ಹರಿಹರ : ತುಂಗಾರತಿ ಉದ್ಘಾಟನೆಗೆ ಸಿಗದ ಯೋಗ

ಹರಿಹರ : ತುಂಗಾರತಿ ಉದ್ಘಾಟನೆಗೆ ಸಿಗದ ಯೋಗ

ಹರಿಹರ, ಜೂ.20- ನಗರದ ರಾಘವೇಂದ್ರ ಸ್ವಾಮಿ ಮಠದ ಹಿಂಬದಿಯಲ್ಲಿ,  ತುಂಗಭದ್ರಾ ನದಿಯ ದಂಡೆಯ ಮೇಲೆ ಕಾಶಿ ಮಾದರಿಯಂತೆ ತುಂಗಾರತಿ ಮಾಡಲು ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ, ನದಿ ನೀರಿನ ಅಭಾವದಿಂದ ಉದ್ಘಾಟನೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಹಾಗೂ ಹಲವರು ಮಾಡಿಕೊಂಡ ಮನವಿಯ ಮೇರೆಗೆ 30 ಕೋಟಿ ರೂ. ಯೋಜನೆಗೆ ಒಪ್ಪಿಗೆ ನೀಡಿ, 10 ಕೋಟಿ ರೂ. ಕಾಮಗಾರಿಗೆ ಚಾಲನೆ ನೀಡಲಾಗಿತ್ತು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮೂಲಕವೇ ತುಂಗಾರತಿಗೆ ಚಾಲನೆ ನೀಡಲು ಬೊಮ್ಮಾಯಿ ಪ್ರಯತ್ನ ನಡೆಸಿದ್ದರು. ಆದರೆ, ಭದ್ರತಾ ವಿಷಯಗಳ ಕಾರಣದಿಂದಾಗಿ ಅದು ಸಾಧ್ಯವಾಗಲಿಲ್ಲ.

ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡು, ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ತುಂಗಾರತಿ ಉದ್ಘಾಟನೆ ಬಗ್ಗೆ ಹೊಸ ಸರ್ಕಾರ ನಿರ್ಧರಿಸಬೇಕಿದೆ. 

ಈ ನಡುವೆ, ಮುಂಗಾರು ಮಳೆ ವಿಳಂಬವಾಗಿರುವ ಕಾರಣ ನದಿಯಲ್ಲಿ ನೀರು ಕಡಿಮೆಯಾಗಿದೆ. ನದಿಯಲ್ಲಿ ಸ್ನಾನ ಮಾಡುವಷ್ಟೂ ನೀರಿಲ್ಲದ ಸಂದರ್ಭದಲ್ಲಿ ತುಂಗಾರತಿ ಕಷ್ಟಸಾಧ್ಯವಾಗಿದೆ. ನೀರು ತುಂಬಿರುವಾಗಲೇ ತುಂಗಾರತಿ ಸುಂದರವಾಗಿ ಕಾಣುತ್ತದೆ.

ತುಂಗಾರತಿ ವೀಕ್ಷಣೆಗಾಗಿ ಗ್ರಾನೈಟ್ ಹಾಸು ಹಾಕಲಾಗಿದೆ. ಮೂರು ಮಂಟಪ ಹಾಗೂ ಬೃಹತ್ ಪರಮೇಶ್ವರ ಮೂರ್ತಿ ನಿರ್ಮಿಸಲಾಗಿದೆ. ಆದರೆ, ತುಂಗಾರತಿ ವೀಕ್ಷಿಸುವ ಅವಕಾಶ ಮಾತ್ರ ಸಾಧ್ಯವಾಗುತ್ತಿಲ್ಲ. ತುಂಗಾರತಿ ಉದ್ಘಾಟನೆ ವಿಳಂಬವಾದಷ್ಟೂ ಕಾಮಗಾರಿಯ ವೆಚ್ಚ ಸದ್ಬಳಕೆಯಾಗದೇ, ಹಣ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಲಿದೆ ಎಂಬ ಕಳವಳ ವ್ಯಕ್ತವಾಗುತ್ತಿದೆ.

ಈ ಬಗ್ಗೆ ಮಾತನಾಡಿರುವ ಶಾಸಕ ಬಿ.ಪಿ. ಹರೀಶ್, ತುಂಗಾರತಿ ಕಾರ್ಯ ಯಶಸ್ವಿಗೊಳಿಸಲು ತಾಳ್ಮೆಯ ಅಗತ್ಯವಿದೆ. ಯಾವುದೇ ಭೇದ ಮನೋಭಾವ ಇಲ್ಲದೇ ಒಗ್ಗಟ್ಟಿನಿಂದ ಕೈ ಜೋಡಿಸಿದಾಗ ಮಾತ್ರ ಕಾಮಗಾರಿ ತ್ವರಿತವಾಗಿ ಜಾರಿಗೆ ತರಲು ಸಾಧ್ಯ ಎಂದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಮಳೆ ಕೊರತೆಯಾದ ಸಂದರ್ಭದಲ್ಲೂ ತುಂಗಾರತಿ ಮಾಡಲು 48 ಕೋಟಿ ರೂ. ವಚ್ಚದಲ್ಲಿ ಬ್ಯಾರೇಜ್ ನಿರ್ಮಿಸಲು ಪ್ರಸ್ತಾವನೆ ಸಿದ್ಧಪಡಿಸಲಾಗಿತ್ತು. ಆದರೆ, ಯೋಜನೆಗೆ ಇನ್ನೂ ಒಪ್ಪಿಗೆ ಸಿಗಬೇಕಿದೆ. ವಚನಾನಂದ ಶ್ರೀಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಈ ಬಗ್ಗೆ ಪ್ರಸ್ತಾಪಿಸಲಿದ್ದಾರೆ ಎಂದಿದ್ದಾರೆ.

error: Content is protected !!