ದಾವಣಗೆರೆ, ಜೂ.7- ದಾವಣಗೆರೆ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಬುಧವಾರ ಸಸಿ ನೆಟ್ಟು ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ವಿಶ್ವವಿದ್ಯಾನಿಲಯದ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಸಸಿ ನೆಟ್ಟು, ಗಿಡಗಳಿಗೆ ನೀರುಣಿಸಿ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಹವಾಮಾನದ ಏರುಪೇರು ಮತ್ತು ಪ್ರಕೃತಿಯ ಎಲ್ಲ ಸಮಸ್ಯೆಗಳಿಗೆ ಪರಿಸರ ನಾಶವೇ ಕಾರಣವಾಗಿದೆ. ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಗಿಡ ಬೆಳೆಸಿ ಮುಂದೆ ಎದುರಾಗುವ ಸಮಸ್ಯೆ ನಿವಾರಿಸಲು ಎಲ್ಲರೂ ಕೈಜೋಡಿಸಬೇಕು ಎಂದು ನುಡಿದರು.
ಗಿಡ ಮರಗಳುಳ್ಳ ಪರಿಸರ ಸುಂದರವಾಗಿರುವುದಷ್ಟೇ ಅಲ್ಲ; ಆರೋಗ್ಯಕ್ಕೂ ಉತ್ತಮವಾಗಿರುತ್ತದೆ. ಉತ್ತಮ ಆರೋಗ್ಯಕ್ಕೆ ಪರಿಸರಕ್ಕೆ ಹತ್ತಿರವಾದ ವಾತಾವರಣವನ್ನು ಸೃಷ್ಟಿಸುವುದೂ ಮುಖ್ಯ ಎಂದು ಅವರು ನುಡಿದರು.
ವಿಶ್ವವಿದ್ಯಾನಿಲಯದ ತೋಟಗಾರಿಕೆ ವಿಭಾಗವು ಸಹಭಾಗಿತ್ವ ವಹಿಸಿತ್ತು. ಈ ಸಂದರ್ಭದಲ್ಲಿ ಡೀನ್ರಾದ ಪ್ರೊ.ಪಿ.ಲಕ್ಷ್ಮಣ್, ಪ್ರೊ.ವೆಂಕಟರಾವ್ ಪಲಾಟಿ, ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ.ಅಶೋಕಕುಮಾರ್ ಪಾಳೇದ, ವಿದ್ಯಾರ್ಥಿ ಕಲ್ಯಾಣ ಘಟಕದ ನಿರ್ದೇಶಕ ಪ್ರೊ.ಯು.ಎಸ್. ಮಹಾಬಲೇಶ್ವರ, ಪ್ರಾಧ್ಯಾಪಕರಾದ ಪ್ರೊ.ಗೋವಿಂದಪ್ಪ, ಶಿವಕುಮಾರ ಕಣಸೋಗಿ, ಡಾ.ವೆಂಕಟೇಶ್, ಡಾ.ವೀರೇಶ್, ಡಾ.ಎಸ್.ಆರ್.ಸಂತೋಷಕುಮಾರ್, ತೋಟಗಾರಿಕೆ ವಿಭಾಗದ ಅಧಿಕಾರಿ ವೈ.ಎಚ್.ಕುಂದರಗಿ, ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.