ಮೇಷ (ಅಶ್ವಿನಿ, ಭರಣಿ, ಕೃತ್ತಿಕಾ)
(ಚೂ.ಚೇ.ಚೋ.ಲ.ಲಿ.ಉ.ಲೇ.ಲೊ.ಅ.)
ಯಾವುದೇ ವಿಷಯದ ಸಾಧಕ ಬಾಧಕಗಳನ್ನು ಅರಿಯದೇ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಹೋಗಬೇಡಿ. ಕಷ್ಟಕಾಲದಲ್ಲಿರುವವರಿಗೆ ಸ್ನೇಹಿತರ ಸಹಾಯಹಸ್ತ ದೊರೆಯಲಿದೆ. ಹೊಸದಾಗಿ ಕೆಲಸಕ್ಕೆ ಸೇರಿರುವ ಯುವಕರು ವೃತ್ತಿಯ ಬಗ್ಗೆ ಗಾಂಭೀರ್ಯವನ್ನು ಹೊಂದುವುದು ಮುಖ್ಯ.ಆದಾಯದ ಮೂಲದಲ್ಲಿ ಹೆಚ್ಚಳ ಕ್ರಮೇಣ ಕಂಡುಬರಲಿದೆ. ಹಣ್ಣಿನ ವ್ಯಾಪಾರಿಗಳಿಗೆ ಭರ್ಜರಿ ವಹಿವಾಟಿ ನೊಂದಿಗೆ, ಹೆಚ್ಚಿನ ಲಾಭವಾಗಲಿದೆ. ಆಸ್ತಿಮಾರಾಟದ ವಿಷಯ ಮತ್ತೆ ಮುನ್ನೆಲೆಗೆ ಬರಲಿದೆ. ಗುರುಗಳ ಸೇವೆಮಾಡಿ. ಭಾನು-ಸೋಮ-ಮಂಗಳ-ಶುಭದಿನಗಳು.
ವೃಷಭ (ಕೃತ್ತಿಕಾ, 2,3,4, ರೋಹಿಣಿ, ಮೃಗ 1,2)
(ಇ.ಉ.ಎ.ಒ.ವ.ವಿ.ವು.ವೆ.ವೋ)
ಅರಿವಿಲ್ಲದೇ ನಂಬಿ ಹೂಡಿಕೆ ಮಾಡಿದ ನಿಮಗೆ ತಪ್ಪಿನ ಅರಿವಾಗಲಿದೆ. ಪರಿಹಾರಕ್ಕೆ ಸೂಕ್ತ ಅನುಭವಿಗಳ ಸಲಹೆ ಪಡೆದರೆ ನಷ್ಟದ ಪ್ರಮಾಣ ಕಡಿಮೆಯಾದೀತು. ವಸ್ತುಗಳ ಗುಣಮಟ್ಟವನ್ನರಿಯದೇ ಖರೀದಿಸಬೇಡಿ. ಧನಾದಾಯವು ನಿಮ್ಮ ನಿರೀಕ್ಷೆ ಮಟ್ಟದಲ್ಲಿರದೇ ಹೋದರೂ, ಅದರ ಮಟ್ಟಕ್ಕೆ ಬರಲಿದೆ. ಮಹಿಳೆಯರು ಮದುವೆ ಮೊದಲಾದ ಸಾರ್ವತ್ರಿಕ ಕಾರ್ಯಕ್ರಮದಲ್ಲಿ ವಡವೆ ವಸ್ತುಗಳನ್ನು ಕಳೆದುಕೊಳ್ಳುವ ಸಂಭವಿದೆ.ಯಂತ್ರೋಪಕರಣಗಳ ವಹಿವಾಟು ಹೆಚ್ಚಲಿದೆ. ಬುಧ-ಶುಕ್ರ-ಶನಿ ಶುಭದಿನಗಳು.
ಮಿಥುನ (3,4, ಆರಿದ್ರಾ, ಪುನರ್ವಸು 1,2,3
(ಕ.ಕಿ.ಕು.ಘ, ಔ, ಚ.ಕೆ.ಕೋ.ಹ.)
