ದಾವಣಗೆರೆ ಪ್ರಗತಿಗೆ ಪ್ರಾಮಾಣಿಕ ಪ್ರಯತ್ನ

ದಾವಣಗೆರೆ ಪ್ರಗತಿಗೆ ಪ್ರಾಮಾಣಿಕ ಪ್ರಯತ್ನ

 ದಾವಣಗೆರೆ, ಜು. 17- ಮುಂದಿನ ಐದು ವರ್ಷಗಳಲ್ಲಿ ದಾವಣಗೆರೆಯನ್ನು ಪ್ರಗತಿ ಪಥದತ್ತ ಕೊಂಡೊಯ್ಯಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.

ನಗರದ ಲಯನ್ಸ್ ಭವನದಲ್ಲಿ ಭಾನುವಾರ, ಶ್ರೀಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನ ಸಮಿತಿ, ಲಯನ್ಸ್ ಕ್ಲಬ್ ಹಾಗೂ ಜಿಲ್ಲಾ ಯೋಗ ಒಕ್ಕೂಟದಿಂದ ಏರ್ಪಡಿಸಿದ್ದ ಯೋಗ ಸ್ಪರ್ಧೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಈ ಹಿಂದೆ ನಾವು ಆಡಳಿತ ನಡೆಸಿದ ವೇಳೆಯಲ್ಲಿ ಸಾಕಷ್ಟು ಅನುದಾನ ತಂದು ನಗರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೆವು. ಸ್ಮಾರ್ಟ್ ಸಿಟಿ ಯೋಜನೆಯನ್ನೂ ನಾವೇ ತಂದಿದ್ದೆವು. ಆದರೆ, ಕಳೆದ 5 ವರ್ಷಗಳಲ್ಲಿ  ಆಡಳಿತ ನಡೆಸಿದ ಬಿಜೆಪಿ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾಣಲಿಲ್ಲ ಎಂದು ಹೇಳಿದರು.

ಐದು ವರ್ಷಗಳಲ್ಲಿ ಬಿಜೆಪಿಯವರು ಇಡೀ ನಗರ ದಿವಾಳಿ ಮಾಡಿದ್ದಾರೆ.  ಶೇ. 40ರಿಂದ 50 ರಷ್ಟು ಕಮಿಷನ್ ಪಡೆದು ನಗರವನ್ನೇ ಹೊಲಸು ಮಾಡಿದ್ದಾರೆ. ಇವೆಲ್ಲವನ್ನೂ ಸ್ವಚ್ಛ ಮಾಡಲಿಕ್ಕಾಗಿಯೇ ಐದು ವರ್ಷ ಬೇಕು ಎಂದು ಹೇಳಿದರು.

1993ರಿಂದ ಅನ್ನಪೂರ್ಣೇಶ್ವರಿ ದೇವಸ್ಥಾನ ಸಮಿತಿಯವರು ಉತ್ತಮ ಸೇವಾ ಕಾರ್ಯ ಮಾಡಿಕೊಂಡು ಬಂದಿದ್ದಾರೆ. ದೇವಸ್ಥಾನಕ್ಕೆ ಜಾಗ ಕೊಡಿಸುವಂತೆ ಸಮಿತಿಯವರು ಮನವಿ ಮಾಡಿದ್ದು, ಇದಕ್ಕೆ ನನ್ನ ಕೈಲಾದ ಸಹಾಯ ಮಾಡುತ್ತೇನೆ. ಈ ಸಮಿತಿಯವರು ಇನ್ನಷ್ಟು ದೇಣಿಗೆ ಸಂಗ್ರಹಿಸಿ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸುವುದರ ಜತೆಗೆ ನೀಟಾಗಿ ಲೆಕ್ಕವನ್ನು ನಿರ್ವಹಿಸಬೇಕು ಎಂದು ಸಲಹೆ ನೀಡಿದರು. 

ಜಿಲ್ಲಾ ಯೋಗ ಒಕ್ಕೂಟದ ಗೌರವಾಧ್ಯಕ್ಷ ಬಿ.ಸಿ. ಉಮಾಪತಿ ಮಾತನಾಡಿ, ಯೋಗ ಒಕ್ಕೂಟದ ದಶಮಾನೋತ್ಸವದ ಹಿನ್ನೆಲೆಯಲ್ಲಿ 2024ರ ವಿಶ್ವ ಯೋಗ ದಿನಾಚರಣೆಯ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ದಾವಣಗೆರೆಯಲ್ಲಿಯೇ ಆಯೋಜಿಸಲು ಜಿಲ್ಲಾ ಉಸ್ತುವಾರಿ ಸಚಿವರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷ ನಾಗೇಂದ್ರ ಪ್ರಕಾಶ್ ಪ್ರಾಸ್ತಾವಿಕ ಮಾತನಾಡಿ,  ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಅಭಿವೃದ್ಧಿಗೆ ಮೊದಲಿನಿಂದಲೂ ಸಹಕರಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಪಕ್ಕದ ಜಾಗ ಕೊಡಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಎಸ್.ಎಸ್. ಮಲ್ಲಿಕಾರ್ಜುನ್, ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಸನ್ಮಾನಿಸಲಾಯಿತು.  ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಪ್ರಕಾಶ್ ಪಾಟೀಲ್, ಪಾಲಿಕೆ ಸದಸ್ಯೆ ಆಶಾ ಉಮೇಶ್, ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್, ವೀರಭದ್ರಪ್ಪ, ನಾಗಭೂಷಣ್ ಕಡೇಕೊಪ್ಪ, ಡಾ.ಯು. ಸಿದ್ದೇಶ್, ಡಾ. ಶಂಕರಗೌಡ, ತಾತಾ ವೆಂಕಟಾಚಲಪತಿ, ಜನತಾವಾಣಿ ಉಪ ಸಂಪಾದಕ ಇ.ಎಂ. ಮಂಜುನಾಥ ಉಪಸ್ಥಿತರಿದ್ದರು.

error: Content is protected !!