ಮಣ್ಣಿಗೆ ನ್ಯಾನೋ ಕ್ಲೇ, ಮೊಟ್ಟೆಯ ಕ್ಯಾಲ್ಸಿಯಂ ಗುಳಿಗೆ

ಮಣ್ಣಿಗೆ ನ್ಯಾನೋ ಕ್ಲೇ, ಮೊಟ್ಟೆಯ ಕ್ಯಾಲ್ಸಿಯಂ ಗುಳಿಗೆ

ಬಿಐಇಟಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ 56 ಮಾದರಿಗಳ ಪ್ರದರ್ಶನ

ದಾವಣಗೆರೆ, ಮೇ 29 – ಮಣ್ಣಿನ ಫಲವತ್ತತೆ ಹೆಚ್ಚಿಸಲು ನ್ಯಾನೋ ಕ್ಲೇ ಬಳಕೆ, ಕೋಳಿ ಮೊಟ್ಟೆ ಚಿಪ್ಪಿನಿಂದ ಕ್ಯಾಲ್ಸಿಯಂ ಗುಳಿಗೆ, ಹೊಲಗಳ ಮೇಲೆ ಆಧುನಿಕ ನಿಗಾ… ಇವೆಲ್ಲ ಬಿ.ಐ.ಇ.ಟಿ. ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ರೂಪಿಸಿರುವ ಪ್ರಾಯೋಗಿಕ ಮಾದರಿಗಳು.

ನಗರದ ಬಿ.ಐ.ಇ.ಟಿ. ಕಾಲೇಜಿನಲ್ಲಿ `ನಿರ್ಮಾಣ 3.0′ ಯೋಜನೆಗಳ ಪ್ರಾತ್ಯಕ್ಷಿಕೆಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಹತ್ತು ಶಾಖೆಗಳ 56 ಮಾದರಿಗಳನ್ನು ಪ್ರದರ್ಶಿಸಲಾಗಿತ್ತು.

ಬರಡಾಗಿರುವ ಜಮೀನನ್ನು ಮತ್ತೆ ಫಲವತ್ತಾಗಿ ಮಾಡುವ ದ್ರವರೂಪದ ನ್ಯಾನೋ ಕ್ಲೇ ರೂಪಿಸಿದ್ದೇವೆ. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ ಹಾಗೂ ಇಳುವರಿಯೂ ಹೆಚ್ಚಾಗು ತ್ತದೆ ಎಂದು ಬಿಐಇಟಿ ಕಾಲೇಜಿನ ಉಪನ್ಯಾಸಕ ಹಾಗೂ ಯೋಜನೆಯ ಮಾರ್ಗದರ್ಶಕ ಡಾ. ಎ.ಎಸ್. ಶರಣ್ ತಿಳಿಸಿದ್ದಾರೆ.

ನಗರದ ರಂಗನಾಥ ಬಡಾವಣೆಯಲ್ಲಿನ ಮಣ್ಣಿನಲ್ಲಿ ನ್ಯಾನೋ ಕ್ಲೇಗೆ ಅಗತ್ಯವಾದ ಗುಣ ಇದ್ದದ್ದು ಕಂಡು ಬಂದಿತ್ತು. ಅದನ್ನು ಬಳಸಿಕೊಂಡಿದ್ದೇವೆ. ಮಣ್ಣಿನಿಂದಲೇ ಲಭ್ಯವಾಗುವ ಈ ನ್ಯಾನೋ ಕ್ಲೇ ಗೊಬ್ಬರ ಬಳಸುವುದರಿಂದ ಬರಡು ಭೂಮಿಯೂ ಫಲವತ್ತಾಗುತ್ತದೆ ಎಂದವರು ಹೇಳಿದ್ದಾರೆ. ಡಾ. ಜಿ. ಮಾನವೇಂದ್ರ ಅವರು ಯೋಜನೆಯ ಇನ್ನೊಬ್ಬ ಮಾರ್ಗದರ್ಶಕರಾಗಿದ್ದು, ವಿದ್ಯಾರ್ಥಿಗಳಾದ ವಿಜಯ್ ಕಟ್ಟಿ, ಎಸ್. ಧನುಶ್, ಕೆ.ಜಿ. ಪೃಥ್ವಿ ಹಾಗೂ ಎಂ. ಸುಮೇಧ್ ಅವರು ಯೋಜನೆಯಲ್ಲಿ ಭಾಗಿಯಾಗಿದ್ದಾರೆ.

ಡಾ. ಡಿ.ಜಿ. ಪ್ರವೀಣ್ ಅವರ ಮಾರ್ಗದರ್ಶನದಲ್ಲಿ ಬಿ. ಕಾವ್ಯ, ಕೆ.ಎಂ. ಶೃತಿ, ಶುಭಂ, ಬಿಂದು, ನಯನ, ಪವಿತ್ರ ಹಾಗೂ ಪೂಜಾ ಅವರು ಬ್ಯಾಡಗಿ ಮೆಣಸಿನಕಾಯಿಯಿಂದ ಸೂಪರ್ ಕ್ರಿಟಿಕಲ್ ಫ್ಲುಯಿಡ್ ರೂಪಿಸುವ ವಿಧಾನವನ್ನು ಪ್ರದರ್ಶಿಸಿದ್ದರು. ಈಗಾಗಲೇ ಮೆಣಸಿನ ಸಾರವನ್ನು ಹೊರ ತೆಗೆಯುವ ಹಲವು ವಿಧಗಳಿವೆ. ಗಾಢ ದ್ರವದ ರೂಪದಲ್ಲಿ ಸಾರವನ್ನು ತೆಗೆಯುವುದು ಕಡಿಮೆ ವೆಚ್ಚದ್ದು ಹಾಗೂ ಹೆಚ್ಚು ಉಪಯುಕ್ತ ಎಂದವರು ಪ್ರತಿಪಾದಿಸಿದ್ದಾರೆ.