ಕಂಡಕಂಡವರ ಮುಂದೆ ಕಷ್ಟಗಳನ್ನು ಹೇಳಿಕೊಳ್ಳುವುದರಿಂದ ಸಹಾಯ ದೊರೆಯುತ್ತದೆ ಎಂಬ ಭ್ರಮೆಯಿಂದ ಮೊದಲು ಹೊರಬನ್ನಿ. ಇಲ್ಲವಾದಲ್ಲಿ ನಿಮ್ಮ ಮಾನ ಹರಾಜಾಗುವುದರಲ್ಲಿ ಸಂಶಯವಿಲ್ಲ. ಆರಕ್ಷಕ ಸಿಬ್ಬಂದಿಗೆ ಮೇಲಾಧಿಕಾರಿಗಳಿಂದ ಒತ್ತಡವುಂಟಾಗಲಿದೆ. ಗುಡಿಕೈಗಾರಿಕಾ ವಸ್ತುಗಳಿಗೆ ಬೇಡಿಕೆ ಹೆಚ್ಚಲಿದೆ. ಅವಿವಾಹಿತರಿಗೆ ಕಂಕಣಬಲ ಈ ವಾರ ಕೂಡಿಬರಲಿದೆ. ಆದಾಯದ ಹೆಚ್ಚಳ, ನಿಮ್ಮ ನಿರೀಕ್ಷೆಯ ಮಟ್ಟವನ್ನು ಮುಟ್ಟದೇ ಹೋಗಬಹುದು. ಅನಿರೀಕ್ಷಿತ ಆಪತ್ತುಗಳು ಎದುರಾಗುವ ಸಂಭವವಿದೆ. ಮಂಗಳ-ಬುಧ-ಗುರು-ಶುಭದಿನಗಳು.
ಕರ್ಕಾಟಕ (ಪುನ 4, ಪುಷ್ಯ, ಆಶ್ಲೇಷ)
(ಹಿ.ಹು.ಹೆ.ಹೂ.ಡ.ಡಿ.ಡು.ಡೆ.ಡೋ)
ಕೆಲಸ ಕಾರ್ಯಗಳ ಒತ್ತಡದ ನೆಪದಲ್ಲಿ ಮಕ್ಕಳ ವಿದ್ಯಾಭ್ಯಾಸವನ್ನು ಗಮನಿಸದೇ ಹೋದಲ್ಲಿ ಮುಂದೆ ತೊಂದರೆಯನ್ನು ಅನುಭವಿಸಬೇಕಾದಿತು. ಕೈಗಾರಿಕೋದ್ಯಮಿಗಳು ತಮ್ಮ ಕಾರ್ಮಿಕರ ಸಮಸ್ಯೆಗಳನ್ನು ತುಸು ತಾಳ್ಮೆಯಿಂದ ಕೇಳುವುದು ಉತ್ತಮ. ಬದಲಾದ ಆಹಾರ ಶೈಲಿಯಿಂದಾಗಿ, ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಬಹುದು. ಇದು ಅಲಕ್ಷಿಸಬಹುದಾದ ವಿಷಯವಲ್ಲ ಎಂಬುದು ನೆನ ಪಿರಲಿ. ಕಳೆದುಹೋಗಿರುವ ಅಥವಾ ಸ್ಥಳಾಂತರವಾಗಿರುವ, ಅಮೂಲ್ಯ ದಾಖಲೆಗಳ ಬಗ್ಗೆ ಭಾರೀ ಚರ್ಚೆಯಾಗಲಿದೆ. ಭಾನು-ಸೋಮ-ಗುರು-ಶುಭದಿನಗಳು.
