ಮಳೆಗಾಲದಲ್ಲಿ ರೋಗಗಳು ಹೆಚ್ಚಾಗುವ ಆತಂಕ
ದಾವಣಗೆರೆ, ಜು. 30- ಜೀವನದಲ್ಲಿ ಒಂದು ಸ್ವಂತ ಮನೆ ನಿರ್ಮಿಸಿಕೊಳ್ಳಬೇಕು. ಕೊನೆ ಪಕ್ಷ ದಾವಣಗೆರೆಯಂತಹ ನಗರದಲ್ಲಿ ಒಂದು ಸೈಟನ್ನಾದರೂ ಕೊಳ್ಳಬೇಕು ಎಂಬುದು ಮಧ್ಯಮ ವರ್ಗದ ಜನರ ಕನಸು.
ಬೆಳ್ಳಿ-ಬಂಗಾರ ಕೊಳ್ಳುವುದು ಅಥವಾ ಮನೆಯಲ್ಲಿ ಹಣ ಇಟ್ಟುಕೊಳ್ಳುವುದಕ್ಕಿಂತ ಸೈಟುಗಳನ್ನು ಖರೀದಿಸಿ ಇಟ್ಟುಕೊಂಡರೆ ಉತ್ತಮ. ಮುಂದಿನ ದಿನಗಳಲ್ಲಿ ಅದರ ಬೆಲೆ ಯೂ ಹೆಚ್ಚಾಗುತ್ತದೆ ಎಂಬುದು ಹಣ ಇದ್ದವರ ದೂರಾಲೋಚನೆ. ಇದಕ್ಕೆ ಪುಷ್ಠಿ ಎಂಬಂತೆ ಕಳೆದ ಕೆಲವು ವರ್ಷಗಳಲ್ಲಿ ನಿವೇಶನಗಳ ಬೆಲೆ ದುಪ್ಪಟ್ಟಾಗಿರುವುದೂ ನಿಜವೇ.
ರಿಯಲ್ ಎಸ್ಟೇಟ್ ಏಜೆಂಟ್‌ಗಳ ಮಾಹಿತಿ ಪ್ರಕಾರ ದಾವಣಗೆರೆಗೆ ಕರ್ತವ್ಯ ನಿಮಿತ್ತ್ಯ ವಿವಿಧ ಇಲಾಖೆಗಳಿಂದ ಬರುವ ಸರ್ಕಾರಿ ಅಧಿಕಾರಿಗಳು, ನೌಕರರು ಅಗತ್ಯವೋ ಅನಗತ್ಯವೋ ನಗರದಲ್ಲೊಂದು ಸೈಟುಕೊಳ್ಳದೇ ಇರಲಾರರು.
ಹೀಗಾಗಿ ದಾವಣಗೆರೆ ಸುತ್ತ ಮುತ್ತಲಿನ ಜಮೀನುಗಳು ಜನವಸತಿ ಪ್ರದೇಶಗಳಾಗು ತ್ತಿವೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿವೇಶನಗಳನ್ನಾಗಿ ಮಾರ್ಪಡಿಸಲಾಗು ತ್ತಿದೆ. ಇದು ಬಿಲ್ಡರ್‌ಗಳಿಗೆ, ರಿಯಲ್ ಎಸ್ಟೇಟ್ ಎಜೆಂಟರ್‌ಗಳಿಗೆ ಅತಿ ಹೆಚ್ಚು ಲಾಭ ತಂದು ಕೊಡುವ ಕೆಲಸವಾಗಿದೆ.
ಅಂದಾಜಿನ ಪ್ರಕಾರ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ 41 ಸಾವಿರಕ್ಕೂ ಹೆಚ್ಚು ಖಾಲಿ ನಿವೇಶನಗಳಿವೆ. ಮಾಲೀಕರ ಅಸಡ್ಡೆಯಿಂದಾಗಿ ನಿರ್ವಹಣೆ ಇಲ್ಲದೆ ತ್ಯಾಜ್ಯ ಸಂಗ್ರಹಣಾ ಘಟಕಗಳಾಗಿ ಮಾರ್ಪಟ್ಟಿವೆ. ಡೆಂಗ್ಯೂ ಸೇರಿದಂತೆ ಅನೇಕ ಕಾಯಿಲೆಗಳ ಕೊಡುಗೆಯನ್ನು ನಗರಕ್ಕೆ ನೀಡುತ್ತಿವೆ. ಹಂದಿಗಳ ಸುರಕ್ಷಿತ ತಾಣವಾಗಿವೆ. ಗಿಡ ಗಂಟಿಗಳು ಬೆಳೆದು ಹುಳ-ಉಪ್ಪಡಿಗಳ ತಾಣವೂ ಆಗುತ್ತಿವೆ.
