ಶೌಚಾಲಯ, ಮುರಿದ ಚೇರುಗಳು, ಕುಡಿಯಲು ನೀರಿಲ್ಲದ ಮಹಾನಗರ ಪಾಲಿಕೆ

ಶೌಚಾಲಯ, ಮುರಿದ ಚೇರುಗಳು, ಕುಡಿಯಲು ನೀರಿಲ್ಲದ ಮಹಾನಗರ ಪಾಲಿಕೆ - Janathavani

ಮಾನ್ಯರೇ, 

ನೋಡು ನೋಡುತ್ತಿದಂತೆ ದಾವಣಗೆರೆ ನಗರವು ಬೃಹತ್ತಾಗಿ ಬೆಳೆಯುತ್ತಿದ್ದು, ಅನೇಕ ಸಾರ್ವಜನಿಕರು ದಿನನಿತ್ಯ ನಗರಕ್ಕೆ ತಮ್ಮ ಅನೇಕ ಕೆಲಸಗಳ ನಿಮಿತ್ತ ಬರುತ್ತಲೇ ಇರುತ್ತಾರೆ. ಹಲವಾರು ಜನರು  ಸಾರ್ವಜನಿಕ ಸ್ಥಳಗಳಿಗೆ ಅಥವಾ ವ್ಯವಹರಿಸುವ ಅಂಗಡಿಗಳಿಗೆ ಹೋದಾಗ ಬಾಯಾರಿಸಿ ಬಂದವರಿಗೆ ಒಂದು ಲೋಟ ನೀರು ಕೇಳಿದರೆ ಸುಲಭವಾಗಿ ಸಿಗುತ್ತದೆ. ಆದರೆ ನಮ್ಮ ದುರಾದೃಷ್ಟ ಏನೆಂದರೆ, ಇಡೀ ನಗರಕ್ಕೆ ವ್ಯವಸ್ಥಿತವಾಗಿ ನೀರು ಸರಬರಾಜು ಮಾಡುವ ಮಹಾನಗರ ಪಾಲಿಕೆಯಲ್ಲಿ ಕುಡಿಯಲು ಹನಿ ನೀರಿಲ್ಲದೆ ಪರದಾಡುವ ಪರಿಸ್ಥಿತಿ ಇರುವುದಂತು ಅಷ್ಟೇ ಸತ್ಯ.

ಹೌದು ಸ್ನೇಹಿತರೆ, ಈ ವರ್ಷದ ಇಡೀ ಬೇಸಿಗೆಯಲ್ಲಿ ಕುಡಿಯಲು ಹನಿ ನೀರಿಲ್ಲದೆ ಅನೇಕ ಸಾರ್ವಜನಿಕರು ಪರದಾಡಿದ್ದಾರೆ. ಇದರ ಬಗ್ಗೆ ಕೆಲ ಪಾಲಿಕೆ ಸಿಬ್ಬಂದಿಗೆ ಕೇಳಿದಾಗ `ಅಯ್ಯೋ ಸಾರ್ ಹೋದ ವರ್ಷ ಒಂದು ಕೆಂಟ್ ಹಾಕಿದರು ಅದು ಎರಡೇ ದಿನಕ್ಕೆ ಹೋಯ್ತು’ ಎಂದು ಅಳಲು ತೋಡಿಕೊಂಡಿದ್ದಾರೆ. ಇದರ ಜೊತೆ ಪಾಲಿಕೆಯೊಳಗಡೆ ಸಾರ್ವಜನಿಕರಿಗಾಗಿ ಹಾಕಿರುವ ಅನೇಕ ಚೇರ್‌ಗಳು ಕಿತ್ತು ನೆಲಕಚ್ಚಿ ವರ್ಷವೇ ಕಳೆದರೂ ಕಣ್ಣು ಮುಚ್ಚಿ ಕೂತಿರುವ ದಾವಣಗೆರೆ ಮಹಾನಗರಪಾಲಿಕೆ ನಿದ್ದೆಯಿಂದ ಎದ್ದು ಇತ್ತ ಗಮನಹರಿಸಬೇಕಿದೆ.

ಸಾರ್ವಜನಿಕರು ಮುಖ್ಯ ವಾಗಿ ಹಿರಿಯ ನಾಗರಿಕರು, ಮಹಿಳೆಯರು  ಕಂದಾಯ ರಶೀದಿ ಪಡೆಯಲು ಮತ್ತು ಅನೇಕ ಕೆಲಸಗಳ ನಿಮಿತ್ತ ಪಾಲಿಕೆಗೆ ಬಂದರೆ ಕೂರಲು ಸರಿ ಯಾದ ಚೇರ್‌ಗಳಿಲ್ಲದೇ ಪರದಾಡಬೇಕಿದೆ.

ಈ ದುರ್ವ್ಯವಸ್ಥೆಗೆ ಸಾರ್ವಜನಿಕರು ಬೈಯ್ಯುವುದು ಸರ್ವೆ ಸಾಮಾನ್ಯವಾಗಿದೆ. ಪಾಲಿಕೆಯ ಹಿಂಭಾಗದಲ್ಲಿ ಸಾರ್ವಜನಿಕ ಶೌಚಾಲಯ ಇದ್ದರು ಅದಕ್ಕೆ ಬೀಗ ಹಾಕಿ 3 ವರ್ಷ ಮೇಲ್ಪಟ್ಟು ಕಳೆದಿರುವುದು ನಿಜಕ್ಕೂ ಬಹಳ ಬೇಸರದ ಸಂಗತಿ. ಕುಡಿಯಲು ಹನಿ ನೀರಿಲ್ಲದಿರುವ ಮಹಾನಗರಪಾಲಿಕೆಯಲ್ಲಿ ಶೌಚಾಲಯ ಬಯಸುವುದು ದೂರದ ಮಾತು ಎಂದು ಅನೇಕ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನೂರಾರು ಕೋಟಿ ಅನುದಾನದಿಂದ ನಗರಾದ್ಯಂತ ಕಾಮಗಾರಿ ಮಾಡುತ್ತಿರುವ  ನಗರಪಾಲಿಕೆ ಹನಿ ನೀರು, ಚೇರು, ಸಾರ್ವ ಜನಿಕ ಶೌಚಾಲಯವಿಲ್ಲದೆ ಇರು ವಷ್ಟು ಬರಗೆಟ್ಟಿದೆಯೇ? ಪೂಜ್ಯ ಮಹಾ ಪೌರರು ಮತ್ತು ಮಾನ್ಯ ಆಯುಕ್ತರು ಕೂಡಲೇ ಇದರ ಬಗ್ಗೆ ಗಮಹರಿಸುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.


– ನಾಗಾರ್ಜುನ್ ಗುಜ್ಜರ್ ರಾಜೇಂದ್ರ, ತರಳಬಾಳು ಬಡಾವಣೆ, ದಾವಣಗೆರೆ. 9739555455

error: Content is protected !!