ಹಿಂದೂಸ್ಥಾನಿ `ಘರಾನಾ’ ಸಂಗೀತ ಕಾರ್ಯಕ್ರಮಕ್ಕೆ ಚಿಂತನೆ

ಹಿಂದೂಸ್ಥಾನಿ `ಘರಾನಾ’ ಸಂಗೀತ ಕಾರ್ಯಕ್ರಮಕ್ಕೆ ಚಿಂತನೆ

ಗದಗ ಡಾ.ಪಂ. ಪುಟ್ಟರಾಜ ಸೇವಾ ಸಮಿತಿ ಸಂಸ್ಥಾಪಕ ಚನ್ನವೀರಸ್ವಾಮಿ ಹಿರೇಮಠ (ಕಡಣಿ)

ದಾವಣಗೆರೆ, ಜೂ. 13- ಇಡೀ ಜಗತ್ತೇ ತಿರುಗಿ ನೋಡುವಂತಹ ಶುದ್ಧ ಶಾಸ್ತ್ರೀಯ ಸಂಗೀತವನ್ನು ಸಹೃದಯರಿಗೆ ಉಣಬಡಿಸುವ `ಘರಾನಾ’ ಹಿಂದೂಸ್ಥಾನಿ ಕಾರ್ಯಕ್ರಮವನ್ನು ರಾಜ್ಯದ ಕೇಂದ್ರ ಬಿಂದು ದಾವಣಗೆರೆಯಲ್ಲಿ  ಆಯೋಜಿಸಲಾಗುವುದು ಎಂದು ಗದಗ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಸಂಸ್ಥಾಪಕ ಚನ್ನವೀರಸ್ವಾಮಿ ಹಿರೇಮಠ (ಕಡಣಿ) ತಿಳಿಸಿದರು.

ನಗರದ ಶಿವಯೋಗಾಶ್ರಮದ ಆವರಣದಲ್ಲಿ ನಿನ್ನೆ ಏರ್ಪಾಡಾಗಿದ್ದ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಜಿಲ್ಲಾ ಘಟಕ ಹಾಗೂ ಮಹಿಳಾ ಘಟಕದ ಉದ್ಘಾಟನೆ ಹಾಗೂ ಗುರು ಸೇವಾ ದೀಕ್ಷಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಂಡಿತ ಪುಟ್ಟರಾಜ ಕವಿ ಗವಾಯಿಗಳು ಸಂಗೀತ, ಸಾಹಿತ್ಯ, ಕಲೆಗಳ ಪ್ರಚಾರ, ಪ್ರಸಾರಕ್ಕಾಗಿ ಅಂಧರ, ಅನಾಥರ ಬಾಳಿಗೆ ಬೆಳಕಾಗಲು ವೀರೇಶ್ವರ ಪುಣ್ಯಾಶ್ರಮ ನಿರ್ಮಾಣ ಮಾಡಲಾಯಿತು. ವೀರೇಶ್ವರ ಪುಣ್ಯಾಶ್ರಮವನ್ನು ದಾವಣಗೆರೆಯಲ್ಲಿ ಸ್ಥಾಪಿಸಲು ದಾವಣಗೆರೆ ಭಕ್ತರ ಪಾತ್ರ ಹಿರಿದಾದುದು ಎಂದರು.

ದಾವಣಗೆರೆ ದಾನದ ಕೆರೆ. ದಾನಕ್ಕೆ ಹೆಸರಾಗಿದ್ದು, ಎರಡನೇ ವೀರೇಶ್ವರ ಪುಣ್ಯಾಶ್ರಮವನ್ನು ಗದುಗಿನ ಆಶ್ರಮವನ್ನು ಮೀರಿ ಬೆಳೆದಿದೆ. ಇಲ್ಲಿನ ಭಕ್ತರು, ದಾನಿಗಳು ನೆರವು ನೀಡಿದ್ದಾರೆ ಎಂದು ಹೇಳಿದರು.

ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಹೆಸರಿನಲ್ಲಿ ಪ್ರತಿ ವರ್ಷ ಫೆಬ್ರವರಿ 2 ರಂದು ಕರ್ನಾಟಕ ಸರ್ಕಾರದ ಸಹಕಾರದೊಂದಿಗೆ ಹತ್ತು ಲಕ್ಷ ರೂ. ಮೌಲ್ಯದ ರಾಷ್ಟ್ರಮಟ್ಟದ ಸಂಗೀತ ಪ್ರಶಸ್ತಿಯನ್ನು ಸ್ಥಾಪಿಸಿದ ಹೆಗ್ಗಳಿಕೆ ಪುಟ್ಟರಾಜ ಸೇವಾ ಸಮಿತಿಯದು ಎಂದರು.

