ಉದ್ಯೋಗ ಅರಸಿ ಉದ್ಯೋಗ ಮೇಳಕ್ಕೆ ಆಗಮಿಸಿದ್ದ ವಿದ್ಯಾರ್ಥಿಗಳು ಸರದಿಯಲ್ಲಿ ನಿಂತಿರುವುದು.
ದಾವಣಗೆರೆ, ಜೂ. 1- ಪ್ರಸ್ತುತ ದಿನಮಾನದಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗದಿದ್ದರೆ ಏಕೆ, ಓದಬೇಕೆಂಬ ಮನೋಭಾವನೆ ಇದೆ. ಆದರೆ ಇದು ಸರಿಯಾದ ನಿಲುವಲ್ಲ. ಉದ್ಯೋಗಕ್ಕೆ ಅನುಗುಣವಾಗಿ ಕೌಶಲ್ಯವನ್ನು ರೂಢಿಸಿಕೊಳ್ಳಬೇಕು ಎಂದು ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ್ ಹೇಳಿದರು.
ನಗರದ ಜಿ.ಎಂ. ಎಸ್. ಅಕಾಡೆಮಿಯ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಹಮ್ಮಿಕೊಂಡಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಂತಹ ದೊಡ್ಡ ದೊಡ್ಡ ದೇಶಗಳಲ್ಲಿ `ಮೇಕ್ ಇನ್ ಇಂಡಿಯಾ’, `ಸ್ಟಾರ್ಟ್ ಅಪ್’ ಸೇರಿದಂತೆ ಅನೇಕ ಯೋಜನೆಗಳ ಮೂಲಕ ಪ್ರತಿ ವರ್ಷ ಲಕ್ಷಾಂತರ ಉದ್ಯೋಗಗಳು ಲಭ್ಯವಾಗುತ್ತಿವೆ. ಇದರೊಟ್ಟಿಗೆ ಕಾರ್ಪೋರೇಟ್ ಕಂಪನಿಗಳಲ್ಲೂ ಸಹ ಉದ್ಯೋಗಗಳು ಸಿಗುತ್ತವೆ ಎಂದರು.
ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಮಾನಸಿಕ ಹಾಗೂ ಬೌದ್ಧಿಕವಾಗಿ ಸಿದ್ದರಾಗಬೇಕು. ಅಗತ್ಯ ಕೌಶಲ್ಯವನ್ನು ಸಹ ರೂಢಿಸಿಕೊಳ್ಳಬೇಕೆಂದು ಹೇಳಿದರು.
ಎಲ್ಲರಿಗೂ ಉದ್ಯೋಗ ಪಡೆಯಬೇಕೆಂಬುದು ನೂತನ ಶಿಕ್ಷಣ ನೀತಿಯಾಗಿದೆ. ಇಂಜಿನಿಯರಿಂಗ್ ಪದವಿಯ ನಾಲ್ಕು ಸೆಮಿಸ್ಟರ್ ಮುಗಿದಿದ್ದು, ಉಳಿದ ನಾಲ್ಕು ಸೆಮಿಸ್ಟರ್ ಗಳಲ್ಲಿ ಕೌಶಲ್ಯ ಆಧರಿತ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನ್ವಯ ಎಲ್ಲರಿಗೂ ಉದ್ಯೋಗ ನೀಡುವ ಸಲುವಾಗಿ ಅವಶ್ಯ ತರಬೇತಿ ನೀಡಲಾಗುತ್ತಿದೆ. ಕೌಶಲ್ಯ ತರಬೇತಿಗೂ ಸಹ ವಿವಿಧ ಕೋರ್ಸ್‌ಗಳಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಉದ್ಯೋಗ ಮೇಳಕ್ಕೆ 30 ಕಂಪನಿಗಳು ಬಂದಿದ್ದು, ಮೂರು ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು ಮುಂದಾಗಿರುವುದು ಸಂತಸದ ಸಂಗತಿ. ಈ ನಿಟ್ಟಿನಲ್ಲಿ ಜಿಎಂಎಸ್ ಅಕಾಡೆಮಿ ಮೇಳವನ್ನು ಆಯೋಜಿಸಿರುವುದು ಶ್ಲ್ಯಾಘನೀಯ ಎಂದರು.
