ಶೈಕ್ಷಣಿಕ ವರ್ಷ ಆರಂಭ ಶಾಲಾರಂಭಕ್ಕೆ ಸಕಲ ಸಿದ್ಧತೆ

ಶೈಕ್ಷಣಿಕ ವರ್ಷ ಆರಂಭ ಶಾಲಾರಂಭಕ್ಕೆ ಸಕಲ ಸಿದ್ಧತೆ

ಸೋಮವಾರ ದಾವಣಗೆರೆ ಸರ್ಕಾರಿ ಶಾಲೆಯಲ್ಲಿ ಬಿಸಿ ಊಟದ ಅಡುಗೆ ಕೋಣೆ ಸ್ವಚ್ಛಗೊಳಿಸುತ್ತಿರುವ ಸಿಬ್ಬಂದಿ

ದಾವಣಗೆರೆ,  ಮೇ 29- 2023-24ನೇ ಸಾಲಿನ ಶೈಕ್ಷಣಿಕ ವರ್ಷ ಇಂದಿನಿಂದ ಆರಂಭಗೊಂಡಿದ್ದು, 31ರ ಬುಧವಾರದಿಂದ ಶಾಲೆಗಳು ಅಧಿಕೃತವಾಗಿ ಆರಂಭವಾಗಲಿವೆ.

ಶಾಲಾ ಆರಂಭಕ್ಕೆ ಸ್ವಚ್ಛತಾ ಕಾರ್ಯಗಳು ಬರದಿಂದ ಸಾಗಿವೆ. ಬಹುತೇಕ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಬುಧವಾರ ತರಗತಿಗಳ ಕೊಠಡಿ, ಅಡುಗೆ ಕೊಠಡಿ, ಡೆಸ್ಕ್‌ಗಳನ್ನು ಸ್ವಚ್ಛಗೊಳಿಸಲಾಗುತ್ತಿತ್ತು.  

ಶೈಕ್ಷಣಿಕ ವರ್ಷದ ಕಾರ್ಯಕ್ರಮ ಪಟ್ಟಿ ಸಿದ್ಧಗೊಂಡಿದ್ದು, ಶಾಲೆಗಳಲ್ಲಿ ಶಿಕ್ಷಕರ ಸಭೆಗಳು ನಡೆದವು. ಏತನ್ಮಧ್ಯೆಯೂ  ವಿದ್ಯಾರ್ಥಿಗಳು ಶಾಲೆಗಳಿಗೆ ಆಗಮಿಸಿದ್ದರು. ಒಂದಿಷ್ಟು ಹರಟೆ, ಆಟದ ಜೊತೆ ಪಾಠವೂ ನಡೆಯಿತು.

ಸರ್ಕಾರಿ ಬಾಲಕರ ಪ್ರೌಢಶಾಲೆಯ ಉಪ ಪ್ರಾಚಾರ್ಯ ಜೆ.ಎಸ್. ಪರಮೇಶ್ವರಪ್ಪ ಪತ್ರಿಕೆಯೊಂದಿಗೆ ಮಾತನಾಡುತ್ತಾ,  ಶಾಲೆಯಲ್ಲಿ 174 ಮಕ್ಕಳಿದ್ದರು, ಅದರಲ್ಲಿ 51 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದಾರೆ. ನೂತನ ವಿದ್ಯಾರ್ಥಿಗಳಿಗೆ ಪ್ರವೇಶ ಆರಂಭವಾಗಿದೆ ಎಂದು ಹೇಳಿದರು.