ಸಿಂಹ ( ಮಘ, ಪುಬ್ಬ, ಉತ್ತರ 1)
(ಮ.ಮಿ.ಮು.ಮೋ.ವೆ.ಟ.ಟಿ.ಟು.ಟೆ)
ಕುಟುಂಬದಲ್ಲಿ ಸಣ್ಣ-ಪುಟ್ಟವಿವಾದಗಳು ಮೇಲಿಂದಮೇಲೆ ಬರುವುದರಿಂದ ಮಾತುಕತೆಯಿಂದ ಬಗೆಹರಿಸಿಕೊಳ್ಳಿ, ವಿದ್ಯಾವಂತರಾದ ಯುವಕರು ಇಲಾಖಾ ಪರಿಕ್ಷೆಗಳನ್ನು ತೆಗೆದುಕೊಳ್ಳಲು, ಇದು ಸರಿಯಾದ ಸಮಯ. ಯುವಕರಿಗೆ ಆಧ್ಯಾತ್ಮಿಕ ವಿಷಯದಲ್ಲಿ ಆಸಕ್ತಿ ಮೂಡಲಿದ್ದು, ಮನೆಯಲ್ಲಿರುವ ಹಿರಿಯರಿಂದಲೇ ಉತ್ತಮ ಮಾರ್ಗದರ್ಶನ ದೊರೆಯಲಿದೆ. ಮಂದಗತಿಯಲ್ಲಿರುವ ಆದಾಯವನ್ನು ನಂಬಿ, ಯಾವುದೇ ಖರೀದಿಗೆ ಕೈಹಾಕಬೇಡಿ. ಗೆಳೆಯರೊಂದಿಗೆ ನಡೆಯುತ್ತಿರುವ ವ್ಯವಹಾರ ಲಾಭದಾಯಕವಾಗಲಿದೆ, ಭಾನು-ಗುರು-ಶುಕ್ರ-ಶುಭದಿನಗಳು.
ಕನ್ಯಾ (ಉತ್ತರಾ 2,3,4, ಹಸ್ತಾ, ಚಿತ್ತಾ 1,2)
(ಟೋ.ಪ.ಪಿ.ಪು.ಷ.ಣ.ಠ.ಪೆ.ಪೋ)
ದೊಡ್ಡ ಮಟ್ಟದಲ್ಲಿ ಸರಕುಗಳ ಮಾರಾಟಗಾರರಿಗೆ ಮಧ್ಯವರ್ತಿಗಗಳಿಂದ ಮೋಸ ಹೋಗುವ ಸಂಭವವಿದೆ. ಎಂದೋ ಆಡಿದ ಮಾತುಗಳನ್ನು ಪದೇಪದೇ ಕೆಣಕುವುದರಿಂದ ಮನೆಯಲ್ಲಿ ನೆಮ್ಮದಿ ಹಾಳಾಗಬಹುದು. ಮನೆ ಪಾಠಮಾಡುವ ಶಿಕ್ಷಕರಿಗೆ ಶಿಷ್ಯರ ಸಂಖ್ಯೆ ಹೆಚ್ಚಲಿದೆ. ಕಾಲಾನುಗುಣವಾಗಿ ವ್ಯವಹಾರದ ಶೈಲಿಯನ್ನು ಬದಲಾಯಿಸಿಕೊಳ್ಳುವುದು ಮೇಲು. ಅನಾವಶ್ಯಕ ವಸ್ತುಗಳ ಕೊಳ್ಳುವಿಕೆಯಿಂದಾಗಿ ಹೆಚ್ಚಿನ ವೆಚ್ಚವನ್ನು ವಿಧಿಯಿಲ್ಲದೇ ವ್ಯಯಿಸಬೇಕಾದೀತು. ಕೂಲಿ ಕಾರ್ಮಿಕರಿಗೆ ಉತ್ತಮದಿನಗಳು. ಮಂಗಳ-ಬುಧ-ಶುಕ್ರ-ಶುಭದಿನಗಳು.
ತುಲಾ (ಚಿತ್ತಾ 3,4, ಸ್ವಾತಿ, ವಿಶಾಖ 1,2,3)
(ರ.ರಿ.ರು.ರೆ.ರೊ.ತ.ತಿ.ತು.ತೆ.)
