`ಮಾರಾಟವಾಗಬೇಡ ಮತದಾರ..!’

`ಮಾರಾಟವಾಗಬೇಡ ಮತದಾರ..!’

`ನೀನು ಹೋರಾಟ ಮಾಡು, ಆದರೆ ಮಾರಾಟವಾಗಬೇಡ’ ಈ ಮಾತು ಡಾ. ಅಂಬೇಡ್ಕರ್ ಅವರ ಮಾತು. ಅವರು ಅಂದು ಹೇಳಿದ ಮಾತು ಇಂದು ನಿಜವಾಗುತ್ತಿದೆ ಅನಿಸುತ್ತಿದೆ ಅಲ್ಲವೇ? ಇನ್ನು ಒಂದು ತಿಂಗಳಲ್ಲಿ ಮತದಾರನ ಮಾರಾಟ, ಇದುವರೆಗೂ  ಸೀಟಿಗಾಗಿ ಪರದಾಟ ಹಾಗು ಮಾರಾಟ. ಚುನಾವಣೆ ಮುಗಿದ ಮೇಲೆ ಮಂತ್ರಿಗಿರಿಗಾಗಿ ಮಾರಾಟ.

ನಿನ್ನನ್ನು (ಮತದಾರ) ನೀನು ಎಲ್ಲಿಯವರೆಗೂ   ಕೆಟ್ಟ ಆಸೆಯಿಂದ ದೂರವಿಡುವುದಿಲ್ಲವೋ ಅಲ್ಲಿಯವರೆಗೂ ನೀನು ಇನ್ನೊಬ್ಬನ ಅಡಿಯಾಳು. ಒಂದು ಒಳ್ಳೆಯ  ಬೀಜವನ್ನು ಭೂಮಿಯಲ್ಲಿ ಊರಿದರೆ  ಅದು ಒಳ್ಳೆಯ ಫಲವನ್ನೇ ಕೊಡುವುದು. ಒಂದು ಹಾಳಾದ ಬೀಜವನ್ನು ಭೂಮಿಗೆ ಹಾಕಿ, ಒಳ್ಳೆಯ ಫಲವನ್ನು ಬಯಸಿದರೆ ಮೂರ್ಖತನವಲ್ಲವೇ? ಈಗ  ಬಂದಿರುವ ಚುನಾವಣೆಯಲ್ಲಿ  ಮತದಾರ ಒಬ್ಬ ಒಳ್ಳೆಯ ವ್ಯಕ್ತಿಯನ್ನು ಯಾವುದೇ ಫಲಾಪೇಕ್ಷೆಯಿಲ್ಲದೇ  ಚುನಾಯಿಸಿದರೆ, ಅವನಿಂದ ನಿಮಗೇ ಆಗಬೇಕಾದ  ಕೆಲಸಗಳನ್ನು ಧೈರ್ಯದಿಂದ ಕೇಳಿ ಮಾಡಿಸಬಹುದಾಗಿರುತ್ತದೆ. 

ಅಪ್ಪಿ ತಪ್ಪಿ ನೀವು ಕುಕ್ಕರ್, ಲಿಕ್ಕರ್, ಸೀರೆ, ಮೂಗ್ನತ್ತು,  ಇನ್ನೂರು, ಐನೂರು ಅಂತ ಪಡೆದು ಮತ ಹಾಕಿ ಯೋಗ್ಯತೆ ಯಿಲ್ಲದ ಮೂರ್ಖನನ್ನು ಗೆಲ್ಲಿಸಿದರೆ, ನಿಮಗೆ  ಅವನನ್ನು ಪ್ರಶ್ನೆ ಮಾಡಲು ಯಾವ ನೈತಿಕತೆಯೂ ಇರುವುದಿಲ್ಲ.