ಪುಟ್ಟರಾಜ ಕವಿ ಗವಾಯಿಗಳ ಅಪ್ರಕಟಿತ ಸಾಹಿತ್ಯವನ್ನು ಪ್ರಕಟಿಸುವ ಜೊತೆಗೆ ಅವರ ಸಾಹಿತ್ಯ ಕೃತಿಗಳನ್ನು ಮನೆ ಮನೆಗೆ ತಲುಪಿಸುವ  ಸಂಕಲ್ಪವನ್ನು ಪುಟ್ಟರಾಜ ಸೇವಾ ಸಮಿತಿ ಮಾಡಿದೆ ಎಂದು ಹೇಳಿದರು.

ಮದುವೆ, ಜನ್ಮದಿನ ವಿವಾಹ ವಾರ್ಷಿಕೋತ್ಸವದಂತಹ ಸಮಾರಂಭಗಳಲ್ಲಿ ತಮ್ಮ ಬಂಧುಗಳು, ಮಿತ್ರರಿಗೆ ಪುಟ್ಟರಾಜ ಕವಿ ಗವಾಯಿಗಳ ಸಾಹಿತ್ಯ ಕೃತಿಗಳನ್ನು ಉಡುಗೊರೆಯಾಗಿ ಕೊಡುವ ಕೆಲಸವನ್ನು ಸದ್ಭಕ್ತರು ಮಾಡಬೇಕೆಂದು ಅವರು ಮನವಿ ಮಾಡಿದರು.

ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮಾತನಾಡಿ, ಪುಟ್ಟ ರಾಜ ಗವಾಯಿಗಳನ್ನು ಸ್ಮರಿಸುವುದೆಂದರೆ ಇಡೀ ಸಂಗೀತ ಲೋಕವನ್ನೇ ನೆನೆದಂತೆ. ಅಧ್ಯಾತ್ಮದ ಬಗ್ಗೆ ಅವಲೋಕನ ಮಾಡಿದಂತಾಗುತ್ತದೆ. ಸಾಂಸ್ಕೃತಿಕ ದಿಗ್ಗಜರನ್ನು ಸ್ಮರಿಸುವ ವೇದಿಕೆಯನ್ನು ಕಲ್ಪಿಸಿಕೊಟ್ಟಂತಾಗುತ್ತದೆ ಎಂದರು.

ಪುಟ್ಟರಾಜ ಸೇವಾ ಸಮಿತಿಗಳು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸ್ಥಾಪನೆಯಾಗಲಿ ಎಂದು ಆಶಿಸಿದ ಅವರು, ಪುಟ್ಟರಾಜ ಸೇವಾ ಸಮಿತಿ ಪುಟ್ಟರಾಜ ಗವಾಯಿಗಳ ಸಾಹಿತ್ಯ ಪ್ರಚಾರ ಮಾಡುವ ಜೊತೆ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡುವಂತಾಗಲಿ ಎಂದು ಶುಭ ಹಾರೈಸಿದರು. ವರ್ತಕ ಅಣಬೇರು ಮಂಜಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲೆಕ್ಕಪರಿಶೋಧಕ ಅಥಣಿ ವೀರಣ್ಣ ಮಾತನಾಡಿದರು.

ಮಾಜಿ ಮೇಯರ್ ಎಸ್.ಟಿ. ವೀರೇಶ್, ಸಂಗೀತ ಶಿಕ್ಷಕ ಶಿವಬಸಯ್ಯ ಪಿ. ಚರಂತಿಮಠ, ದಾವಣಗೆರೆ ಜಿಲ್ಲಾಧ್ಯಕ್ಷ ಪಿ.ಬಿ. ವಿನಾಯಕ (ಶ್ರೀಗಂಧ) ಮಹಿಳಾ ಘಟಕದ ಅಧ್ಯಕ್ಷರಾದ ಸೌಮ್ಯ ಸತೀಶ ಧಾರವಾಡ, ಎಂ.ಕೆ. ರೇವಣಸಿದ್ಧಪ್ಪ, ವಿಕ್ರಮ ವಿ.ಜೋಷಿ, ವನಜ ಮಹಾಲಿಂಗಯ್ಯ ಮತ್ತಿತರರು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ `ಪುಟ್ಟರಾಜ ಗುರು ವಚನ ಪ್ರಭಾ’ ವಚನ ವಿಶ್ಲೇಷಣೆ ಸಂಕಲನ ಬಿಡುಗಡೆ ಮಾಡಲಾಯಿತು. ವಚನಾಮೃತ ಮಹಿಳಾ ಘಟಕ ಹಾಗೂ ವೀರೇಶ್ವರ ಪುಣ್ಯಾಶ್ರಮದ ವಿದ್ಯಾರ್ಥಿಗಳು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕು. ಸುಪ್ರಿತಿ ಭರತ ನಾಟ್ಯ ಪ್ರದರ್ಶಿಸಿದರು.

error: Content is protected !!