ದಾವಣಗೆರೆ, ಜೂ.1- ಜಿಲ್ಲಾದ್ಯಂತ ಶಾಲಾ-ಕಾಲೇಜುಗಳಲ್ಲಿ ಪ್ರವೇಶ ಕಾರ್ಯ ಭರದಿಂದ ನಡೆಯುತ್ತಿದೆ. ಶಾಲಾ-ಕಾಲೇಜಿನ ಮುಂಭಾಗ ಪೋಷಕರು ವಿದ್ಯಾರ್ಥಿಗಳೊಂದಿಗೆ ಆಗಮಿಸಿ, ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ನೋಂದಣಿ ಮಾಡಿಸುತ್ತಿದ್ದಾರೆ.
ನಗರದ ನಿಟುವಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮಕ್ಕೆ ಬೇಡಿಕೆ ಹೆಚ್ಚಾಗಿದೆ.
ಈ ಶಾಲೆಯ ಆಂಗ್ಲ ಮಾಧ್ಯಮಕ್ಕೆ ತಮ್ಮ ಮಕ್ಕಳನ್ನು ಸೇರಿಸಲು ಬುಧವಾರ ಬೆಳಿಗ್ಗೆ 4 ಗಂಟೆಯಿಂದಲೇ ಪೋಷಕರು ಸರದಿ ಸಾಲಿನಲ್ಲಿ ನಿಂತಿದ್ದಾಗಿ ಶಿಕ್ಷಕರು ಹೇಳಿದ್ದಾರೆ.
1 ರಿಂದ 5ನೇ ತರಗತಿ ವರೆಗೆ 30 ಮಕ್ಕಳನ್ನು ಮಾತ್ರ ಆಂಗ್ಲ ಮಾಧ್ಯಮಕ್ಕೆ ನೋಂದಣಿ ಮಾಡಿಸಿ ಕೊಳ್ಳಲು ಸರ್ಕಾರಿ ಆದೇಶವಿದೆ. ಆದರೆ ಸುಮಾರು 150ಕ್ಕೂ ಹೆಚ್ಚು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳಲು ದುಂಬಾಲು ಬಿದ್ದಿರುವುದು ಶಿಕ್ಷಕರಿಗೆ ತಲೆ ನೋವಾಗಿ ಪರಿಣಮಿಸಿದೆ.
ಪ್ರತಿಷ್ಠಿತ ಖಾಸಗಿ ಶಾಲೆಗಳ ಬಳಿಯೇ ಇರುವ ಈ ಸರ್ಕಾರಿ ಶಾಲೆ ಕಳೆದ ಹಲವು ವರ್ಷಗಳಿಂದ ಗುಣಮಟ್ಟದ ಶಿಕ್ಷಣಕ್ಕೆ ಹೆಸರು ವಾಸಿಯಾಗಿದೆ. ಖಾಸಗಿ ಶಾಲೆಯಲ್ಲಿ ಸಾವಿರಾರು ರೂಪಾಯಿ ಶುಲ್ಕ ಕಟ್ಟಲಾಗದ ಅನೇಕರು ಈ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇತರೆ ಸರ್ಕಾರಿ ಶಾಲೆಗಳಿಗಿಂತ ಇಲ್ಲಿ ಮಕ್ಕಳ ಸಂಖ್ಯೆ ಅಧಿಕವಾಗಿದೆ.
ಕಳೆದ ನಾಲ್ಕು ವರ್ಷಗಳಿಂದ ಒಂದನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮಕ್ಕೆ ಅನುಮತಿ ಸಿಕ್ಕಿತ್ತು. ಅಲ್ಲಿಂದ ಇಲ್ಲಿಯವರೆಗೂ ಬೇಡಿಕೆ ಹೆಚ್ಚಾಗಿದೆ. ಈ ವರ್ಷ ಬೇಡಿಕೆ ದುಪ್ಪಟ್ಟಾಗಿದೆ ಎನ್ನುತ್ತಾರೆ ಶಿಕ್ಷಕರು.
ಇಲ್ಲಿನ ಶಿಕ್ಷಕರು ನೋಂದಣಿ ಸಂಖ್ಯೆಯನ್ನು ಹೆಚ್ಚಿಸುವಂತೆ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.