ಸಂಸ್ಕಾರ, ಸಂಸ್ಕೃತಿ ಶೈಕ್ಷಣಿಕ ಸಾಧನೆಗೆ ಪೂರಕ

ಸಂಸ್ಕಾರ, ಸಂಸ್ಕೃತಿ ಶೈಕ್ಷಣಿಕ ಸಾಧನೆಗೆ ಪೂರಕ

ಮುಂಬೈನ ಅಖಿಲ ಭಾರತ ದೈವಜ್ಞ ಸಮಾಜದ ಅಧ್ಯಕ್ಷ ದಿನಕರ ಶಂಕರ್ ಬೈಕೇರಿಕರ್ 

ದಾವಣಗೆರೆ, ಜೂ. 25- ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಣ ಕೇವಲ ಪದವಿ, ಅಂಕಪಟ್ಟಿಗೆ ಸೀಮಿತವಾಗಿದೆ. ನಮ್ಮ ಸಮುದಾಯದ ಸಂಸ್ಕಾರ, ಸಂಸ್ಕೃತಿ, ಸಭ್ಯತೆಗಳು ಶೈಕ್ಷಣಿಕ ಸಾಧನೆಗಳಿಗೆ ಪೂರಕವಾಗುತ್ತವೆ ಎಂದು ಮುಂಬೈನ ಅಖಿಲ ಭಾರತ ದೈವಜ್ಞ ಸಮಾಜದ ಅಧ್ಯಕ್ಷ ದಿನಕರ ಶಂಕರ್ ಬೈಕೇರಿಕರ್ ಹೇಳಿದರು.

ನಗರದ ಶ್ರೀಮತಿ ಗೌರಮ್ಮ ನರಹರಿ ಶೇಟ್ ಸಭಾ ಭವನದಲ್ಲಿ ಶ್ರೀಮತಿ ಪ್ರೇಮಾ ಅರುಣಾಚಲ ಎನ್. ರೇವಣಕರ್ ಪ್ರತಿಷ್ಠಾನ 2022-23 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ  ಪ್ರತಿಭಾವಂತ ಮಕ್ಕಳಿಗೆ ಹಮ್ಮಿಕೊಂಡಿದ್ದ `ಶಾರದಾ ಪುರಸ್ಕಾರ-2023′ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕುಟುಂಬಗಳು ಕೇವಲ ಹೊಟ್ಟೆಪಾಡಿನ ಜೀವ ನಕ್ಕೆ ಸೀಮಿತಗೊಳ್ಳದೆ, ಸಾಮಾಜಿಕ ಕಳಕಳಿ, ಮಾನವೀಯ ಮೌಲ್ಯದ ವಿಶಾಲ ಮನೋಭಾವನೆಯೊಂದಿಗೆ ಕಾಯಕ ಮಾಡಿದಾಗ ಮಾತ್ರ ಕುಟುಂಬಕ್ಕೆ ಸಾರ್ಥಕತೆ ಬರುತ್ತದೆ ಎಂದರು.

ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿದ ಸುಮಾರು 145 ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಷ್ಠಾನದ ವತಿಯಿಂದ ಕಂಕಣ ಕಟ್ಟಿ, ಕನ್ನಡಾರತಿ ಬೆಳಗಿ, ಕನ್ನಡ ತಿಲಕವಿಟ್ಟು, ಮಂಗಳವಾದ್ಯ, ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆ ಮೂಲಕ ಕರೆತಂದು ವೇದಿಕೆಯ ಸಿಂಹಾಸನದಲ್ಲಿ ಕೂರಿಸಿ ಪುಷ್ಪವೃಷ್ಟಿಯೊಂದಿಗೆ ಕಿರೀಟ ತೊಡಿಸಿ, ಸನ್ಮಾನಿಸಲಾಯಿತು.

ಪ್ರತಿಷ್ಠಾನದ ಅಧ್ಯಕ್ಷ ಡಾ. ನಲ್ಲೂರು ಅರುಣಾಚಲ ಎನ್. ರೇವಣಕರ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಕನ್ನಡ ಸಾಹಿತ್ಯ ಪರಿಷತ್‌ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಡಾ. ಮಂಜುನಾಥ್ ಎಸ್. ರೇವಣಕರ್, ಗೋವಾದ ರೇವಣದ ಶ್ರೀ ವಿಮಲೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ರಾಮನಾಥ ಪ್ರಭು ದೇಸಾಯಿ, ಶ್ರೀಮತಿ ಗೌರಮ್ಮ ನರಹರಿ ಶೇಟ್ ರೇವಣಕರ್ ಪ್ರತಿಷ್ಠಾನದ ಅಧ್ಯಕ್ಷ ನಲ್ಲೂರು ಬಿ.ಎನ್. ನಾಗರಾಜ್ ರೇವಣಕರ್, ದಾವಣಗೆರೆ ದೈವಜ್ಞ ಸಮಾಜದ ಅಧ್ಯಕ್ಷ ಪ್ರಶಾಂತ ವಿಶ್ವನಾಥ ವೆರ್ಣೇಕರ್, ಶ್ರೀಮತಿ ಪ್ರೇಮಾ ಅರುಣಾಚಲ ಎನ್. ರೇವಣಕರ್ ಮತ್ತಿತರೆ ಗಣ್ಯರು ಉಪಸ್ಥಿತರಿದ್ದರು.

ಇದೇ ವೇಳೆ ವೈದ್ಯಕೀಯ, ಶೈಕ್ಷಣಿಕ, ಸಾಹಿತ್ಯಿಕ ಸಾಧಕರೂ, ಯುವ ಪ್ರತಿಭೆಗಳಾದ ಡಾ. ಸೋನಿಯಾ ದೇವಿದಾಸ್ ಪಾವಸ್ಕರ್, ಸೋನಿಯಾ ರಾಜೇಶ್ ಪಾವಸ್ಕರ್, ಸಹನಾ ಭೈರೇಶ್ವರ ಶೇಟ್ ಇವರನ್ನು ಗೌರವಿಸಲಾಯಿತು.

ನಲ್ಲೂರು ರೇವಣಕರ್ ಕುಟುಂಬದ ಸೊಸೆಯಂದಿರು ಪ್ರಾರ್ಥಿಸಿದರು. ಪ್ರತಿಷ್ಠಾನದ ನಿರ್ದೇಶಕ ನಲ್ಲೂರು ಲಕ್ಷ್ಮಣರಾವ್ ಸ್ವಾಗತಿಸಿದರು. ಕಲಾಕುಂಚ ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶೆಣೈ ನಿರೂಪಿಸಿದರು. ಅನಿತಾ ರಾಜೇಶ್ ಪಾವಸ್ಕರ್ ವಂದಿಸಿದರು.

error: Content is protected !!