ದಾವಣಗೆರೆ, ಜೂ. 25 – ಮುಂಗಾರು ವಿಳಂಬದ ಹಿನ್ನೆಲೆಯಲ್ಲಿ ನಗರಕ್ಕೆ ಕುಡಿಯುವ ನೀರಿನ ಮೂಲಗಳಾದ ರಾಜನಹಳ್ಳಿ ಜಾಕ್ವೆಲ್ ಮತ್ತು ಟಿವಿ ಸ್ಟೇಷನ್ ಕೆರೆಗಳಿಗೆ ಶನಿವಾರ ಪಾಲಿಕೆ ಮೇಯರ್ ಮತ್ತು ಸದಸ್ಯರು, ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಮೇಯರ್ ಬಿ.ಹೆಚ್. ವಿನಾಯಕ ಮತ್ತು ಪಾಲಿಕೆ ಸದಸ್ಯರು, ಆಯುಕ್ತರಾದ ಶ್ರೀಮತಿ ರೇಣುಕಾ ಸೇರಿದಂತೆ ಅಧಿಕಾರಿಗಳು ರಾಜನಹಳ್ಳಿಯ ತುಂಗಭದ್ರಾ ನದಿ ಬಳಿ ಇರುವ ಪಾಲಿಕೆಯ ನೀರು ಸರಬರಾಜು ಜಾಕ್ವೆಲ್ಗೆ ಭೇಟಿ ನೀಡಿ ನದಿಯಲ್ಲಿ ನೀರಿನ ಮಟ್ಟವನ್ನು ಪರಿಶೀಲಿಸಿದರು. ಸದ್ಯ ನದಿಯ ಪಾತ್ರದಲ್ಲಿ ಮಳೆಯಾಗುತ್ತಿದ್ದು, ನದಿಯಲ್ಲಿ ನೀರಿನ ಹರಿವು ಇರುತ್ತದೆ.
ಸದ್ಯಕ್ಕೆ ನದಿಯಲ್ಲಿ ನೀರಿನ ಹರಿವು ಇರುವುದರಿಂದ ನಗರಕ್ಕೆ ಕುಡಿಯುವ ನೀರಿನ ಕೊರತೆ ಉಲ್ಬಣಿಸದಿರುವುದು ಕಂಡುಬಂದಿತು.
ನಂತರ ಈ ತಂಡ ಪಾಲಿಕೆಯ ಟಿವಿ ಸ್ಟೇಷನ್ ಕೆರೆಗೆ ಭೇಟಿ ನೀಡಿ ಕೆರೆಯಲ್ಲಿನ ನೀರಿನ ಲಭ್ಯತೆಯನ್ನು ಪರಿಶೀಲಿಸಿದರು. ಕೆರೆಯಲ್ಲಿ 2 ತಿಂಗಳಿಗಾಗುವಷ್ಟು ನೀರಿನ ಸಂಗ್ರಹಣೆ ಇದ್ದು, ನಗರಕ್ಕೆ ನೀರಿನ ಕೊರತೆ ಉಂಟಾಗದೇ ಇರುವ ರೀತಿಯಲ್ಲಿ ಸಮ ರ್ಪಕವಾಗಿ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಎ. ನಾಗರಾಜ್, ಮಂಜುನಾಥ ಗಡಿಗುಡಾಳ್, ನಾಗರಾಜು ಹಾಗೂ ಮುಖಂಡ ರಾದ ಹುಲ್ಮನಿ ಗಣೇಶ್, ಜಗದೀಶ್, ಗುರುರಾಜ್, ಗೋಪಿ ನಾಯ್ಕ, ನೀರು ಸರಬರಾಜು ವಿಭಾಗದ ಕಾರ್ಯಪಾಲಕ ಅಭಿ ಯಂತರ ಉದಯಕುಮಾರ್ ಹಾಗೂ ಇತರರು ಹಾಜರಿದ್ದರು.