ಜೊಂಡಿನ ಹುಲ್ಲುಗಾವಲಾಗುತ್ತಿರುವ ಕುಂದುವಾಡ ಕೆರೆ

ಜೊಂಡಿನ ಹುಲ್ಲುಗಾವಲಾಗುತ್ತಿರುವ ಕುಂದುವಾಡ ಕೆರೆ

ಮಾನ್ಯರೇ,

ದಾವಣಗೆರೆ ಸ್ಮಾರ್ಟ್‌ಸಿಟಿಯ ಕಾರ್ಯಗಳು ಏನೆಂದರೆ ರಸ್ತೆ, ಚರಂಡಿ, ಪುಟ್‌ಪಾತ್‌ ನಿರ್ಮಿಸುವುದು, ನಂತರ ಜಲಸಿರಿ ಎಂದು ರಸ್ತೆ ಅಗೆದು ಗುಂಡಿಗಳನ್ನು ನಿರ್ಮಿಸುವುದು ಎಂದು ಈವರೆಗೂ ತಪ್ಪು ತಿಳಿದುಕೊಂಡಿದ್ದೆವು. ಆದರೆ ಇದನ್ನು ಸುಳ್ಳು ಮಾಡುವಂತೆ ಸ್ಮಾರ್ಟ್‌ಸಿಟಿಯವರು ಜೊಂಡಿನ ಹುಲ್ಲುಗಾವಲು ಬೆಳೆಸುತ್ತಿರುವುದು. ಅದು 15 ಕೋಟಿ ಅಂದಾಜು ವೆಚ್ಚದಲ್ಲಿ ಅದು ಎಲ್ಲಿದೆ ಎಂದು ಗೂಗಲ್‌ ಸರ್ಚ್ ಮಾಡಲು ಹೋಗದಿರಿ, ಅದನ್ನು ಗೂಗಲ್‌ನಲ್ಲಿ ಇನ್ನು ಅಪ್ಲೋಡ್‌ ಮಾಡಿಲ್ಲ. ಹಾಗಾದರೆ ಇದು ಎಲ್ಲಿದೆ ಎಂದು ತಲೆ ಕೆರೆದುಕೊಳ್ಳಬೇಡಿ. ಈ ಹುಲ್ಲುಗಾವಲು ಇರುವುದು ಕುಂದುವಾಡ ಕೆರೆಯಲ್ಲಿ, ಈ ಕೆರೆಯಲ್ಲಿ ಸುಮಾರು 10 ರಿಂದ 15 ಅಡಿ ಎತ್ತರದಲ್ಲಿ ಜೊಂಡು ಬೆಳೆದು ಪೂರ್ಣ ಕೆರೆಯನ್ನು ಆಕ್ರಮಿಸಿಕೊಳ್ಳುವ ಹಂತದಲ್ಲಿದೆ. ಇಲ್ಲಿ ಸಂಗ್ರಹವಾಗಿರುವ ಅಲ್ಪ ಪ್ರಮಾಣದ ನೀರೂ ಸಹ ಪಾಚಿಗಟ್ಟಿ ತೇಲುತ್ತಿದೆ. ಇದು ಸ್ಮಾರ್ಟ್‌ಸಿಟಿಯವರಿಗೆ ಕಾಣುತ್ತಿಲ್ಲವೇ ಅಥವಾ ಜಾಣ ಕುರುಡೇ?

