ಸರ್ಕಾರಿ ಸಾರಿಗೆ ಫುಲ್, ಖಾಸಗಿ ಬಸ್ ಡಲ್

ಸರ್ಕಾರಿ ಸಾರಿಗೆ ಫುಲ್, ಖಾಸಗಿ ಬಸ್ ಡಲ್

ಸರ್ಕಾರದ ‘ಶಕ್ತಿ’ಯಿಂದ ದಾವಣಗೆರೆ ಜಿಲ್ಲೆಯಲ್ಲಿ ನಿಶ್ಯಕ್ತವಾದ ಖಾಸಗಿ ಬಸ್ ವಲಯ

ದಾವಣಗೆರೆ, ಜೂ. 12 – ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಹಾಗೂ ತೃತೀಯ ಲಿಂಗಿಗಳು ಉಚಿತವಾಗಿ ಪ್ರಯಾಣಿಸಲು ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆ, ಖಾಸಗಿ ಬಸ್ ವಲಯವನ್ನು ನಿಶ್ಯಕ್ತಗೊಳಿಸಿದೆ. ಇದರಿಂದಾಗಿ ಖಾಸಗಿ ಬಸ್ ವಲಯದ ಭವಿಷ್ಯದ ಮೇಲೆ ಪರಿಣಾಮವಾಗುತ್ತಿದೆ.

ಭಾನುವಾರದಂದು ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಸೋಮವಾರ ಅದರ ಪರಿಣಾಮ ಸ್ಪಷ್ಟವಾಗಿ ಕಂಡು ಬಂತು. ಸರ್ಕಾರಿ ಬಸ್‌ಗಳು ತುಂಬಿ ತುಳುಕುತ್ತಿದ್ದರೆ, ಖಾಸಗಿ ಬಸ್‌ಗಳಲ್ಲಿ ಜನಸಂದಣಿ ವಿರಳವಾಗಿತ್ತು. ಇದು ಮದುವೆಯ ಸಮಯವಾಗಿರುವುದರಿಂದ ಒಂದಿಷ್ಟು ಜನ ಖಾಸಗಿ ಬಸ್ ಕಡೆ ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇವರೂ ಬರದೇ ಇರಬಹುದು ಎಂಬ ಕಳವಳ ವ್ಯಕ್ತವಾಗುತ್ತಿತ್ತು.

ಈ ಬಗ್ಗೆ ಮಾತನಾಡಿರುವ ಖಾಸಗಿ ಬಸ್ ಏಜೆಂಟ್ ಉಮೇಶ್ ರಾವ್ ಸಾಳಂಕಿ, ಜಿಲ್ಲೆಯಲ್ಲಿ 150-180 ಸ್ಟೇಜ್ ಕ್ಯಾರಿಯರ್ ಬಸ್‌ಗಳಿವೆ. ಮದುವೆಗಳಿಗೆಂದು 50-60 ಬಸ್‌ಗಳನ್ನು ಪಡೆಯಲಾಗಿದೆ. ಹೀಗಾಗಿ ಇಂದು 100-120 ಬಸ್‌ಗಳಷ್ಟೇ ಇವೆ. ಇವೂ ಸಹ ಭರ್ತಿಯಾಗುತ್ತಿಲ್ಲ ಎಂದಿದ್ದಾರೆ.

ಜಗಳೂರು, ಹರಪನಹಳ್ಳಿ, ಬಾಡ, ಸೂಳೆಕೆರೆ ಹಾಗೂ ಚನ್ನಗಿರಿ ಮಾರ್ಗಗಳ ಖಾಸಗಿ ಬಸ್‌ಗಳಿಗೆ ಅತಿ ಹೆಚ್ಚು ಸಮಸ್ಯೆಯಾಗಿದೆ. ಕೊರೊನಾ ನಂತರ ಖಾಸಗಿ ಬಸ್‌ಗಳ ನಿರ್ವಹಣೆಯೇ ಕಷ್ಟವಾಗಿದೆ. ಈಗ ಶೇ.20-25ರಷ್ಟು ಜನರು ಖಾಸಗಿ ಬಸ್ ಬಿಟ್ಟು ಹೋದರೂ ನಿರ್ವಹಣೆ ಕಷ್ಟ ಎಂದವರು ಹೇಳಿದರು.

