ರಾಜ್ಯಕ್ಕೆ ಅಕ್ಕಿ ವಿತರಣೆಗೆ ಕೇಂದ್ರದ ಅಡ್ಡಿ

ರಾಜ್ಯಕ್ಕೆ ಅಕ್ಕಿ ವಿತರಣೆಗೆ ಕೇಂದ್ರದ ಅಡ್ಡಿ

ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ನಗರದಲ್ಲಿ ಬೃಹತ್ ಪ್ರತಿಭಟನೆ, ದ್ವೇಷದ ರಾಜಕೀಯಕ್ಕೆ ಕಿಡಿ

ದಾವಣಗೆರೆ, ಜೂ. 20- ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆೆಗೆ ಕೇಂದ್ರ ಸರ್ಕಾರ ಭಾರತ ಆಹಾರ ನಿಗಮಕ್ಕೆ ಅಕ್ಕಿ ನೀಡದಂತೆ ತಡೆಯೊಡ್ಡಿದೆ ಎಂದು ಆರೋಪಿಸಿ, ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ನಗರದ ಜಯದೇವ ವೃತ್ತದ ಬಳಿ ಪ್ರತಿಭಟನಾ ಸಭೆ ನಡೆಸಲಾಯಿತು.

ಇದೇ ವೇಳೆ ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಚುನಾವಣೆಗೂ ಮುನ್ನ ಘೋಷಣೆ ಮಾಡಿದಂತೆ ಐದು ಗ್ಯಾರಂಟಿಗಳನ್ನು ನಮ್ಮ ಸರ್ಕಾರ ಕೊಟ್ಟೆ ಕೊಡುತ್ತದೆ. ಈ ವಿಚಾರದಲ್ಲಿ ಯಾವುದೇ ಸಂಶಯ ಬೇಡ. ಆದರೆ ಬಿಜೆಪಿಯವರು ಈ ವಿಚಾರದಲ್ಲಿ ದ್ವೇಷದ ರಾಜಕೀಯ ಮಾಡುತ್ತಿದ್ದಾರೆಂದು ಕಿಡಿಕಾರಿದರು.

ಕಾಂಗ್ರೆಸ್ ಚುನಾವಣೆಗೂ ಮುನ್ನ ಭರವಸೆ ನೀಡಿತ್ತು. ನಂತರ ಐದು ಗ್ಯಾರಂಟಿಗಳನ್ನು ಕೊಡುವುದಾಗಿ ನಿಶ್ಚಯಿಸಿದೆ. ತಾಳ್ಮೆಯಿಂದ ಕಾಯಬೇಕು. ಅದನ್ನು ಬಿಟ್ಟು ದುರುದ್ಧೇಶದಿಂದ ಟೀಕಿಸುವುದು ಸರಿಯಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ಮಾತನಾಡಿ, ಅನ್ನಭಾಗ್ಯ ಯೋಜನೆಗೆ ಭಾರತ ಆಹಾರ ನಿಗಮದ ಮೂಲಕ  ನೀಡಲಾಗುವ ಅಕ್ಕಿ ಅತ್ಯಗತ್ಯ ಎಂದು ಗೊತ್ತಿರುವ ಕೇಂದ್ರ ಬಿಜೆಪಿ ಸರ್ಕಾರ ದುರುದ್ದೇಶದಿಂದ ಅಕ್ಕಿ ಸರಬರಾಜು ಮಾಡುವುದನ್ನು ತಡೆದಿದೆ.ಇದು ಬಿಜೆಪಿಯ ಬಡವರ ವಿರೋಧಿ ನೀತಿಗೆ ಸಾಕ್ಷಿಯಾಗಿದೆ ಎಂದರು.

ಕೇಂದ್ರದಿಂದ ರಾಜ್ಯಕ್ಕೆ ಅಕ್ಕಿ ಕೊಡಿಸುವಲ್ಲಿ ಅಶಕ್ತರಾಗಿರುವ ರಾಜ್ಯದ ಬಿಜೆಪಿ ಶಾಸಕರು, ಸಂಸದರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಚುನಾವಣೆಗೂ ಮುನ್ನ ಘೋಷಣೆ ಮಾಡಿದಂತೆ ರಾಜ್ಯದ ಎಲ್ಲ ಬಡವರಿಗೂ ಅನ್ನಭಾಗ್ಯ ಯೋಜನೆಯಡಿ ಹತ್ತು ಕೆಜಿ ಅಕ್ಕಿ ವಿತರಣೆಯನ್ನು ಮಾಡೇ ಮಾಡುತ್ತೇವೆ. ಕೇಂದ್ರ ಅಕ್ಕಿ ಕೊಡುವವರೆಗೂ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದು ಎಚ್ಚರಿಸಿದರು.

ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಬಡ ಜನರಿಗೆ ನೀಡುವ ಅನ್ನಭಾಗ್ಯ ಅಕ್ಕಿಯನ್ನು ತಡೆಹಿಡಿದು ಜನರಿಗೆ ಅನ್ಯಾಯ ಮಾಡುತ್ತಿದೆ. ಇದಕ್ಕೆ ಜನ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಬಿ. ಮಂಜಪ್ಪ ಮಾತನಾಡಿ, ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸೋಣ, ಬಿಜೆಪಿ ಸುಳ್ಳು ಹೇಳಿಕೊಂಡು ಕೇಂದ್ರದಲ್ಲಿ ಆಡಳಿತ ನಡೆಸುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೇರು ಸಮೇತ ಕಿತ್ತು ಹಾಕಬೇಕೆಂದು ಕರೆ ನೀಡಿದರು.

ಪ್ರತಿಭಟನಾ ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ದಿನೇಶ್ ಕೆ. ಶೆಟ್ಟಿ, ಡಿ. ಬಸವರಾಜ್, ಕೆ.ಜಿ. ಶಿವಕುಮಾರ್, ಶಾಮನೂರು ಟಿ. ಬಸವರಾಜ್, ಎ. ನಾಗರಾಜ್, ರಾಘವೇಂದ್ರ ನಾಯ್ಕ, ಬುತ್ತಿ ಗಫೂರ್ ಸಾಬ್, ಮೈನುದ್ದೀನ್, ಆರ್. ನಾಗಪ್ಪ, ಕೋಳಿ ಇಬ್ರಾಹಿಂ ಸಾಬ್, ಸೋಮ ಲಾಪುರ ಹನುಮಂತಪ್ಪ, ಎಸ್. ಮಲ್ಲಿಕಾರ್ಜುನ್, ಕೆ. ಚಮನ್ ಸಾಬ್, ಅನಿತಾಬಾಯಿ, ದಾಕ್ಷಾಯಿಣಮ್ಮ, ಶುಭ ಮಂಗಳ, ನಂಜಾನಾಯ್ಕ, ಗೌರಮ್ಮ, ಡೋಲಿ ಚಂದ್ರು, ಎನ್.ಜೆ. ನಿಂಗಪ್ಪ, ಅಕ್ಕಿ ರಾಮಚಂದ್ರ, ಕೋಗುಂಡೆ ಸುರೇಶ್, ಕಬಡ್ಡಿ ಮಲ್ಲು ಸೇರಿದಂತೆ ಇತರರು ಪಾಲ್ಗೊಂಡಿದ್ದರು. 

error: Content is protected !!