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಪ್ರತಿಯೊಬ್ಬರಿಗೂ ಉದ್ಯೋಗಾವಕಾಶ ಮುಖ್ಯ. ಕಂಪನಿಗಳಿಗೆ ಉತ್ತಮ ಕೆಲಸಗಾರರು ಸೇರಿಕೊಂಡರೆ ಕಂಪನಿಯ ಪ್ರಗತಿಯ ಜೊತೆಗೆ ಕುಟುಂಬ ಮತ್ತು ದೇಶ ಕೂಡ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ಹೇಳಿದರು.
ಜಿಎಂಎಸ್ ಅಕಾಡೆಮಿ ಆಯೋಜಿಸಿರುವ ಉದ್ಯೋಗ ಮೇಳದಲ್ಲಿ ಬಂದಿರುವ ಕಂಪನಿಗಳಿಗೆ ಆರು ಸಾವಿರ ಉದ್ಯೋಗಿಗಳ ಅವಶ್ಯವಿದ್ದು, ಈಗಾಗಲೇ 4500 ಜನ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅಗತ್ಯವಿದ್ದರೆ ಮುಂದಿನ ಆರು ತಿಂಗಳ ಬಳಿಕ ಇಂತದೇ ಬೃಹತ್ ಉದ್ಯೋಗ ಮೇಳ ಆಯೋಜನೆ ಮಾಡುವುದಾಗಿ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀಶೈಲ ಎಜುಕೇಶನಲ್ ಟ್ರಸ್ಟ್ ಖಜಾಂಚಿ ಜಿ.ಎಸ್. ಅನಿತ್‌ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು
ಮೇಳದಲ್ಲಿ ಬಂದಿರುವ ಕಂಪನಿಗಳಲ್ಲಿ ನಿಮಗಿಷ್ಟವಾದ ಕಂಪನಿಗಳನ್ನು ಆಯ್ಕೆ ಮಾಡಿಕೊಂಡು ಕೆಲಸ ಮಾಡುವ ಮೂಲಕ ಕಂಪನಿಗೂ ಒಳ್ಳೆಯ ಹೆಸರನ್ನು ತರಲು ಸಲಹೆ ನೀಡಿದರು.
ಮಾಜಿ ಶಾಸಕ ಪ್ರೊ. ಲಿಂಗಣ್ಣ, ಬಿಜೆಪಿ ಜಿಲ್ಲಾ
ಅಧ್ಯಕ್ಷ ವೀರೇಶ್ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಮುಖಂಡರಾದ ಶ್ರೀನಿವಾಸ ದಾಸಕರಿಯಪ್ಪ, ಹೆಚ್.ಎನ್. ಶಿವಕುಮಾರ್, ಚಂದ್ರಶೇಖರ್ ಪೂಜಾರ್, ಉಪ ಮೇಯರ್ ಯಶೋಧ ಹೆಗ್ಗಪ್ಪ, ಮಾಜಿ ಉಪ ಮೇಯರ್ ಗಾಯತ್ರಿಬಾಯಿ ಖಂಡೋಜಿರಾವ್, ಟ್ರಸ್ಟ್ ಕಾರ್ಯದರ್ಶಿ ಜಿ.ಎಂ. ಲಿಂಗರಾಜ್, ಪ್ರಾಚಾರ್ಯರಾದ ಡಾ. ಸಂಜಯ್ ಪಾಂಡೆ, ಶ್ವೇತಾ ಎಸ್. ಮರಿಗೌಡರ್, ಕಾಲೇಜಿನ ಉದ್ಯೋಗಾಧಿಕಾರಿ ತೇಜಸ್ವಿ ಕಟ್ಟಿಮನಿ ಸೇರಿದಂತೆ ಅನೇಕರಿದ್ದರು.