ಯಾವ ಪಕ್ಷ ಗೆದ್ದು ಬಂದರೂ,  ಯಾವ ವ್ಯಕ್ತಿ ಗೆದ್ದು ಬಂದರೂ ನೀನು ಮಾತ್ರ ಹಾಗೆಯೇ ಇರುತ್ತೀಯ.    ಮೊದಲ ಬಾರಿಗೆ  ಗೆದ್ದು ಬಂದವನು  ಮುಂದಿನ ಚುನಾವಣೆಯೊಳಗೆ ಒಂದು ಆಸ್ಪತ್ರೆಯನ್ನೋ,  ಒಂದು ಶಾಲೆಯನ್ನೋ ಕಟ್ಟಿಸಿರುತ್ತಾನೆ.  ಅಷ್ಟೇ ಅಲ್ಲ ಮಕ್ಕಳ ಹೆಸರಲ್ಲಿ, ಹೆಂಡತಿಯ ಹೆಸರಲ್ಲಿ, ಸಂಬಂಧಿಕರ ಹೆಸರಲ್ಲಿ ಆಸ್ತಿಗಳನ್ನು ಮಾಡಿ, ತಾನು ನೋಟಿನ ಹಾಸಿಗೆಯ ಮೇಲೆ ಮಲಗಿರುತ್ತಾನೆ ಗೊತ್ತಲ್ಲವೇ?  

ಈಗ ಮತದಾರರಿಗೆ ಅದೆಷ್ಟೋ ಆಸೆ ಆಮಿಷಗಳನ್ನೊಡ್ಡಿ ಮತ ಕೇಳುವ ಈ ರಾಜಕಾರಣಿಗಳು, ಗೆದ್ದ ನಂತರ ಅವರ ಆಸೆಗಳನ್ನು ಮಾತ್ರ ಪೂರೈಸಿಕೊಳ್ಳುತ್ತಾರೆ. ಅದಕ್ಕೇ ಸಾಕಾಗುತ್ತದೆ ಐದು ವರ್ಷ.

ಈ ಐದು ವರ್ಷಗಳಲ್ಲಿ ನಿನಗೇನು ಸಿಕ್ಕಿದ್ದು? ಏನೂ ಇಲ್ಲ. ನೀನು ಕಟ್ಟುವ ಟ್ಯಾಕ್ಸ್‌ನಿಂದ ಅವರು ಉದ್ಧಾರವಾಗು ತ್ತಾರೆ. ಅಷ್ಟೇ ಅಲ್ಲ ತಿಳ್ಕೊಳ್ಳಿ, ನಿಮಗೆ ಯಾವುದೇ ಕಾರ್ಯಕ್ರಮದಲ್ಲೂ ಮುಂದಿನ ಸೀಟಿಲ್ಲ, ನಿಮ್ಮ ಪ್ರಶ್ನೆಗೆ ಉತ್ತರವಿಲ್ಲ, ನಿಮ್ಮ ಕೆಲಸಗಳು ಆಗುವುದಿಲ್ಲ, ನಿಮಗೆ ಮರ್ಯಾದೆಯೇ ಇಲ್ಲ.  ಕುಕ್ಕರ್-ಲಿಕ್ಕರ್, ಬಾಡೂಟ -ಬಾಟಲಿ, ಇನ್ನೂರು-ಮುನ್ನೂರು  ಪಡೆದಿದ್ದರಿಂದ  ನೀವು ಮಾತನಾಡುವ ಹಕ್ಕನ್ನೇ ಕಳೆದುಕೊಂಡು ಬಿಡುತ್ತೀರಿ.

ನಾನೇಳುವುದು ಇಷ್ಟೇ, ಹೋರಾಟ ಮಾಡಲು ಅವಕಾಶ ಉಳಿಸಿಕೊಳ್ಳಿ, ನಿಮ್ಮನ್ನು ಮಾರಾಟ ಮಾಡಿ ಕೊಳ್ಳಬೇಡಿ. ಭ್ರಷ್ಟಾಚಾರ ನಿಮ್ಮಿಂದಲೇ ಶುರು ಮಾಡಬೇಡಿ, ನಿಮ್ಮ ಹಕ್ಕನ್ನು ನೀವು ಚಲಾಯಿಸಿ, ಮತ ಚಲಾಯಿಸುವದನ್ನು ಮರೆಯಬೇಡಿ.


ವನಜಾ ಮಹಾಲಿಂಗಯ್ಯ ಮಾದಾಪುರ
ಸಮಾಜ ಸೇವಕಿ
ದಾವಣಗೆರೆ.

 

error: Content is protected !!