ಕೆರೆೇಯ ಪುನರುಜ್ಜೀವನಗೊಳಿಸುವ ಯೋಜನಾ ನಕ್ಷೆಯನ್ನು ಯಾರಿಗೂ ತೋರಿಸದಂತೆ ಕಾರ್ಯ ಪ್ರಾರಂಭಿಸಿದ್ದು, ಮೊದಲ ಹಂತದಲ್ಲಿ ಹೂಳೆತ್ತಲು ಶುರು ಹಚ್ಚಿಕೊಂಡರು. ನಂತರ ಕೆರೆಯ ಇಕ್ಕೆಲಗಳಲ್ಲಿದ್ದ ಮರಗಳ ಹನನ ಕಾರ್ಯದೊಡನೆ ನಗರದ ಸಾರ್ವಜನಿಕರಿಂದ ದೇಣಿಗೆ ಪಡೆದು ನಿರ್ಮಿಸಿದ್ದ ಬೆಂಚುಗಳನ್ನು ಕೆರೆ ಮಧ್ಯ ಭಾಗದಲ್ಲಿನ ಮಂಟಪಕ್ಕೆ ತಳ್ಳಿದರು. ಈಗ ಅವು ಒಂದು ಸುಸ್ಥಿತಿಯಲ್ಲಿ ಇಲ್ಲ. ಸೈಕಲ್‌ ಪಾತ್‌ಗಾಗಿ ಕೆರೆಯ ಒಳಭಾಗದ ವಿಸ್ತೀರ್ಣ ಕಡಿಮೆಯಾಯಿತು. ಈಗ ನ್ಯಾಯಾಲಯದ ಆದೇಶದಂತೆ ಸೈಕಲ್‌ ಪಾತ್‌ ಮಾಯವಾಗಿ, ಅದೇ ಜಾಗದಲ್ಲಿ ಹೂವಿನ ಸಸಿಗಳನ್ನು ಬೆಳೆಸುತ್ತಿದ್ದಾರೆ. ಈ ಸಸಿಗಳನ್ನು ಸಂರಕ್ಷಿಸಲು ಯಾವ ಪೋತಪ್ಪ ನಾಯಕನು ಕಂಡು ಬರುತ್ತಿಲ್ಲ. ಮುಂದಿನ ದಿನಗಳಲ್ಲಿ ಇಲ್ಲಿಗೆ ಹೂಗಳ್ಳರು ದಾಳಿ ಇಡಲಿದ್ದಾರೆ. ಯುಗಾದಿ ಹಬ್ಬ ಬಂದರಂತು ಇಲ್ಲಿನ ಬೇವಿನ ಮರಗಳಲ್ಲಿ ಒಂದು ಎಲೆ ಇಲ್ಲದಂತೆ ಬೋಳಿಸಿ ಬಿಡುತ್ತಾರೆ.

ಈ ಹಿಂದೆ ಕೆರೆ ನಿರ್ಮಿಸಿದಾಗ ಸಿಮೆಂಟಿನ ಆನೆ, ಜಿಂಕೆ, ಹಸು, ಮಾನವರ ಕಲಾಕೃತಿಗಳನ್ನು ನಿರ್ಮಿಸಿದ್ದರು. ಆದರೆ ಈಗ ಕೆರೆಯ ಪುನರುಜ್ಜೀವನದ ನೆಪದಲ್ಲಿ ಇವುಗಳನ್ನು ಒಡೆದು ಹಾಕಿದ್ದಾರೆ. ಕೆಲವೊಂದನ್ನು ಎಂ.ಬಿ.ಎ ಕಾಲೇಜಿನ ಗೋಡೆ ಕಡೆಗೆ ದಬ್ಬಿದ್ದಾರೆ ಹಾಗೂ ಹನನ ಮಾಡಿದ ಮರಗಳಿಗೆ ಬದಲಾಗಿ, ಹೊಸದಾಗಿ ಒಂದೂ ಮರ ಗಿಡಗಳನ್ನು ನೆಟ್ಟಿರುವುದಿಲ್ಲ. ದಾವಣಗೆರೆಯ ಪರಿಸರವಾದಿಗಳೇ ಎಲ್ಲಿ ನಾಪತ್ತೆಯಾಗಿದ್ದೀರಿ?

