ಪ್ರಜಾಪ್ರಭುತ್ವದ ಅರ್ಥ ಉಳಿದೀತೆ ?

ಪ್ರಜಾಪ್ರಭುತ್ವದ ಅರ್ಥ ಉಳಿದೀತೆ ?

ಪ್ರಜಾಪ್ರಭುತ್ವವೆಂಬ ಪಾಯಸಕ್ಕೆ ಚುನಾವಣೆ ಎಂಬ ಸಕ್ಕರೆಯೊಂದಿಗೆ ಮತದಾನವೆಂಬ ತುಪ್ಪ ಬೆರೆಸಿ, ಸಿಹಿಯಾದ ಜೀವನ ನಡೆಸುವ ತೀರ್ಮಾನ ನಮ್ಮದಾಗಿದೆ. ಇಂದು (10.05.2023) ಕರ್ನಾಟಕದ ಸಾರ್ವತ್ರಿಕ ಚುನಾವಣೆಗಳು ಜರುಗಲಿವೆ. ಮುಂದಿನ ಐದು ವರ್ಷಗಳಲ್ಲಿ ನಮ್ಮ ಕರ್ನಾಟಕವನ್ನು ಯಾರು? ಹೇಗೆ ? ಆಳಬೇಕು ಎಂಬ ತೀರ್ಮಾನವಾಗಲಿದೆ. 

ಈ ಮಹತ್ತರವಾದ ತೀರ್ಮಾನ ತೆಗೆದುಕೊಳ್ಳುವ ಸಂದರ್ಭದಲ್ಲಿ ಮತದಾರ ಪ್ರಭುಗಳು ಪಕ್ಷ, ವ್ಯಕ್ತಿ, ವ್ಯಕ್ತಿತ್ವ, ಸಿದ್ಧಾಂತ, ಪ್ರಣಾಳಿಕೆಗಳನ್ನು ನೋಡಿ ಮತ ಹಾಕಬೇಕು. ರಾಜಕೀಯದ ಎಲ್ಲಾ ಪಕ್ಷಗಳು ನೇರ ಮುಖಾಮುಖಿ ಪೈಪೋಟಿಗೆ ಇಳಿದುಬಿಟ್ಟಿವೆ. ನಾನು ಮೇಲು – ನಾನು ಮೇಲು ಎಂದು ಅಬ್ಬರದ, ಆಡಂಬರದ ಪ್ರಚಾರಮಾಡಿದ್ದಾರೆ. ನಮ್ಮ ಪ್ರಜಾಪ್ರಭುತ್ವದ ಸಂವಿಧಾನದ ವ್ಯವಸ್ಥೆಯಲ್ಲಿ ನಮ್ಮ ರಾಷ್ಟ್ರದ ಭವಿಷ್ಯದ ನಿರ್ಮಾಣ ಮತದಾರ ಬಾಂಧವರ ಕೈಯ್ಯಲ್ಲಿದೆ.  ಆದರೆ, ನಮ್ಮ ಮತದಾರರು ಸ್ವಾಭಿಮಾನ ಮರೆತು ಅಭ್ಯರ್ಥಿಗಳು ನೀಡುತ್ತಿರುವ ಹಣಕ್ಕೆ, ಹೆಂಡಕ್ಕೆ, ಊಟಕ್ಕಾಗಿ ಹಾತೊರೆಯುತ್ತಿದ್ದಾರೆ. ಒಪ್ಪತ್ತಿನ ಕೂಳಿಗೆ ವರುಷದ ಜೀವನವನ್ನು ಬಲಿಕೊಡುತ್ತಿದ್ದಾರೆ. ಕೆಲವೊಬ್ಬರು ಯಾರು ಹೆಚ್ಚು ಹಣ ನೀಡುವರೋ ಅವರಿಗೆ ನಮ್ಮ ಮತ ಎನ್ನುತ್ತಿದ್ದಾರೆ. ಇನ್ನೂ ಕೆಲವರು ಎಲ್ಲರೂ ಕೊಡುವುದನ್ನು ತೆಗೆದುಕೊಳ್ಳೋಣ ಮತದಾನದ ದಿನ ಕುಡಿದ ಅಮಲಿನಲ್ಲಿ ಅವರ ಆಮಿಷಗಳಿಗೆ ಬಲಿಯಾಗಿ ಯಾರಿಗೋ ಒಬ್ಬರಿಗೆ ಮತವನ್ನು ನೀಡಿದರಾಯಿತು ಎನ್ನುತ್ತಿದ್ದಾರೆ. ಇನ್ನು ಕೆಲವರು ನಮಗ್ಯಾಕೆ ರಾಜಕೀಯ? ಯಾವ ಪಕ್ಷ ಬಂದರೆ ನಮಗೇನು? ರಜಾ ಇದೆ, ಮೋಜು, ಮಸ್ತಿ ಎಂದು ಒಂದು ಸಣ್ಣ ಪ್ರವಾಸ, ಒಂದು ಟ್ರಿಪ್, ಊರು ಎಂದು ತಮಗೆ ಸಂಬಂಧವೇ ಇಲ್ಲವೆಂದು ತೆರಳುತ್ತಿದ್ದಾರೆ. ಯಾರಿಂದಲೂ ಹಣ ಬೇಡ ಎನ್ನುವವರ ಸಂಖ್ಯೆ ಗೌಣವಾಗುತ್ತಿದೆ. 

