಮಿಟೆಡ್ನ ಅಧಿಕಾರಿಗಳು.
ಸಹಾಯ ಸಂಖ್ಯೆಯೇ ಇನ್ವ್ಯಾಲಿಡ್
ಡಾಕಿಂಗ್ ಸೆಂಟರ್ಗಳಲ್ಲಿ ನಿಮಗೆ ಮಾಹಿತಿ ಅಥವಾ ಸಹಾಯ ಬೇಕಾದರೆ ಮೊಬೈಲ್ ಸಂಖ್ಯೆ 9448449690 ಸಂಖ್ಯೆಗೆ ಕರೆ ಮಾಡಿ ಎಂಬ ನಾಮಫಲಕವಿದೆ. ಕರೆ ಮಾಡಿದ ನಂಬರ್ ಇನ್ವ್ಯಾಲಿಡ್ ಎಂಬ ಉತ್ತರ ಬರುತ್ತದೆ.
ಬಳಕೆ ಹೇಗೆ? ಎಷ್ಟು ಹಣ?
ಸೈಕಲ್ಗಳ ಬಳಕೆಗೆ ಮೊದಲು `ಕೂ ರೈಡ್’ ಆಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಆಧಾರ್ ಅಥವಾ ಇನ್ನಿತರೆ ಯಾವುದೇ ಸರ್ಕಾರಿ ಭಾವಚಿತ್ರವುಳ್ಳ ಗುರುತಿನ ಚೀಟಿಯೊಂದಿಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಅದರಲ್ಲಿನ ವ್ಯಾಲೆಟ್ ಬ್ಯಾಲೆನ್ಸ್ ನಿರ್ವಹಿಸಬೇಕು. ವ್ಯಾಲೆಟ್ನಲ್ಲಿ ಹಣ ಇಲ್ಲದಿದ್ದರೆ ಫೋನ್ ಪೇ, ಗೂಗಲ್ ಪೇ, ಡೆಬಿಟ್ ಕಾರ್ಡ್, ಯುಪಿಐ ಸಹಾಯದಿಂದ ವ್ಯಾಲೆಟ್ ಖಾತೆಗೆ ಹಣ ವರ್ಗಾಯಿಸಿಕೊಳ್ಳಬೇಕಾಗುತ್ತದೆ. ವ್ಯಾಲೆಟ್ನಲ್ಲಿ ಕನಿಷ್ಟ 50 ರೂ. ಇರಬೇಕಾಗುತ್ತದೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಸೈಕಲ್ ಅನ್ ಲಾಕ್ ಮಾಡಿಕೊಂಡು ಸೈಕಲ್ ಬಳಸಬಹುದು.
ಸಾಮಾನ್ಯ ಸೈಕಲ್ ಬಳಕೆಗೆ 30 ನಿಮಿಷಕ್ಕೆ ರೂ.10, ಇ-ಬೈಕ್ ಸವಾರಿಗೆ 15 ನಿಮಿಷಕ್ಕೆ ರೂ.10 ಕಡಿತವಾಗುತ್ತದೆ. ಸೈಕಲ್ ಬಳಕೆ 30 ದಿನಗಳಿಗೆ ರೂ.100, 3 ತಿಂಗಳಿಗೆ 250, 6 ತಿಂಗಳಿಗೆ 400 ರೂ. ಪಾವತಿಸಿ ಚಂದಾದಾರರಾಗಬಹುದು. ಪ್ರತಿ ಸೈಕಲ್ ಸವಾರಿಗೆ 30 ನಿಮಿಷ ಹಾಗೂ ಇ-ಬೈಕ್ ಸವಾರಿಗೆ 15 ನಿಮಿಷಗಳ ಸವಾರಿ ಉಚಿತವಿದ್ದು, ನಂತರದ ಸೈಕಲ್ ಬಳಕೆಗೆ ಹಣ ನೀಡಬೇಕು.
