ಹರಿಹರ, ಜೂ. 6 – ತಾಲ್ಲೂಕಿನ ಭಾನುವಳ್ಳಿ ಗ್ರಾಮದ ಪರಿಶಿಷ್ಟ ಜಾತಿಯ ಮಾದಿಗ ಸಮುದಾಯದವರಿಗೆ ವಸತಿ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ದಸಂಸ (ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ) ನೇತೃತ್ವದಲ್ಲಿ ಭಾನುವಳ್ಳಿ ಗ್ರಾಮದಿಂದ ನಗರದ ತಾಲ್ಲೂಕು ಕಚೇರಿವರೆಗೆ ಪಾದಯಾತ್ರೆ ನಡೆಸಿ ತಹಶೀಲ್ದಾರರಿಗೆ ಮನವಿ ನೀಡಲಾಯಿತು.
ನಂತರ ದಸಂಸ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ಭಾನುವಳ್ಳಿ ಗ್ರಾಮದ ಎ.ಕೆ.ಕಾಲೋನಿಯಲ್ಲಿ ಅಂದಾಜು 150ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದಾರೆ. ಬಹುತೇಕ ಕುಟುಂಬಗಳು ಸಣ್ಣ ಮನೆಗಳಲ್ಲಿ ವಾಸಿಸುತ್ತಿವೆ. ಈ ಮನೆಗಳಲ್ಲಿ ಎರಡಕ್ಕಿಂತ ಹೆಚ್ಚು ಕುಟುಂಬಗಳಿವೆ ಎಂದರು.ಅನೈರ್ಮಲ್ಯ ವಾತಾವರಣದಲ್ಲಿ ವಾಸಿಸುತ್ತಿರುವುದರಿಂದ ನಿವಾಸಿಗಳ ಆರೋಗ್ಯ ಹದಗೆಡುತ್ತಿದೆ. ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ ಎಂದರು.
ವಸತಿ ಸೌಲಭ್ಯಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಗ್ರಾಮದ ರಿ.ಸರ್ವೇ ನಂ.239/22 ರ ಇನಾಂ ಜಮೀನಿನಲ್ಲಿ ಅಥವಾ ಸೂಕ್ತ ಜಮೀನಿನಲ್ಲಿ ಈ ನಿವಾಸಿಗಳಿಗೆ ವಸತಿ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ನಂತರ ಪ್ರತಿಭಟನಾಕಾರರನ್ನುದ್ದೇಶಿಸಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಮಾತನಾಡಿ, ಈ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸುವ ಪ್ರಯತ್ನ ಮಾಡುತ್ತೇನೆ. ಒಂದು ತಿಂಗಳ ಕಾಲಾವಕಾಶ ನೀಡಿರಿ, ಧರಣಿ ಸತ್ಯಾಗ್ರಹ ಮಾಡಬೇಡಿರಿ ಎಂದು ಕೋರಿದಾಗ ಪ್ರತಿಭಟನಾಕಾರರು ಧರಣಿಯನ್ನು ಮುಂದೂಡಿದರು.
ಈ ಸಂದರ್ಭದಲ್ಲಿ ತಾ.ಪಂ. ಮಾಜಿ ಅಧ್ಯಕ್ಷ ಹೆಚ್.ಕೆ.ಕನ್ನಪ್ಪ, ದಸಂಸ ತಾಲ್ಲೂಕು ಸಂಘಟನಾ ಸಂಚಾಲಕ ಸಿ. ಚೌಡಪ್ಪ, ಭಾನುವಳ್ಳಿ ಗ್ರಾಮದ ನಿವಾಸಿಗಳಾದ ಕೆಂಚಪ್ಪ, ವಿ.ಬಿ. ಹಳದಪ್ಪ, ಹನುಮಂತಪ್ಪ, ಲಕ್ಷ್ಮಣಪ್ಪ, ನೀಲಪ್ಪ, ಹರೀಶ್, ಸಂತೋಷ್, ಚೌಡಮ್ಮ, ರತ್ನಮ್ಮ, ದುರುಗಮ್ಮ, ಹನುಮಕ್ಕ, ಪುಷ್ಪ, ನಾಗ್ಮ, ಸಾವಿತ್ರ, ಸುಶೀಲಮ್ಮ, ನಾಗಮ್ಮ ಹನುಮಮ್ಮ ಹಾಗೂ ಇತರರಿದ್ದರು.