ಓಣಿಯಲ್ಲೊಂದು ಖಾಲಿ ನಿವೇಶನ ಇತ್ತೆಂದರೆ ಸಾಕು, ರಾತ್ರಿಯಾಗುತ್ತಲೇ ಕಸ ತುಂಬಿದ ಪ್ಲಾಸ್ಟಿಕ್ ಚೀಲಗಳು, ತೆಂಗಿನ ಚಿಪ್ಪುಗಳು ಸೇರಿದಂತೆ ತ್ಯಾಜ್ಯ ವಸ್ತುಗಳೇ ಅಲ್ಲಿ ಬಂದು ಬೀಳುತ್ತವೆ. ನಿವೇಶನದ ಅಕ್ಕ ಪಕ್ಕ ದವರು ನೈರ್ಮಲ್ಯಕ್ಕೆ ಹೆದರಿ ಕಸ ಹಾಕದಿ ದ್ದರೂ, ಕಸ ಹಾಕಬೇಡಿ ಎಂದು ಇತರರಿಗೆ ಹೇಳಿದ್ದರೂ, ರಾತ್ರಿ ಕತ್ತಲಾಗುತ್ತಿದ್ದಂತೆ ಕವರ್‌ಗಳು ರಾಕೆಟ್ ವೇಗದಲ್ಲಿ ಎಲ್ಲಿಂದಲೋ ಬಂದು ಬೀಳುತ್ತಿರುತ್ತವೆ. ಇದರ ಜೊತೆ ಮದ್ಯದ ಬಾಟಲೀಗಳು ಸಹ ಹೆಚ್ಚಾಗಿವೆ. ಇದು ಮಹಾನಗರ ಪಾಲಿಕೆ ಅಧಿಕಾರಿಗಳಿಗೂ ತಲೆ ನೋವಿನ ವಿಷಯ.
ನಿವೇಶನದ ಮಾಲೀಕರು ಅವುಗಳನ್ನು ನಿರ್ವಹಣೆ ಮಾಡಬೇಕು ಎಂಬ ನಿಯಮವಿದೆ. ಕೊಂಡ ನಿವೇಶನದ ಸುತ್ತ ಕಾಂಪೌಂಡ್ ನಿರ್ಮಿಸಿ, ಆಗಾಗ್ಗೆ ಸ್ವಚ್ಛಗೊಳಿಸಬೇಕು. ಆದರೆ ಈ ನಿಯಮವನ್ನು ಯಾರೂ ಪಾಲಿಸುತ್ತಿಲ್ಲ.
ಈಗಾಗಲೇ ಅನೇಕ ಬಾರಿ ನಿವೇಶನಗಳನ್ನು ಸ್ವಚ್ಛಗೊಳಿಸವಂತೆ ಮಾಲೀಕರಿಗೆ ನೋಟೀಸ್ ನೀಡಿದ್ದೇವೆ. ಕಸ ತುಂಬಿದ ನಿವೇಶನಗಳನ್ನು ಪಾಲಿಕೆಯಿಂದಲೇ ಸ್ವಚ್ಛಗೊಳಿಸಿ ಮಾಲೀಕರಿಂದ ಹಣ ವಸೂಲಿ ಮಾಡುತ್ತೇವೆ ಎಂದು ಆರಂಭ ಶೂರತ್ವ ತೋರಿದ್ದ ಪಾಲಿಕೆ ಅಧಿಕಾರಿಗಳು ಮತ್ತೆ ಸುಮ್ಮನಾಗಿದ್ದಾರೆ. ಮಾಲೀಕರು ಎಲ್ಲಿದ್ದಾರೆ ಎಂದು ಪತ್ತೆ ಹಚ್ಚುವ ಕಷ್ಟವೂ ಸಹ ಈ ಮೌನಕ್ಕೆ ಕಾರಣವಾಗಿರಬಹುದು.
ಆದರೆ ಮಳೆಗಾಲ ಆರಂಭವಾಗಿದೆ. ಸೈಟುಗಳಲ್ಲಿ ನೀರು ನಿಂತು ಕೊಳಚೆ ತಾಣವಾಗುತ್ತಿವೆ. ಸೊಳ್ಳೆಗಳು ಹೆಚ್ಚಾಗುತ್ತಿವೆ. ಹಂದಿ ನಾಯಿಗಳ ವಾಸ ಸ್ಥಾನಗಳಾಗುತ್ತಿವೆ. ಮಹಾನಗರ ಪಾಲಿಕೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಿ, ತಡೆಗೋಡಿ ನಿರ್ಮಿಸಿ, ಮಾಲೀಕರಿಂದ ಖರ್ಚು ವಸೂಲಿ ಮಾಡುವ ಅಥವಾ ದಂಡ ಹಾಕುವ ಪ್ರಕ್ರಿಯೆ ಚುರುಕುಗೊಳಿಸಬೇಕಿದೆ.
– ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