ಸಂಸದರು ಅಂದೇ ಅನುಮಾನ ವ್ಯಕ್ತಪಡಿಸಿದ್ದರು
2019ರ ಜನವರಿ 24ರಂದು ನಡೆದ ಸ್ಮಾರ್ಟ್ ಸಿಟಿ ಸಲಹಾ ಸಮಿತಿ ಸಭೆಯಲ್ಲಿ ಸೈಕಲ್ ಯೋಜನೆ ಬಗ್ಗೆ ಅಧಿಕಾರಿಗಳು ಪ್ರಸ್ತಾಪಿಸಿದ್ದಾಗ ರಸ್ತೆ ಹಾಗೂ ಫುಟ್ ಪಾತ್ ವ್ಯವಸ್ಥೆ ಸರಿ ಇಲ್ಲದ್ದರಿಂದ ಈ ಯೋಜನೆ ಯಶಸ್ವಿ ಯಾಗುವ ಕುರಿತು ಅನುಮಾನ ವ್ಯಕ್ತಪಡಿಸಿದ್ದ ಸಂಸದರು, ಈ ಯೋಜನೆ ಬದಲಾಗಿ ಬೇರೆ ಏನಾದರೂ ಮಾಡಲು ಸಾಧ್ಯವಿದ್ದರೆ ಪರಿಶೀಲಿಸಿ ಎಂದು ಸಲಹೆ ನೀಡಿದ್ದರು. ಆದಾಗ್ಯೂ ಅಧಿಕಾರಿಗಳು ಈ ಯೋಜನೆ ಜಾರಿಗೆ ಒಲವು ತೋರಿಸಿದ್ದರು.
20 ಡಾಕಿಂಗ್ ಸೆಂಟರ್ಗಳು
ಶಾಮನೂರು ರಸ್ತೆ ಬಿಐಇಟಿ ಕಾಲೇಜು ಹಾಗೂ ಹಿಂದಿನ ದ್ವಾರದ ಗೇಟ್ ಬಳಿ ಪ್ರತ್ಯೇಕವಾಗಿ ಅಳವಡಿಸಲಾಗಿದೆ. ನಿಜಲಿಂಗಪ್ಪ ಬಡಾವಣೆ ರಿಂಗ್ ರಸ್ತೆಯ ಕ್ಲಾಕ್ ಸರ್ಕಲ್, ಪಿ.ಬಿ ರಸ್ತೆಯ ಬಿಎಸ್ಎನ್ಎಲ್ ವೃತ್ತ, ಡಿಸಿ ಕಚೇರಿ, ಪಿ.ಬಿ ರಸ್ತೆಯ ಜಿಎಂಐಟಿ ಕಾಲೇಜು, ರೈಲ್ವೇ ನಿಲ್ದಾಣ, ಕೆಎಸ್ಆರ್ಟಿಸಿ ಹೊಸ ಬಸ್ ನಿಲ್ದಾಣದ ಸಮೀಪದಲ್ಲಿರುವ ಫೈರ್ ಸ್ಟೇಷನ್ ಆಫೀಸ್, ಸಿಜಿ ಆಸ್ಪತ್ರೆ, ವಿದ್ಯಾನಗರ ಕೊನೆಯ ಬಸ್ ನಿಲ್ದಾಣ, ನೂತನ ಕಾಲೇಜು, ನೇತಾಜಿ ಸುಭಾಸ್ ಚಂದ್ರ ಬೋಸ್ ಇನ್ ಡೋರ್ ಸ್ಟೇಡಿಯಂ, ಕಾಳಿದಾಸ ಸರ್ಕಲ್, ಚಿಕ್ಕಮ್ಮಣಿ ಬಡಾವಣೆ, ಐಟಿಐ ಕಾಲೇಜು, ಡಿಆರ್ಆರ್ ಪಾಲಿಟೆಕ್ನಿಕ್ ಕಾಲೇಜು ಮತ್ತು ಡಿಆರ್ಎಂ ಸೈನ್ಸ್ ಕಾಲೇಜು ಬಳಿ ಬೈಸಿಕಲ್ ಸೆಂಟರ್ ಅಳವಡಿಸಲಾಗಿದೆ.