ಸರ್ಕಾರಿ ನೌಕರರು ಅಪೇಕ್ಷಿತ ಸ್ಥಳಗಳಿಗೆ ವರ್ಗಾವಣೆ ಹೊಂದಲು ರಾಜಕಾರಣಿಗಳ ಮರ್ಜಿಹಿಡಿಯದೇ ವಿಧಿಯಿಲ್ಲ. ಕಳೆದವಾರ ಉತ್ಸಾಹದಿಂದಲೇ ಕೆಲಸಕಾರ್ಯಗಳಲ್ಲಿ ತೊಡಗಿಕೊಂಡಿದ್ದ ನಿಮಗೆ, ಆಲಸ್ಯ ಈ ವಾರ ಬಾಧಿಸಲಿದೆ.ದಿನಸಿ ವ್ಯಾಪಾರಿಗಳು ಗ್ರಾಹಕರೊಂದಿಗೆ ಸೌಹಾರ್ದತೆಯಿಂದ ವರ್ತಿಸುವುದು ಮೇಲು. ಹಣಕಾಸಿನ ವಿಚಾರದಲ್ಲಿ ಕಠಿಣ ನಿಲುವು ತೆಗೆದುಕೊಳ್ಳದೇ ಹೋದಲ್ಲಿ.ಉಳಿತಾಯದ ಗಂಟು ಕರಗಬಹುದು. ಕಾರಣಾಂತರದಿಂದ ನಿಂತುಹೋಗಿದ್ದ ಮಂಗಳ ಕಾರ್ಯವನ್ನು ಆದಷ್ಟು ಬೇಗಮಾಡಿ ಮುಗಿಸುವುದು ಮೇಲು. ಸೋಮ-ಶುಕ್ರ-ಶನಿ-ಶುಭದಿನಗಳು.
ವೃಶ್ಚಿಕ (ವಿಶಾಖ 4, ಅನೂ, ಜೇಷ್ಠ)
(ತೊ.ನ.ನಿ.ನು.ನೆ.ನೋ.ಯ.ಯಿ.ಯು.)
ಬಹಳ ದಿನಗಳಿಂದ ಜನರ ಸಂಪರ್ಕದಲ್ಲಿರುವ ಅಥವಾ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡವರಿಗೆ ರಾಜಕೀಯ ರಂಗವನ್ನು ಸೇರುವುದಕ್ಕೆ ಉತ್ತಮ ವೇದಿಕೆಯೊಂದು ದೊರೆಯಲಿದೆ. ನಿರುದ್ಯೋಗಿ ಯುವಕರಿಗೆ ಪ್ರಭಾವೀ ವ್ಯಕ್ತಿಗಳಿಂದ ನೌಕರಿ ದೊರೆಯಲಿದೆ. ಮತ್ತೊಬ್ಬರ ಮೇಲಿನ ಸ್ಪರ್ಧೆಯಿಂದಾಗಿ, ಕೆಲಸಕಾರ್ಯಗಳಲ್ಲಿ ಒತ್ತಡವನ್ನು ತಂದುಕೊಳ್ಳುವುದು ಮೂರ್ಖತನದ ಮಾತಾದೀತು. ನಿಮ್ಮ ಆರ್ಥಿಕ ಪರಿಸ್ಥಿತಿಯೇ ಗಂಭಿರವಾಗಿರುವಾಗ ಮತ್ತೊಬ್ಬರ ಬಗ್ಗೆ ಚಿಂತಿಸುವುದು ಬೇಡ. ಭಾನು-ಮಂಗಳ-ಗುರು-ಶುಭದಿನಗಳು.
ಧನಸ್ಸು (ಮೂಲ, ಪೂರ್ವಾಷಾಢ, ಉತ್ತರಾಷಾಢ)
(ಯೆ.ಯೋ. ಬ.ಬಿ.ಬು.ಧ.ಫ.ಡ.ಬೆ.)
