ಪರಿಸರ ಪ್ರೀತಿಯಿಂದ ಆತ್ಮತೃಪ್ತಿ : ಸಾಲುಮರದ ತಿಮ್ಮಕ್ಕ

ಪರಿಸರ ಪ್ರೀತಿಯಿಂದ ಆತ್ಮತೃಪ್ತಿ : ಸಾಲುಮರದ ತಿಮ್ಮಕ್ಕ

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಪರಿಸರ ದಿನಾಚರಣೆ

ದಾವಣಗೆರೆ, ಜೂ. 23 – ಪ್ರಕೃತಿ ತಾಯಿ ಇದ್ದಂತೆ. ತನ್ನ ಮಕ್ಕಳಿಗೆ ಎಲ್ಲವನ್ನೂ ಕೊಡು ತ್ತದೆ. ಏನನ್ನೂ ವಾಪಸ್ ಬಯಸುವುದಿಲ್ಲ. ಅಂತಹ ಪ್ರಕೃತಿ ಮಾತೆಯನ್ನು ಎಲ್ಲರೂ ರಕ್ಷಿಸಬೇಕು. ಮಕ್ಕಳು ತಾಯಿಯನ್ನು ಪೋಷಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಪದ್ಮಶ್ರೀ ಪುರಸ್ಕೃತ ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಅಭಿಪ್ರಾಯಪಟ್ಟರು.

ದಾವಣಗೆರೆ ವಿಶ್ವವಿದ್ಯಾನಿಲಯ ಪರಿಸರ ವಿಜ್ಞಾನ ಅಧ್ಯಯನ ವಿಭಾಗ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಸಹಭಾಗಿತ್ವದಲ್ಲಿ ಏರ್ಪ ಡಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪರಿಸರಕ್ಕಾಗಿ ಪ್ರೀತಿಯಿಂದ ಮಾಡುವ ಯಾವುದೇ ಕೆಲಸವೂ ಆತ್ಮತೃಪ್ತಿ ನೀಡುತ್ತದೆ. ಲಾಭ-ನಷ್ಟದ ಲೆಕ್ಕ ಬಿಟ್ಟು ನಿಸ್ವಾರ್ಥದಿಂದ ಸೇವೆ ಸಲ್ಲಿಸಿದಾಗ ಪ್ರಕೃತಿ ನೀಡುವ ಅದ್ಭುತ ಕೊಡುಗೆಗೆ ಮಿತಿ ಇರುವುದಿಲ್ಲ ಎಂದರು.

ಗಿಡಗಳನ್ನು ನಾನು ಮಕ್ಕಳಂತೆ ಬೆಳೆಸಿದೆ. ಅದರಲ್ಲೇ ನಾನು ಪ್ರೀತಿ ಬೆಳೆಸಿಕೊಂಡೆ. ಕಣ್ಣೆದುರೇ ಬೆಳೆದ ಗಿಡಗಳೆಲ್ಲ ನೀಡಿದ ತಂಪಿನಲ್ಲಿ ನಾನೂ ಬೆಳೆದೆ. ನಾನು ಪ್ರೀತಿಯಿಂದ ಬೆಳೆಸಿದ ಗಿಡಗಳೇ ನನ್ನನ್ನು ಈ ಮಟ್ಟಕ್ಕೆ ತಂದಿವೆ. ಪ್ರೀತಿಯಿಂದ ಯಾವುದೇ ಕೆಲಸ ಮಾಡಿದರೂ ಅದು ಸಂತೃಪ್ತಿ ಹಾಗೂ ಯಶಸ್ಸು ನೀಡುತ್ತದೆ ಎಂದು  ತಿಮ್ಮಕ್ಕ ಹೇಳಿದರು.

ತಿಮ್ಮಕ್ಕ ಅವರ ಪುತ್ರ ಉಮೇಶ್‌ ಬಳ್ಳೂರು ಮಾತನಾಡಿ, ಪರಿಸರ ನಾಶದಿಂದ ಜಗತ್ತು ಅಪಾಯಕಾರಿ ಸ್ಥಿತಿ ತಲುಪುತ್ತಿದೆ. ಶುದ್ಧ ಗಾಳಿ, ಬೆಳಕು, ನೀರು ಇಲ್ಲದೆ ಜನರು ಹತ್ತಾರು ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ಪರಿಸರ ರಕ್ಷಣೆ ಮತ್ತು ಪ್ರಕೃತಿ ಸಂಬಂಧಿ ನೆಲೆಯೊಂದೇ ಪರಿಹಾರ ಮಾರ್ಗ ಎಂದು ಹೇಳಿದರು.

ಕಾಡಿಗೆ ಹೋಗಿ ಪ್ರಾಣಿಗಳನ್ನು ನೋಡಲು ಆಸಕ್ತಿ ತೋರುವ ಜನರು, ಅದೇ ಪ್ರಾಣಿಗಳು ನಾಡಿಗೆ ಬಂದರೆ ಸಹಿಸುವುದಿಲ್ಲ. ಇಂಥ ವೈಪರಿತ್ಯ ವನ್ನು ಹೋಗಲಾಡಿಸಲು ಪರಿಸರದೊಂದಿಗೆ ಬದು ಕುವ ವಾತಾವರಣ ನಿರ್ಮಿಸಬೇಕಿದೆ ಎಂದರು.

ಕುಲಸಚಿವೆ ಸರೋಜ ಬಿ.ಬಿ. ಮಾತ ನಾಡಿ, ಪರಿಸರ ರಕ್ಷಣೆಯ ಜಾಗೃತಿ ಮೂಡಿ ಸಲು 112ನೇ ವಯಸ್ಸಿನಲ್ಲಿಯೂ ದಣಿವರಿ ಯದಂತೆ ಕಾಳಜಿ ವಹಿಸುತ್ತಿರುವ ಮತ್ತು ಜನರಿಗೆ ಪ್ರೇರಣೆ ನೀಡುತ್ತಿರುವ ತಿಮ್ಮಕ್ಕ ಅವರ ಸೇವೆ ಸದಾ ಸ್ಮರಣೀಯ ಎಂದು ಹೇಳಿದರು.

ಪರೀಕ್ಷಾಂಗ ಕುಲಸಚಿವ ಡಾ. ಕೆ. ಶಿವಶಂಕರ್‌ ಮಾತನಾಡಿದರು. ಪರಿಸರ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ. ಗೋವಿಂದಪ್ಪ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಡಾ.ಶಾರದಾ ದೇವಿ ಕಳ್ಳಿಮನಿ ಸ್ವಾಗತಿಸಿದರು. ಎನ್‌ಎಸ್‌ಎಸ್ ಅಧಿಕಾರಿ ಡಾ.ಅಶೋಕ ಕುಮಾರ ಪಾಳೇದ, ಪ್ರೊ. ಶಿಶುಪಾಲ, ಪ್ರೊ.ಜೆ.ಕೆ.ರಾಜು ಉಪಸ್ಥಿತರಿದ್ದರು.

error: Content is protected !!