ದಾವಣಗೆರೆ, ಜೂ. 1- ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ‘ವಿಶ್ವ ತಂಬಾಕು ರಹಿತ’ ದಿನ ಆಚರಿಲಾಯಿತು. `ನಮಗೆ ಆಹಾರ ಬೇಕು ತಂಬಾಕು ಅಲ್ಲ’ ಈ ವರ್ಷದ ತಂಬಾಕು ರಹಿತ ದಿನದ ಘೋಷಣೆಯಾಗಿದ್ದು, ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲ ಡಾ. ಬಿ.ಎಸ್. ಪ್ರಸಾದ್, ವೈದ್ಯಕೀಯ ನಿರ್ದೇಶಕ ಡಾ. ಅರುಣ್ ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಹೊರರೋಗಿಗಳ ವಿಭಾಗದ ಪ್ರಾಂಗಣದಲ್ಲಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ನೂರಾರು ರೋಗಿಗಳು, ರೋಗಿಗಳ ಸಂಬಂಧಿಕರು, ವೈದ್ಯಕೀಯ ವಿದ್ಯಾರ್ಥಿಗಳು, ಶುಶ್ರೂಷಕ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂಸ್ಥೆಯ ಶ್ವಾಸಕೋಶ ವಿಭಾಗದ ವತಿಯಿಂದ ಆಯೋಜಿಸಲಾಗಿತ್ತು. ಶ್ವಾಸಕೋಶ ವಿಭಾಗದ ಪ್ರಾಧ್ಯಾಪಕ ಡಾ. ಅನೂಪ್ ಬಾಣೂರ್ ನೆರೆದಿದ್ದ ಜನರನ್ನು ಉದ್ದೇಶಿಸಿ ತಂಬಾಕು ಮತ್ತು ಇನ್ನಿತರೆ ತಂಬಾಕು ಉತ್ಪನ್ನಗಳಿಂದಾಗುವ ದುಷ್ಪರಿಣಾಮಗಳು ಅದರಿಂದಾಗುವ ಮಾರಣಾಂತಿಕ ಕಾಯಿಲೆಗಳಾದ ಕ್ಯಾನ್ಸರ್ ಇತ್ಯಾದಿಗಳ ಕುರಿತು ಜನರಿಗೆ ತಿಳಿ ಹೇಳಿ ಜನರಲ್ಲಿ ಜಾಗೃತಿ ಮೂಡಿಸಿದರು.
ಶ್ವಾಸಕೋಶ ವಿಭಾಗದ ಇನ್ನೋರ್ವ ಸಹ ಪ್ರಾಧ್ಯಾಪಕರಾದ ಡಾ. ಪ್ರಿಯದರ್ಶಿನಿ ರಾಯ್ಕರ್ ನೇತೃತ್ವದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ಗೃಹ ವೈದ್ಯರು ಸೇರಿ ಆಸ್ಪತ್ರೆಯ ಪ್ರಾಂಗಣದಲ್ಲಿ ಬೀದಿ ನಾಟಕದ ಮೂಲಕ ಜನರಲ್ಲಿ ತಂಬಾಕು, ಸಿಗರೇಟ್ ಸೇವನೆಯಿಂದಾಗುವ ಅಡ್ಡ ಪರಿಣಾಮ ಗಳು, ಜೀವ ಹಾನಿ ಕುರಿತು ಸಾಮಾನ್ಯ ಜನರಿಗೆ ಮನ ಮುಟ್ಟುವ ರೀತಿಯಲ್ಲಿ ನಾಟಕದ ಮೂಲಕ ಅರಿವು ಮೂಡಿಸಿದರು. ಕೊನೆಯಲ್ಲಿ ವಿಭಾಗದ ಡಾ. ಅಜಿತ್ ಈಟಿ ವಂದಿಸಿದರು.