ಹೆಚ್.ಕೆ. ರಾಮಚಂದ್ರಪ್ಪ ಅವರ ಎರಡನೇ ವರ್ಷದ ಸ್ಮರಣೆ ಕಾರ್ಯಕ್ರಮ
ದಾವಣಗೆರೆ, ಮೇ 11- ರಾಜ್ಯಾದ್ಯಂತ ವಿವಿಧ ಯೋಜನೆಗಳ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಕನಿಷ್ಠ ವೇತನ, ಮೂಲಭೂತ ಸೌಕರ್ಯ, ಸಾಮಾಜಿಕ ಭದ್ರತೆ ಕಲ್ಪಿಸಲು ಹಗಲಿರುಳು ದುಡಿದಿದ್ದ ಮಹಾನ್ ವ್ಯಕ್ತಿ ದಿ. ಹೆಚ್.ಕೆ. ರಾಮಚಂದ್ರಪ್ಪ ಎಂದು ಅಂಗನವಾಡಿ ಫೆಡರೇಶನ್ ಜಿಲ್ಲಾಧ್ಯಕ್ಷೆ ಎಂ.ಬಿ. ಶಾರದಮ್ಮ ಸ್ಮರಿಸಿದರು.
ನಗರದ ಜಯದೇವ ವೃತ್ತದಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಫೆಡರೇಶನ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ದಿ. ಹೆಚ್.ಕೆ. ರಾಮಚಂದ್ರಪ್ಪ ಅವರ ಎರಡನೇ ವರ್ಷದ ಸ್ಮರಣೆ ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಿದರು.
ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಅಗತ್ಯ ಬೇಡಿಕೆಗಳನ್ನು ಈಡೇರಿಸಲು ರಾಜ್ಯಮಟ್ಟದಲ್ಲಿ ಸಂಘಟನೆ ಮಾಡಿದ ಹೆಚ್.ಕೆ. ಆರ್. ಅವರು ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮೀಣ ಮಟ್ಟದಲ್ಲೂ ಕಾರ್ಯಕರ್ತರು, ಸಹಾಯಕಿಯರಿಗೆ ಸೌಲಭ್ಯ ಸಿಗುವಂತೆ ಮಾಡಿದರು ಎಂದು ಅವರ ಸೇವೆಯನ್ನು ಕೊಂಡಾಡಿದರು. ಕೇವಲ 100 ರೂ. ಗೌರವ ಧನದೊಂದಿಗೆ ವೃತ್ತಿ ಜೀವನ ಆರಂಭಿಸಿದ ನಾವುಗಳು ಹೋರಾಟದ ಫಲವಾಗಿ ಇಂದು 12,500 ರೂ. ಸಂಭಾವನೆ ಪಡೆಯುವಲ್ಲಿ ಸಫಲರಾಗಿದ್ದೇವೆ. ಇದಕ್ಕೆ ಹೆಚ್.ಕೆ. ಆರ್. ಶ್ರಮ ಕಾರಣ ಎಂದು ಹೇಳಿದರು.
ಫೆಡರೇಶನ್ ರಾಜ್ಯ ಸಂಚಾಲಕ ಆವರಗೆೆರೆ ವಾಸು ಮಾತನಾಡಿ, ಶೋಷಿತರ, ಕಾರ್ಮಿಕರ ಮತ್ತು ದುಡಿಯುವ ವರ್ಗದವರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವಲ್ಲಿ ಹೆಚ್.ಕೆ. ಆರ್. ಮುಂಚೂಣಿ ನಾಯಕರಾಗಿದ್ದರು. ಅವರ ಸಾಮಾಜಿಕ ಸೇವೆ ಶ್ಲ್ಯಾಘನೀಯ ಎಂದರು.
ಸಂಘಟನೆಯ ಮುಖಂಡರಾದ ವಿಶಾಲಾಕ್ಷಿ ಮೃತ್ಯುಂಜಯ ಮಾತನಾಡಿದರು. ಜಗಳೂರು ತಾಲ್ಲೂಕು ಅಧ್ಯಕ್ಷ ಸುಶೀಲಮ್ಮ, ಚನ್ನಗಿರಿ ತಾಲ್ಲೂಕು ಅಧ್ಯಕ್ಷೆ ವಿಮಲಾಕ್ಷಿ, ದಾವಣಗೆರೆ ತಾಲ್ಲೂಕು ಅಧ್ಯಕ್ಷೆ ಕೆ.ಸಿ. ನಿರ್ಮಲ, ಕಾರ್ಯದರ್ಶಿ ಡಿ. ಗೀತಾ, ಗೌರವಾಧ್ಯಕ್ಷೆ ರೇಣುಕಮ್ಮ, ಭರಮಕ್ಕ, ಮಂಜುಳ ಮತ್ತಿತರರಿದ್ದರು.