ಜಿಲ್ಲಾಭಿವೃದ್ಧಿಗೆ ಶ್ರಮಿಸಿದ ಸಂಸದ ಸಿದ್ದೇಶ್ವರ

ಜಿಲ್ಲಾಭಿವೃದ್ಧಿಗೆ ಶ್ರಮಿಸಿದ ಸಂಸದ ಸಿದ್ದೇಶ್ವರ

ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮೆಚ್ಚುಗೆ

ದಾವಣಗೆರೆ, ಜು. 5- ಸರಳ, ಸಜ್ಜನಿಕೆಯ, ನೇರ ನುಡಿಯ ವ್ಯಕ್ತಿತ್ವವುಳ್ಳ ಸಂಸದ ಜಿ.ಎಂ. ಸಿದ್ದೇಶ್ವರ ಭಾಜಪದ ನಿಷ್ಠಾವಂತ ಕಾರ್ಯಕರ್ತ ರಾಗಿ, ಸಂಸದರಾಗಿ, ಕೇಂದ್ರ ಸಚಿವರಾಗಿ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ವಾಣಿ ಹೋಂಡಾ ಶೋ ರೂಂ ಆವರಣದಲ್ಲಿ ಇಂದು ಹಮ್ಮಿಕೊಂಡಿದ್ದ ಸಂಸದ
ಸಿದ್ದೇಶ್ವರ ಅವರ 71ನೇ ಜನ್ಮದಿನಾಚರಣೆ ಕಾರ್ಯ ೆಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ದಾವಣಗೆರೆಯನ್ನು ಸುಂದರ ನಗರವನ್ನಾಗಿಸಲು ಶ್ರಮಿಸಿದ್ದಾರೆ. ಬಡವರ ಪರ ವಿಶೇಷ ಕಾಳಜಿಯನ್ನು ಹೊಂದಿರುವ ಸಿದ್ದೇಶ್ವರ ಅವರು ತಮ್ಮ ತಂದೆ ದಿ. ಜಿ.ಮಲ್ಲಿಕಾರ್ಜುನಪ್ಪ ಅವರ ಹಾದಿಯಲ್ಲಿಯೇ ಮುನ್ನಡೆದು ಅಭಿವೃದ್ಧಿ ಪರ ಚಿಂತನೆಯನ್ನು ಮೈಗೂಡಿಸಿಕೊಂಡು ಬಂದಿದ್ದಾರೆಂದು ಹೇಳಿದರು.

ಸತತ ನಾಲ್ಕು ಬಾರಿ ಸಂಸದರಾಗಿ ಆಯ್ಕೆ ಯಾಗುವ ಮೂಲಕ ದಾವಣಗೆರೆ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಭದ್ರಕೋಟೆಯನ್ನಾಗಿ ಬಲಪಡಿಸಿರುವುದು ಅವಿಸ್ಮರಣೀಯ ಎಂದರು.

ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದಂತಹ ಉನ್ನತ ಶಿಕ್ಷಣ ಸಂಸ್ಥೆಯನ್ನು ಬೃಹದಾಕಾರವಾಗಿ ಬೆಳಸುವ ನಿಟ್ಟಿನಲ್ಲಿ ಸಿದ್ದೇಶ್ವರ ಹಾಗೂ ಅವರ ಸಹೋದರರ ಪಾತ್ರ ತುಂಬಾ ಮಹತ್ವದ್ದು. ಅವರ ಸೇವೆ ಈ ನಾಡಿಗೆ ಇನ್ನು ಹೆಚ್ಚಿನ ಮಟ್ಟದಲ್ಲಿ ದೊರಕಲಿ ಎಂದು ಆಶಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಮಾತನಾಡಿ, ಉತ್ತಮ ಸಂಸದ ಹೇಗಿರಬೇಕು ಎಂಬುದನ್ನು ಅವರ ಅಭಿವೃದ್ಧಿ ಕಾರ್ಯಗಳ ಮೂಲಕ ಜಿ.ಎಂ. ಸಿದ್ದೇಶ್ವರ ಜನತೆಗೆ ತೋರಿಸಿಕೊಟ್ಟಿದ್ದಾರೆ. ನೂರು ಕಾಲ ಬಾಳುವ ಮೂಲಕ ಇನ್ನೂ ಹೆಚ್ಚಿನ ಸಂಪತ್ತು, ಅಧಿಕಾರ, ಶಕ್ತಿ ನೀಡಲೆಂದು ಶುಭ ಹಾರೈಸಿದರು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ರೈತಾಪಿ ಕುಟುಂಬದಿಂದ
ಬಂದಂತಹ ಸಿದ್ದೇಶ್ವರ ಅವರು ಅವರ ತಂದೆ
ದಿ. ಮಲ್ಲಿಕಾರ್ಜುನಪ್ಪ ಅವರ ಮಾರ್ಗದರ್ಶನದಂತೆ ಮುಂದಡಿ ಇಟ್ಟಿದ್ದು, ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಿಗೆ ನಿರಂತರವಾಗಿ ಭೇಟಿ ನೀಡಿ, ಸಮಸ್ಯೆಗಳನ್ನು ಆಲಿಸುವ ಜೊತೆಗೆ ಪ್ರಗತಿ ಕಾರ್ಯಗಳನ್ನು ಮಾಡಿ ಜನಪ್ರಿಯತೆ ಗಳಿಸಿದ್ದಾರೆಂದರು.

ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ದೇಶಕ್ಕೆ ಮೋದಿ ಹೇಗೋ, ಕರ್ನಾಟಕಕ್ಕೆ ಯಡಿಯೂರಪ್ಪ ನಾಯಕರು. ರಾಜ್ಯಕ್ಕೆ ಬಿಎಸ್‌ವೈ ಕೊಡುಗೆ ಅನನ್ಯವಾದುದು ಎಂದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಕಳೆದ 20 ವರ್ಷಗಳಿಂದ ಸಂಸದನಾಗಿ ಸೇವೆ ಮಾಡಲು ಜನ ಆಶೀರ್ವದಿಸಿದ್ದಾರೆ. ಈ ಬಾರಿಯೂ ನನಗೆ ಟಿಕೆಟ್ ಸಿಗುತ್ತದೆ ಎಂಬ ಆಶಾಭಾವನೆ ಹೊಂದಿದ್ದೇನೆ. ಮತ್ತೊಮ್ಮೆ ತಾವು ನನಗೆ ಆಶೀರ್ವದಿಸುವಂತೆ ಮನವಿ ಮಾಡಿದರು.

ಪಕ್ಷ ಯಾರಿಗೇ ಟಿಕೇಟ್ ನೀಡಿದರೂ ಪ್ರಾಮಾಣಿಕನಾಗಿ ದುಡಿಯುತ್ತೇನೆ. ಜನತೆಯ ಋಣ ತೀರಿಸಲು ಪ್ರಯತ್ನಿಸುತ್ತೇನೆ. ಕ್ಷೇತ್ರದ ಜನರ ಸಹಕಾರ ಅತ್ಯಗತ್ಯ ಎಂದು ಹೇಳಿದರು.

ವಿಶ್ವಮಾನವ ನರೇಂದ್ರ ಮೋದಿಯವರು ಸಹ ಎರಡು ಬಾರಿ ಪ್ರಧಾನಿಯಾಗಿದ್ದು, 2024 ರ ಚುನಾವಣೆಯಲ್ಲಿ ಗೆಲ್ಲಿಸಿ ಮತ್ತೊಮ್ಮೆ ಪ್ರಧಾನಿ ಮಾಡುವಂತೆ ಮನವಿ ಮಾಡಿದ ಅವರು, ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಕೇವಲ ಭಾರತದ ಜನರ ರಕ್ಷಣೆಯನ್ನಷ್ಟೇ ಅಲ್ಲದೇ ನೆರೆಯ 80 ರಾಷ್ಟ್ರಗಳಿಗೆ ಉಚಿತ ವ್ಯಾಕ್ಸಿನ್ ಪೂರೈಸಿ ಜನರ ಜೀವರಕ್ಷಣೆ ಮಾಡಿರುವುದು ಶ್ಲ್ಯಾಘನೀಯ ಎಂದರು.

ಮಾಜಿ ಸಚಿವ ಮುರುಗೇಶ್ ನಿರಾಣಿ, ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ, ಹರಿಹರ ಶಾಸಕ ಬಿ.ಪಿ. ಹರೀಶ್ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಶ್ರೀಮತಿ ಗಾಯತ್ರಿ ಸಿದ್ದೇಶ್ವರ, ಜಿ.ಎಂ. ಲಿಂಗರಾಜ್, ಜಿ.ಎಂ. ಪ್ರಸನ್ನಕುಮಾರ್, ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಪ್ರೊ.ಎನ್. ಲಿಂಗಣ್ಣ, ಡಾ. ಎ.ಹೆಚ್. ಶಿವಯೋಗಿಸ್ವಾಮಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ದೂಡಾ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ್, ರಾಜನಹಳ್ಳಿ ಶಿವಕುಮಾರ್, ಕೆ.ಎಂ. ಸುರೇಶ್, ಎ.ವೈ. ಪ್ರಕಾಶ್, ಮುಖಂಡರಾದ ಲೋಕಿಕೆೇೆರೆ ನಾಗರಾಜ್, ಎನ್.ಎ. ಮುರುಗೇಶ್, ಶ್ರೀನಿವಾಸ ದಾಸಕರಿಯಪ್ಪ, ಕೊಂಡಜ್ಜಿ ಜಯಪ್ರಕಾಶ್‌, ಹೆಚ್.ಎನ್. ಶಿವಕುಮಾರ್, ಶಿವರಾಜ್ ಪಾಟೀಲ್, ಅಣಬೇರು ಜೀವನಮೂರ್ತಿ, ಸೊಕ್ಕೆ ನಾಗರಾಜ್‌, ಶಿವಲಿಂಗಪ್ಪ, ಹೆಚ್.ಎಸ್. ಶಿವಕುಮಾರ್, ಬಿ.ಟಿ. ಸಿದ್ದಪ್ಪ, ಶ್ಯಾಮ್, ಆರ್‌.ಎಲ್‌. ಶಿವಪ್ರಕಾಶ್‌, ಧನಂಜಯ ಕಡ್ಲೇಬಾಳು, ಗ್ಯಾರಹಳ್ಳಿ ಶಿವು ಶಾಮನೂರು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!