ಪ್ರಸಿದ್ಧ ಬರಹಗಾರರ ಕೃತಿಗಳಿಗೆ ಬೇಡಿಕೆ ಹೆಚ್ಚಿದರೂ ಅವರಿಗೆ ಸಿಗಲಿರುವ ಸಂಭವನೆ ಮಾತ್ರ ಅಷ್ಟಕ್ಕಷ್ಟೇ. ಅಧ್ಯಯನದ ವಿಚಾರದಲ್ಲಿ ಉದಾಸೀನರಾಗಿದ್ದ ವಿದ್ಯಾರ್ಥಿಗಳು, ಅಧ್ಯಯನದ ವಿಷಯದಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ತೊಡಗಿಕೊಳ್ಳಲಿದ್ದಾರೆ. ಕೌಟುಂಬಿಕ ಕಲಹವೊಂದು ಗಂಭೀರ ಸ್ವರೂಪವನ್ನು ಪಡೆದುಕೊಳ್ಳುವ ಮೊದಲೇ ಚಿವುಟಿಹಾಕುವುದು ಮೇಲು. ಸಿದ್ಧಾಹಾರ ಅಥವಾ ಹೋಟೆಲ್ ಉದ್ಯಮ ಉತ್ತಮ ಮಟ್ಟದಲ್ಲಿ ಲಾಭತರಲಿದೆ. ಸಾಧು ಸಂತರ ದರ್ಶನ ಭಾಗ್ಯ ನಿಮ್ಮದಾಗಲಿದೆ. ಸೋಮ-ಬುಧ-ಗುರು-ಶುಭದಿನಗಳು.
ಮಕರ (ಉತ್ತರಾಷಾಢ 2,3,4, ಶ್ರವಣ, ಧನಿಷ್ಠಾ 1,2)
(ಜೊ.ಜ.ಜಿ.ಜೆ.ಶಿ.ಶು.ಶೇ.ಶೋ.ಗ.ಗಿ)
ಪ್ರೇಮಿಗಳು ವೃಥಾ ತಿರುಗಾಟದಲ್ಲೇ ಕಾಲಕಳೆಯುವುದೇ ಬದುಕಿನ ಬಗ್ಗೆ, ಒಂದು ಗಟ್ಟಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಇಲ್ಲವಾದಲ್ಲಿ ಉಭಯ ಕುಟುಂಬದವರಿಗೂ, ಇದು ತಲೆನೋವಾಗಿ ಪರಿಣಮಿಸಬಹುದು.ವಿದೇಶದಲ್ಲಿರು ವವರಿಗೆ ಅಲ್ಲಿಯೇ ಹೆಚ್ಚಿನ ವಿದ್ಯಾಭ್ಯಾಸವವನ್ನು ಮುಂದುವರೆಸಲು ಉತ್ತಮ ಅವಕಾಶ ದೊರೆಯಲಿದೆ. ಸಂತಾನಾಪೇಕ್ಷಿಗಳಿಗೆ ಇಷ್ಟರಲ್ಲೇ ಶುಭ ಸಮಾಚಾರ ವೊಂದು ಕೇಳಿಬರಲಿದೆ. ಕೂಡಿಟ್ಟ ಹಣವನ್ನು ವಂಚಕರು ಅಪಹರಿಸಬಹುದು. ದೂರದೂರುಗಳಿಗೆ ಪಯಣಿಸಬೇಡಿ. ಭಾನು-ಶುಕ್ರ-ಶನಿ-ಶುಭದಿನಗಳು.