ಜನರಲ್ಲಿ ಅರಿವು ಮೂಡಿಸಿದಾಗ ಮಾತ್ರ ಯಾವುದೇ ಜನೋಪಯೋಗಿ ಯೋಜನೆಗಳು ಯಶಸ್ವಿಯಾಗಲು ಸಾಧ್ಯವಿದೆ. ಆದರೆ ಈ ಬೈಸಿಕಲ್ ಶೇರಿಂಗ್ ಯೋಜನೆಯ ಮಾಹಿತಿ ಯನ್ನು ಜನರಿಗೆ ತಲುಪಿಸುವಲ್ಲಿ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಯೋಜನೆ ಆರಂಭವಾಗಿ ಹಲವು ವರ್ಷಗಳಾಗಿದ್ದರೂ ನಿರೀ ಕ್ಷಿತ ಮಟ್ಟದಲ್ಲಿ ಸೈಕಲ್ಗಳ ಬಳಕೆಯಾಗುತ್ತಿಲ್ಲ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಹುತೇಕ ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದ್ದು, ಮೊಬೈಲ್ ಇಲ್ಲದೇ ಇರುವುದು ಸೈಕಲ್ ಬಳಸಲು ವಿದ್ಯಾರ್ಥಿಗಳಿಗೆ ಸಾಧ್ಯವಾಗಿಲ್ಲ ಎಂಬುದು ಒಂದು ಕಾರಣವಾದರೆ, ಜನರಲ್ಲಿ ಬೈಕ್ ಮೇಲಿರುವ ವ್ಯಾಮೋಹ, ಸೈಕಲ್ ಬಗೆಗಿನ ನಿರಾಸಕ್ತಿಯೂ ಯೋಜನೆ ವಿಫಲತೆಗೆ ಕಾರಣ.
ಜೊತೆಗೆ ಸೈಕಲ್ಗಳ ಬಳಕೆಗೆ ಅನೇಕ ತಾಂತ್ರಿಕ ದೋಷಗಳಿವೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಲು ಸಾಧ್ಯವಾಗುತ್ತಿಲ್ಲ. ಸ್ಕ್ಯಾನ್ ಮಾಡಿದರೆ ಸೈಕಲ್ ಅನ್ಲಾಕ್ ಆಗುತ್ತಿಲ್ಲ ಎಂಬ ದೂರುಗಳಿವೆ. ಈಗಾಗಲೇ ಇಡಲಾಗಿರುವ ಸೈಕಲ್ಗಳಲ್ಲಿ ಹಲವಾರು ಸೈಕಲ್ಗಳ ಬಿಡಿ ಭಾಗಗಳು ಹಾಳಾಗಿ ಹೋಗಿವೆ. ಇದರಿಂದ ಮೊದಲು ಸೈಕಲ್ ಬಳಸಿದ್ದವರು, ಮತ್ತೆ ಬಳಕೆಗೆ ನಿರ್ಲಕ್ಷ್ಯ ವಹಿಸಿದ್ದಾರೆ.
ರೈಲ್ವೇ ನಿಲ್ದಾಣ ಹಾಗೂ ಜಿಎಂಐಟಿ ಬಳಿಯ ಡಾಕಿಂಗ್ ಸೆಂಟರ್ಗಳಲ್ಲಿ ಹೆಚ್ಚು ಸೈಕಲ್ಗಳು ಬಳಕೆಯಾಗುತ್ತಿವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ರೈಲ್ವೇ ನಿಲ್ದಾಣದ ಬಳಿ ಇರುವ ಸೈಕಲ್ ಗಳ ಮುಂದೆ ಫುಟ್ಪಾತ್ ವ್ಯಾಪಾರಿಗಳು ಬ್ಯಾಗುಗಳನ್ನು ಮಾರಾಟ ಮಾಡಲಾರಂಭಿಸಿದ್ದಾರೆ. ಇಲ್ಲಿ ಸೈಕಲ್ಗಳು ಹೊರ ತೆಗೆಯುವುದೂ ತುಸು ಕಷ್ಟವೇ.
ಹತ್ತಿರ ಹತ್ತಿರ ಹತ್ತು ಕೋಟಿಯ ಯೋಜನೆ. 20 ಕಡೆ 200 ಸೈಕಲ್ಗಳಿವೆ. ಇದು ಉಪಯೋಗವಾಗುತ್ತಿದೆಯೇ? ಎಷ್ಟು ಸೈಕಲ್ಗಳು ಬಳಕೆಯಾಗುತ್ತಿವೆ? ಎಂಬ ಮಾಹಿತಿಯೂ ಅಧಿಕಾರಿಗಳ ಬಳಿ ಇಲ್ಲದಿರುವುದು ದುರಂತ.
– ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