31ರಂದು ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ ಸಂಭ್ರಮದಿಂದ ಆರಂಭಿಸಲಾಗುವುದು. ಎಸ್‌ಡಿಎಂಸಿ ಸದಸ್ಯರನ್ನು ಆಹ್ವಾನಿಸಿದ್ದೇವೆ. ಅಂದು ಪಠ್ಯ ಪುಸ್ತಕ ಹಾಗೂ ಬಟ್ಟೆಗಳನ್ನು ವಿತರಿಸಲಾಗುವುದು. ವಿದ್ಯಾರ್ಥಿಗಳಿಗೆ ಸಿಹಿ ಊಟ ಮಾಡಿ, ಪ್ರೀತಿಯಿಂದ ಸ್ವಾಗತಿಸಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಶ್ರೀಮತಿ ಸುಂದರಮ್ಮ ರಾಜನಹಳ್ಳಿ ಲಕ್ಷ್ಮಣಶೆಟ್ಟಿ ಮಹಾತ್ಮ ವಿದ್ಯಾಶಾಲೆಯಲ್ಲಿಯೂ ತರಗತಿಗಳಿಗೆ 30 ಮಕ್ಕಳು ಆಗಮಿಸಿದ್ದರು. ಮುಖ್ಯೋಪಾಧ್ಯಾಯರಾದ ಶ್ರೀಮತಿ ಸಾಕಮ್ಮ ಮಾತನಾಡಿ, ಇಂದು ಎಲ್ಲಾ ಕೊಠಡಿಗಳನ್ನು ಸ್ವಚ್ಛಗೊಳಿಸಿದ್ದೇವೆ. ಇಂದು ಬಂದಿರುವ ಮಕ್ಕಳಿಗೆ ನೋಟ್ ಪುಸ್ತಕ ನೀಡಿದ್ದೇವೆ. ಬುಧವಾರ ಆಗಮಿಸಿರುವ ಮಕ್ಕಳಿಗೆ ಪಠ್ಯ ಪುಸ್ತಕ ನೀಡಿ, ಸಿಹಿ ಕೊಡುವ ಮೂಲಕ ಸ್ವಾಗತಕ್ಕೆ  ಸಿದ್ಧವಾಗಿದ್ದೇವೆ ಎಂದರು.

ಶಾಲೆಯನ್ನು ತಳಿರು, ತೋರಣಗಳಿಂದ ಸಿಂಗರಿಸುವ ಉದ್ದೇಶವಿದೆ ಎಂದ ಅವರು, ಜೂನ್ 15ರವರೆಗೆ ನೋಂದಣಿಗೆ ಅವಕಾಶವಿದ್ದು, ನೋಂದಣಿ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದರು.

ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲೂ ಪಠ್ಯ ಪುಸ್ತಕದ ಜೋಡಣಾ ಕಾರ್ಯ ನಡೆಯುತ್ತಿತ್ತು. ಉಪ ಪ್ರಾಂಶುಪಾಲ ಎ.ಆರ್. ಮಂಜಪ್ಪ ಅವರು, ಶಿಕ್ಷಕರ ಸಭೆ ನಡೆಸಿ, ಶಾಲಾರಂಭದ ಸಿದ್ಧತೆಗಳ ಬಗ್ಗೆ ಚರ್ಚಿಸಿದರು.

ಈ ವರ್ಷ ಪುಸ್ತಕ ಹಾಗೂ ಬಟ್ಟೆ ಶಾಲಾರಂಭಕ್ಕೂ ಮುನ್ನವೇ ಬಂದಿವೆ. ಪೋಷಕರು ಹಾಗೂ ಎಸ್‌ಡಿಎಂಸಿ ಸದಸ್ಯರಿಗೆ ಮಾಹಿತಿ ನೀಡಿದ್ದೇವೆ. 31ರಂದು ಶಾಲೆಯನ್ನು ಸಿಂಗರಿಸಿ, ಕಾರ್ಯಕ್ರಮ ನಡೆಸಿ, ಶಾಲಾರಂಭಕ್ಕೆ ಚಾಲನೆ ನೀಡಲಾಗುವುದು.  ಇಂದು 50 ವಿದ್ಯಾರ್ಥಿನಿಯರು ಆಗಮಿಸಿದ್ದಾಗಿ ಅವರು ಹೇಳಿದರು.

error: Content is protected !!