ಕುಂಭ (ಧನಿಷ್ಠಾ, ಶತಭಿಷಾ, ಪೂರ್ವಾಭಾದ್ರ 1,2,3)
(ಗು.ಗೆ.ಗೊ.ಸ.ಸಿ.ಸು.ಸೆ.ಸೋ.ದ)
ವ್ಯವಹಾರದಲ್ಲಿ ಸವಾಲುಗಳನ್ನು ಪಂಥಾಹ್ವಾನವಾಗಿ ಸ್ವೀಕರಿಸುವ ನಿಮಗೆ, ಕೆಲವೊಮ್ಮೆ ಅಡ್ಡಿ ಆತಂಕಗಳೂ ಎದುರಾಗಬಹುದು. ಬದುಕಿನ ದಾರಿಯಲ್ಲಿ ಸಾಗಬೇಕಾಗಿರುವ ಯುವಕರು ಮೊದಲು ನೌಕರಿಯೊಂದನ್ನು ಹಿಡಿಯುವುದು ಲೇಸು. ಶಸ್ತ್ರಚಿಕಿತ್ಸಾ ವೈದ್ಯರಿಗೆ ಬೇಡಿಕೆ ಹೆಚ್ಚಲಿದೆ. ಸಗಟು ಮಾರಾಟ ಕ್ಷೇತ್ರವನ್ನು ವಿಸ್ತರಿಸಲು ಇದು ಸಕಾಲ. ಹಣಕಾಸಿನ ಹರಿವು ಉತ್ತಮವಾಗಿಯೇ ಇರುವುದರಿಂದ ದೈನಂದಿನ ಬದುಕಿಗೇನೂ ಚಿಂತೆಯಿಲ್ಲ. ಕೆಲವು ವಿಷಯಗಳಲ್ಲಿ ಹಿರಿಯರ ಮಾರ್ಗದರ್ಶನ ಪಡೆಯುವುದು ಮೇಲು. ಸೋಮ-ಗುರು-ಶನಿ-ಶುಭದಿನಗಳು.
ಮೀನ (ಪೂರ್ವಾಭಾದ್ರ 4, ಉತ್ತರಾಭಾದ್ರ, ರೇವತಿ)
(ದಿ.ದು.ಖ.ಝ.ಥ.ದೆ.ದೋ.ಖ.ಚ.ಚಿ.)
ಕೆಲಸ ಕಾರ್ಯಗಳ ಒತ್ತಡದಿಂದಾಗಿ ಕೌಟುಂಬಿಕ ವಿಷಯಗಳನ್ನು ಅಲಕ್ಷಿಸುವುದು ಅಷ್ಟು ಉಚಿತವಲ್ಲ. ನಿವೃತ್ತಿಯಂಚಿನಲ್ಲಿರುವವರು ತಮ್ಮ ಗಳಿಕೆಯನ್ನು ಸೂಕ್ತ ರೀತಿಯಲ್ಲಿ ಹೂಡಿಕೆ ಮಾಡುವುದು ಉತ್ತ. ಕಾರ್ಯಾಲಯದಲ್ಲಿ ಮನಸ್ಸಿಗೆ ಬೇಸರತರಿಸುವ ದುರ್ಘಟನೆಯೊಂದು ನಡೆಯಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಹೆಚ್ಚು ಬಂಡವಾಳ ಹಾಕಲು ಇದು ಸರಿಯಾದ ಸಮಯವಲ್ಲ. ಮನೆಯಲ್ಲಿ ಹಿರಿಯರಾಡುವ ಮಾತುಗಳು ಅಥವಾ ಕೊಡುವ ಸಲಹೆಗಳು ನಿಮ್ಮ ಅನೇಕ ಸಮಸ್ಯೆಗಳನ್ನು ಪರಿಹರಿಸಬಲ್ಲದು. ಸಾಕುಪ್ರಾಣಿಗಳ ಬಗ್ಗೆ ಎಚ್ಚರದಿಂದಿರಿ. ಭಾನು-ಬುಧ-ಗುರು-ಶುಭದಿನಗಳು.
ವಿಶೇಷ ದಿನಗಳು : ದಿನಾಂಕ:3.6.2023 ನೇ ಶನಿವಾರ, ವಟಸಾವಿತ್ರಿ ಹುಣ್ಣಿಮೆ. ಶ್ರೀಪಾದರಾಜರ ಆರಾಧನೆ (ಮುಳಬಾಗಿಲು).
ಜಯತೀರ್ಥಾಚಾರ್ ವಡೇರ್
ದಾವಣಗೆರೆ.
[email protected]