ಮಾನ್ಯರೇ,
ಪ್ರಸ್ತುತ ಸುಪ್ರೀಂಕೋರ್ಟ್ ನಲ್ಲಿ ಸಂತ್ರಸ್ತ ಯುವತಿಗೆ ಕುಜ ದೋಷವಿದೆ ಎಂಬ ವಿಷಯ ಬಹು ಚರ್ಚಿತವಾಗುತ್ತಿದೆ. ಒಂದೆಡೆ ಪ್ರಖರ ವೈಚಾರಿಕರು, ಮಾನವತಾವಾದಿಗಳೂ ಆದ ಬುದ್ಧ, ಬಸವ, ಗಾಂಧಿ, ವಿವೇಕಾನಂದರು ಜನಿಸಿದ ಭಾರತದಲ್ಲಿ ಜೋತಿಷ್ಯ ಶಾಸ್ತ್ರವೆಂಬ ಅವೈಜ್ಞಾನಿಕ, ಕಲ್ಪನೆಯ, ನಂಬಿಕೆಗಳ ಆಧಾರದ ಜ್ಯೋತಿಷ್ಯಶಾಸ್ತ್ರ ಪ್ರಚಲಿತವಿರುವುದು ವಿಪರ್ಯಾಸ. ಹಾಗೆ ನೋಡಿದರೆ, ಕುಜ ದೋಷ ಮಂಗಳನಲ್ಲಿಲ್ಲ. ಯಾವ ಗ್ರಹಗಳು, ರಾಹು ಕೇತುಗಳು, ಗ್ರಹಣಗಳು ಮನುಷ್ಯರ ಮೇಲೆ ದುಷ್ಪರಿಣಾಮವನ್ನು ಬೀರುತ್ತವೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳೂ ಇಲ್ಲ.
ಆದರೆ, ಕುಜ ದೋಷವಿರುವುದು ಖಂಡಿತ. ಕುಜ ಎಂಬ ಪದದಲ್ಲಿ ಕು- ಎಂದರೆ `ಕುಡಿತ’ ಅಥವಾ ಮತ್ತು. ಇದು ಇಡೀ ಭಾರತದ, ವಿಶ್ವದ ಬಹುತೇಕರಿಗೆ ಆವರಿಸಿರುವ ಮಹಾರೋಗ. ಕುಡಿತದ ಮತ್ತಿಗೆ ಅಧಿಕಾರದ ಮತ್ತು, ಹಣದ ಮತ್ತು, ಸ್ಥಾನಮಾನದ ಮತ್ತು ಇತ್ಯಾದಿ ಮತ್ತುಗಳೂ ಸೇರುತ್ತವೆ. ಜ- ಎಂದರೆ ಜ__ತ. ಗ್ರಾಮ್ಯ ಭಾಷೆಯಲ್ಲಿ ಅತೀ ಸೆಕ್ಸ್ ಗೀಳಿಗೆ ಈ ಶಬ್ಧ ಉಪಯೋಗಿಸುತ್ತಾರೆ. ಹಾಗಾಗಿ ಕುಜ ದೋಷ ಅನೇಕ ಅಪರಾಧಗಳಿಗೆ, ಸಾಮಾಜಿಕ ಅಲ್ಲೋಲ, ಕಲ್ಲೋಲಗಳಿಗೆ ದಾರಿಯಾಗಿರುವುದು ಸತ್ಯ. ನಾವೆಲ್ಲರೂ ಈ `ಕುಜ’ದೋಷಕ್ಕೆ ಹೆದರಬೇಕೇ ವಿನಃ, ಮಂಗಳ ಗ್ರಹ ಕುಜ ದೋಷವನ್ನುಂಟು ಮಾಡಬಹುದು ಎನ್ನುವ ಊಹೆಯ ಮೌಢ್ಯಕ್ಕಲ್ಲ.
– ಶಿವನಕೆರೆ ಬಸವಲಿಂಗಪ್ಪ, ಕರುಣಾ ಜೀವ ಕಲ್ಯಾಣ ಟ್ರಸ್ಟ್, ದಾವಣಗೆರೆ.