ಭ್ರಷ್ಟಾಚಾರದ ಕಪ್ಪು ನೆರಳಿನಲ್ಲಿ ಸ್ವಾಭಿಮಾನಿಗಳು ಚುನಾವಣೆಯತ್ತ ತಲೆನೇ ಹಾಕದಂತಾಗಿದೆ. ಎಲ್ಲರೂ ಒಂದು ಕ್ಷಣ ನಮ್ಮ ಮುಂದಿರುವ ಸವಾಲುಗಳನ್ನು ಒಮ್ಮೆ ಅವಲೋಕಿಸೋಣವೇ ?……

ನಮ್ಮ ಅತ್ಯಮೂಲ್ಯ ವೋಟನ್ನು ನೋಟಿಗೆ ಮಾರಿದರೆ, ಪ್ರಜಾಪ್ರಭುತ್ವಕ್ಕೆ ಅರ್ಥವಿದೆಯೇ ? ರಾಜಕೀಯ ವ್ಯವಸ್ಥೆಯ ನೈತಿಕ ಅಧಃಪತನಕ್ಕೆ ನಾವೇ ಕಾರಣರಾದಂತಲ್ಲವೇ ?

ಆಮಿಷಗಳಿಗೆ ಬಲಿಯಾಗುತ್ತಿರುವ ಮತದಾರರುಗಳು ಇರುವ ತನಕ ಭ್ರಷ್ಟ ರಾಜಕಾರಣಿಗಳನ್ನು ದೂಷಿಸುವ ನೈತಿಕತೆ ನಮ್ಮಲ್ಲಿದೆಯೇ? ಇದು ಪ್ರತಿ ಐದು ವರ್ಷಗಳಿಗೊಮ್ಮೆ ಈ ಭ್ರಷ್ಟಾಚಾರ ಹೆಚ್ಚಾಗುತ್ತಿದ್ದರೆ, ಇದಕ್ಕೆ ಅಂತ್ಯ ಹಾಡುವವರು ಯಾರು ?

ಇದು ಒಂದು ಪ್ರಜಾಪ್ರಭುತ್ವದ ಅವನತಿಯ ರೋಗ ಲಕ್ಷಣವಲ್ಲವೇ ?

ಇವೆಲ್ಲವೂ ಕೋಳಿ ಮೊದಲೋ? ಮೊಟ್ಟೆ ಮೊದಲೋ ? ಎಂಬ ವಿತಂಡವಾದದ ಪ್ರಶ್ನೆಗಳಾಗಿವೆ. ಈ ಪ್ರಶ್ನೆಗಳಿಗೆ ಮತದಾರರೇ ಉತ್ತರಿಸಬೇಕು.

ಎಲ್ಲರಿಗೂ ಮತದಾನದ ಮೌಲ್ಯದ ಅರಿವು ಮೂಡಬೇಕು. ಭ್ರಷ್ಟಾಚಾರ ನಾಶವಾಗಬೇಕು. ಪ್ರಜ್ಞಾವಂತ, ಸುಶಿಕ್ಷಿತ ನಾಗರಿಕ ಸಮಾಜ ಕಾರ್ಯೋನ್ಮುಖವಾಗಬೇಕು. ಜನಸಾಮಾನ್ಯರ ಬಳಿ ಹಣ ಓಡಾಡುತ್ತಿಲ್ಲ. ಓಟಿಗಾಗಿ ನೀಡುವ ನೋಟು ಸುಲಭವಾಗಿ ಒದಗುವ ಹಣ, ಬಾಹ್ಯ ಸಮಾಜದಲ್ಲಿ, ಆಡಳಿತ ವ್ಯವಸ್ಥೆಯಲ್ಲಿ, ಅಧಿಕಾರ ಕೇಂದ್ರಗಳಲ್ಲಿ, ರಾಜಕೀಯ ವಲಯದಲ್ಲಿ, ಭ್ರಷ್ಟಾಚಾರ ಅಂತ್ಯವಾಗದ ಹೊರತು, ಇದು ಕೂಡ ಅಂತ್ಯವಾಗುವುದಿಲ್ಲ. ಎಲ್ಲರೂ ಒಂದು ಮನ್ವಂತರಕ್ಕಾಗಿ ಆಶಿಸಬೇಕು. ಹೊಸ ಯುಗಕ್ಕಾಗಿ ಶ್ರಮಿಸಬೇಕು. ಸಮಾಜವಾದದತ್ತ ಸಾಗಬೇಕು. ಪ್ರಜಾಪ್ರಭುತ್ವದ ಅರ್ಥ, ಸಂವಿಧಾನದ ಗೌರವ ಉಳಿಸಬೇಕು.


ಡಾ. ಅನಿತಾ ಹೆಚ್. ದೊಡ್ಡ ಗೌಡರ್
ದಾವಣಗೆರೆ.

 

error: Content is protected !!