ಮೊದಲೆಲ್ಲ ಖಾನಾಹೊಸಳ್ಳಿಗೆ ತೆರಳುವ ಬಸ್‌ನಲ್ಲಿ ಜನ ನಿಂತುಕೊಂಡು ಹೋಗುತ್ತಿದ್ದರು. ಈಗ ಜಗಳೂರಿನವರೆಗೆ ಸರ್ಕಾರಿ ಬಸ್‌ನಲ್ಲಿ ತೆರಳಿ, ನಂತರ ಖಾಸಗಿ ಬಸ್‌ಗೆ ಬರುತ್ತಿದ್ದಾರೆ. ಹೀಗಾಗಿ ಸೀಟ್‌ಗಳೆಲ್ಲಾ ಖಾಲಿ ಇವೆ ಎಂದು ಬಸ್ ಚಾಲಕ ಸುರೇಶ್ ತಿಳಿಸಿದರು.

ಚನ್ನಗಿರಿ, ಬಾಡ ಹಾಗೂ ಸಂತೇಬೆನ್ನೂರು ಮಾರ್ಗಗಳಲ್ಲಿ ಖಾಸಗಿ ಬಸ್‌ಗಳಿಗೆ ಬರುವವರ ಸಂಖ್ಯೆ ಶೇ.75ರಷ್ಟು ಕಡಿಮೆಯಾಗಿದೆ. 8-10 ಜನ ಬಂದರೂ ಸಾಕು ಎಂದು ಬಸ್ ಓಡಿಸುವಂತಾಗಿದೆ ಎಂದು ಖಾಸಗಿ ಬಸ್ ನಿರ್ವಾಹಕ ನಿಂಗರಾಜ್ ತಿಳಿಸಿದ್ದಾರೆ.

ಮೊದಲು ಖಾಸಗಿ ಬಸ್‌ಗಳಿಗೆ ದಿನಕ್ಕೆ 8-9 ಸಾವಿರ ಜನ ಬರುತ್ತಿದ್ದರು. ಈಗ ಅವರ ಸಂಖ್ಯೆ 3-4 ಸಾವಿರಕ್ಕೆ ಇಳಿದಿದೆ. ಬರುವ ಆದಾಯ ಡೀಸೆಲ್‌ಗೆ ಹೊಂದಿಸಿದರೆ ಸಾಕು ಎನ್ನುವಂತಾಗಿದೆ ಎಂದು ಖಾಸಗಿ ಬಸ್ ಏಜೆಂಟರು ಹೇಳುತ್ತಿದ್ದಾರೆ.

ಮತ್ತೊಂದೆಡೆ ಸರ್ಕಾರಿ ಬಸ್‌ಗಳಲ್ಲಿ ಜನರು ತುಂಬಿ ತುಳುಕುತ್ತಿದ್ದರು. ಸಂಜೆ ವೇಳೆಯಲ್ಲಿ ಚನ್ನಗಿರಿ ಮಾರ್ಗಕ್ಕೆ ತೆರಳುವ ಬಸ್‌ಗಳು ಕಾಲಿಡಲೂ ಜಾಗವಿಲ್ಲದಷ್ಟು ಭರ್ತಿಯಾಗಿದ್ದವು. ಕೆಲವರು ಫುಟ್‌ಬೋರ್ಡ್ ಮೇಲೆ ನೇತಾಡುತ್ತಿದ್ದರು.

ಹಿಂದಿನ ದಿನಗಳಿಗೆ ಹೋಲಿಸಿದರೆ ಸರ್ಕಾರಿ ಬಸ್‌ಗಳಿಗೆ ಬರುವವರ ಸಂಖ್ಯೆ ಶೇ.50ರಷ್ಟು ಹೆಚ್ಚಾಗಿದೆ. ಬಹುತೇಕ ಎಲ್ಲ ಮಾರ್ಗಗಳಲ್ಲಿ ಇದೇ ಪರಿಸ್ಥಿತಿ ಇದೆ ಎಂದು ಸರ್ಕಾರಿ ಬಸ್‌ಗಳ ಡ್ರೈವರ್ ಹಾಗೂ ಕಂಡಕ್ಟರ್‌ಗಳು ತಿಳಿಸಿದ್ದಾರೆ.

ಸರ್ಕಾರದ ಉಚಿತ ಪ್ರಯಾಣ ಗ್ಯಾರಂಟಿಯು ಮಹಿಳೆಯರ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಆದರೆ, ಖಾಸಗಿ ಬಸ್‌ಗಳ ವಲಯದ ಭವಿಷ್ಯ ಈಗ ಅತಂತ್ರವಾಗಿದೆ. ಮುಂಬರುವ ದಿನಗಳಲ್ಲಿ ಸರ್ಕಾರ ಖಾಸಗಿ ವಲಯಕ್ಕೆ ನೆರವಾಗದೇ ಇದ್ದರೆ, ಕೇವಲ ಸರ್ಕಾರಿ ಬಸ್‌ಗಳಷ್ಟೇ ಉಳಿಯುವ ಪರಿಸ್ಥಿತಿ ಬರಬಹುದು.

error: Content is protected !!