ಈಗ ಕೆರೆಯ ಮೇಲೆ ಬೆಳಿಗ್ಗೆ-ಸಂಜೆ ಸಾವಿರಾರು ಜನರು ವಾಯುವಿಹಾರಕ್ಕೆ ಬರುತ್ತಾರೆ. ಆದರೆ ಅವರಿಗೆ ಒಂದು ಎಚ್ಚರಿಕೆ ನೀಡಬಯಸುತ್ತೇನೆ. ವಾಯುವಿಹಾರಕ್ಕೆ ಬರುವ ಮುನ್ನ ನೀರು ಕುಡಿದು ಬರಬೇಡಿ, ಏಕೆಂದರೇ ಪ್ರಕೃತಿ ಕರೆ ಬಂದರೇ ಗಂಡಸರು ಕಳ್ಳರಂತೆ ಅತ್ತಿತ್ತ ನೋಡಿ ಕೆರೆಯ ಇನ್ನೊಂದು ಪಕ್ಕದಲ್ಲಿ ಮೂತ್ರಬಾಧೆಯನ್ನು ತೀರಿಸಿಕೊಳ್ಳುತ್ತಾರೆ. ಆದರೆ ಹೆಂಗಸರು ಏನು ಮಾಡಬೇಕೆಂದು ಸ್ಮಾರ್ಟ್‌ಸಿಟಿಯ ಬೃಹಸ್ಪತಿಗಳು ತಿಳಿಸುತ್ತಾರೋ ಹೇಗೆ? ನಮ್ಮ ರಾಜಕೀಯ ಮುಖಂಡರು ತಮ್ಮ ಅಳಿವು, ಉಳಿವಿಗಾಗಿ ಚುನಾವಣೆಯನ್ನು ಎದುರಿಸುತ್ತಿದ್ದು, ಈ ಬಗ್ಗೆ ಗಮನ ಹರಿಸಲು ಸಮಯವೇ ಇಲ್ಲವಾಗಿದೆ.

2018ರ ಸಾಲಿನಲ್ಲಿ ಕೆರೆಯಲ್ಲಿ ಸುಮಾರು 1.95 ಕೋಟಿ ವೆಚ್ಚದಲ್ಲಿ ಕಾರಂಜಿಗಳನ್ನು ನಿರ್ಮಿಸಿದ್ದರು. ಅವುಗಳಿಂದ ನೀರು ಚಿಮ್ಮಿದ್ದನ್ನು ಯಾರು ನೋಡಿದ್ದಾರೋ ಏನೋ ಗೊತ್ತಿಲ್ಲ. ಆದರೆ ಈಗ ಒಂದು ಕಾರಂಜಿಯ ಅಸ್ಥಿಪಂಜರ ಹಲ್ಲು ಕಿರಿಯುತ್ತಾ ನಿಂತಿದೆ. ಈ ಸೌಭಾಗ್ಯಕ್ಕೆ ಸಾರ್ವಜನಿಕರ ಹಣ ಪೋಲು. ಈಗ ಮಳೆಗಾಲ ಶುರುವಾದರೆ ವಾಯು ವಿಹಾರಿಗಳಿಗೆ ನಿಲ್ಲಲು ಸರಿಯಾದ ತಾಣಗಳಿಲ್ಲ, ಆದ್ದರಿಂದ ಸ್ಮಾರ್ಟ್‌ಸಿಟಿಯವರೇ ಸ್ವಲ್ಪ ಸಮಯ ಮಾಡಿಕೊಂಡು ಈ ಎಲ್ಲಾ ಸಮಸ್ಯೆಗಳ ಬಗ್ಗೆ ಗಮನಹರಿಸಿ, ಇಲ್ಲದಿದ್ದರೆ ನಗರದ ಸಾರ್ವಜನಿಕರ, ವಾಯುವಿಹಾರಿಗಳ, ಪರಿಸರವಾದಿಗಳ ಶಾಪಕ್ಕೆ ಗುರಿಯಾಗುತ್ತೀರಿ.


– ಮನು,, ಎಂಸಿಸಿ ಬಿ ಬ್ಲಾಕ್‌ ನಿವಾಸಿ, ದಾವಣಗೆರೆ.

error: Content is protected !!