ಕೆ.ಜೆ. ಶಶಿಕಲಾ ಅವರ ನೇತೃತ್ವದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮೊಟ್ಟೆ ಚಿಪ್ಪಿನಿಂದ ಕ್ಯಾಲ್ಸಿಯಂ ಗುಳಿಗೆಗಳನ್ನು ಕಡಿಮೆ ವೆಚ್ಚದಲ್ಲಿ ರೂಪಿಸಬಹುದು ಎಂಬ ಪ್ರಾತ್ಯಕ್ಷಿಕೆ ರೂಪಿಸಿದ್ದಾರೆ. ಇದರಿಂದ ಮೊಟ್ಟೆ ತ್ಯಾಜ್ಯದ ನಿವಾರಣೆಯಾಗುವ ಜೊತೆಗೆ ಪೌಷ್ಠಿಕಾಂಶದ ಮರು ಬಳಕೆಯಾಗುತ್ತದೆ. ಇದು  ಕಡಿಮೆ ವೆಚ್ಚದ್ದು ಎಂದವರು ಹೇಳಿದ್ದಾರೆ.

ಪ್ರಸಕ್ತ ಮೊಟ್ಟೆಯ ಚಿಪ್ಪಿನಿಂದ ಕ್ಯಾಲ್ಸಿಯಂ ಗುಳಿಗೆ ಮಾಡುವ ಪದ್ಧತಿ ಪ್ರಚಲಿತವಾಗಿಲ್ಲ. ಅತಿ ಕಡಿಮೆ ದರದಲ್ಲಿ ಮೊಟ್ಟೆ ಚಿಪ್ಪಿನಿಂದ ಕ್ಯಾಲ್ಸಿಯಂ ಗುಳಿಗೆ ತಯಾರಿಸಬಹುದು ಎಂದು ವಿದ್ಯಾರ್ಥಿಗಳಾದ ಬಿ.ಕೆ. ಪ್ರಜ್ವಲ್, ಪ್ರಜ್ವಲ್ ಪಾಟೀಲ್, ಅಮೃತ ವರ್ಷಿಣಿ, ಕೀರ್ತನ ತಿಳಿಸಿದ್ದಾರೆ.

ಡಾ. ಕೆ. ಗಣೇಶ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ನವೀನ್ ಕಲಾಲ್, ನವೀನ್ ರಾವಲ್, ಮಂಜುನಾಥ್ ಹಾಗೂ ಹಂಸವೇಣಿ ಅವರು ಹೊಲಗಳ ಮಾಹಿತಿ ಪಡೆಯುವ ಯಂತ್ರವನ್ನು ರೂಪಿಸಿದ್ದಾರೆ. ಮೊಬೈಲ್ ಇಲ್ಲವೇ ಇಂಟರ್‌ನೆಟ್‌ ಇಲ್ಲದೆಯೇ ಲೋರಾ ಎಂಬ ತಂತ್ರಜ್ಞಾನ ಆಧರಿತ ಸಂವಹನ ಯಂತ್ರ ರೂಪಿಸಿರುವುದಾಗಿ ಇವರು ತಿಳಿಸಿದ್ದಾರೆ.

ಐದು ಕಿಲೋಮೀಟರ್ ದೂರದಲ್ಲಿದ್ದರೂ ರೈತರಿಗೆ ಬೆಳೆಗಳ ಸ್ಥಿತಿಗತಿ, ತೇವಾಂಶ, ಉಷ್ಣಾಂಶ, ನೀರಿನ ಅಗತ್ಯ ಮುಂತಾದ ಮಾಹಿತಿ ಸಿಗುತ್ತದೆ. 4 ಸಾವಿರ ರೂ. ವೆಚ್ಚದಲ್ಲಿ ಮಾದರಿ ಉಪಕರಣ ರೂಪಿಸಿರುವುದಾಗಿ ಅವರು ಹೇಳಿದ್ದಾರೆ.

ಕಿತ್ತಳೆ ಸಿಪ್ಪೆಯಿಂದ ಪೆಕ್ಟಿನ್ ಉತ್ಪಾದನೆ, ಹಣ್ಣು ಮಾಗಿರುವುದನ್ನು ಪತ್ತೆ ಮಾಡುವ ಉಪಕರಣ, ಆರೋಗ್ಯ ಸೇವೆಗಳ ದಾಖಲೆಗಳ ನಿರ್ವಹಣೆಗೆ ಬ್ಲಾಕ್‌ಚೈನ್‌ ಬಳಕೆ, ಜಾನುವಾರುಗಳ ಪತ್ತೆ ಉಪಕರಣ… ಹೀಗೆ ಹತ್ತು ಹಲವು ವಲಯಗಳಿಗೆ ನೆರವಾಗುವ ಪ್ರಾತ್ಯಕ್ಷಿಕೆಗಳನ್ನು ಇಂಜಿನಿಯರಿಂಗ್ ವಿದ್ಯಾರ್ಥಿಗಳು ರೂಪಿಸಿದ್ದರು.

error: Content is protected !!