ಶ್ರೀ ಅನ್ನದಾನೇಶ್ವರ ಮಠದಲ್ಲಿನ ಶಿವಾನುಭವ ಸಂಪದದಲ್ಲಿ ಶೋಭಾ ಚಪ್ಪರದಳ್ಳಿ ಮಠ
ದಾವಣಗೆರೆ, ಮೇ 3- ಅಡುಗೆ ಮನೆಯಿಂದ ಮಹಿಳೆ ಆಕಾಶದೆತ್ತರಕ್ಕೆ ಏರಿದ್ದರೂ ಸಹ ಮಹಿಳೆಯರಿಗೆ ರಾಜಕೀಯವಾಗಿ ಸ್ಥಾನಮಾನ ಇನ್ನೂ ಸಿಕ್ಕಿಲ್ಲವೆಂದು ಸರ್ಕಾರಿ ಮೋತಿ ವೀರಪ್ಪ ಜ್ಯೂನಿಯರ್ ಕಾಲೇಜಿನ ಕನ್ನಡ ಉಪನ್ಯಾಸಕರಾದ ಶ್ರೀಮತಿ ಶೋಭಾ ಚಪ್ಪರದಳ್ಳಿ ಮಠ ವಿಷಾದಿಸಿದರು.
ನಗರದ ಹಾಲಕೆರೆ ಶ್ರೀ ಅನ್ನದಾನೇಶ್ವರ ಶಾಖಾ ಮಠದಲ್ಲಿ ಮೊನ್ನೆ ಏರ್ಪಡಿಸಿದ್ದ 257 ನೇ ಶಿವಾನುಭವ ಸಂಪದ, ಮಹಿಳಾ ದಿನಾಚರಣೆ ಹಾಗೂ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಉಪನ್ಯಾಸ ನೀಡಿದರು.
ಮಹಿಳೆಯರನ್ನು ಎರಡನೇ ದರ್ಜೆ ಸ್ಥಾನದಲ್ಲಿ ಕೂರಿಸಿ ನೋಡುವುದನ್ನು ಬಿಡಬೇಕು. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಎಲ್ಲಾ ಸ್ಥಾನಗಳಲ್ಲಿಯೂ ಸಾಧನೆ ಮಾಡಿದ್ದರೂ ಕೂಡ ಅವಳ ದೃಢ ನಿರ್ಧಾರದೊಂದಿಗೆ ದಿಟ್ಟ ಹೆಜ್ಜೆಯನ್ನಿಟ್ಟಿದ್ದರೂ ಸಹ ಅವಳಿಗೆ ಕಿರುಕುಳ, ಹಿಂಸೆ ಹಾಗೂ ಸ್ವೇಚ್ಛಾಚಾರದ ಘಟನೆಗಳು ನಡೆಯುತ್ತಲೇ ಇವೆ ಎಂದು ನುಡಿದು, 12 ನೇ ಶತಮಾನದಲ್ಲಿನ ಸಮಾನತೆಯ ಹೋರಾಟ ಇಂದು ಅಗತ್ಯವಾಗಿದೆ ಎಂದರು.
ಹೆಣ್ಣು ಮಕ್ಕಳು ಮನಸ್ಸು ಮಾಡಿದರೆ ಮನೆಯನ್ನು ಬೆಳಗುವುದರ ಜೊತೆಗೆ ದೇಶವನ್ನೂ ಬೆಳಗುತ್ತಾಳೆ. ತೊಟ್ಟಿಲು ತೂಗುವ ಕೈಗಳು ಜಗತ್ತನ್ನು ಆಳಬಲ್ಲವು ಎಂಬುದಕ್ಕೆ ಸಿದ್ಧಗಂಗಾ ವಿದ್ಯಾ ಸಂಸ್ಥೆಯ ಮುಖ್ಯಸ್ಥೆ ಡಾ. ಜಸ್ಟಿನ್ ಡಿಸೋಜಾ ಹಾಗೂ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ದಿಟ್ಟತನ ಮತ್ತು ಅವರ ಆಡಳಿತ ಇಂದಿಗೂ ನಮ್ಮೆಲ್ಲರಿಗೂ ಆದರ್ಶ ಪ್ರಾಯವಾಗಿದೆ ಎಂದರು.
ಇಂದಿನ ದಿನಗಳಲ್ಲಿ ಒತ್ತಡಕ್ಕೆ ಸಿಲುಕಿದ ವಿದ್ಯಾವಂತರೇ ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ. ಅಂತವರು ಇಂತಹ ಧಾರ್ಮಿಕ ಕೇಂದ್ರಗಳಿಗೆ ಬಂದು ಬುದ್ಧಿ ವಿಕಾಸ ಮಾಡಿಕೊಳ್ಳಬೇಕೆಂದು ಸಲಹೆ ನೀಡುತ್ತಾ, ಮಹಿಳೆಯರಿಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಮಕ್ಕಳಿದ್ದಾಗಲೇ ಸಂಸ್ಕಾರವಂತರನ್ನಾಗಿ ಮಾಡುವುದರ ಮೂಲಕ ಧೈರ್ಯವಂತರನ್ನಾಗಿ ಬೆಳೆಸಬೇಕೆಂದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಗರಗ- ನಾಗಲಾಪುರದ ಜಗದ್ಗುರು ಕೊಟ್ಟೂರು ಸ್ವಾಮಿ ಕುರುಗೋಡು ಶಾಖಾ ಮಠದ ಶ್ರೀ ನಿರಂಜನ ಪ್ರಭುದೇವರು ಆಶೀರ್ವಚನ ನೀಡುತ್ತಾ ಅರಿವು, ಅನ್ನ, ಆಶ್ರಯ ನೀಡಿದ ಹಾಲಕೆರೆ ಶ್ರೀ ಅನ್ನದಾನೇಶ್ವರ ಮಠದ ಜಗದ್ಗುರುಗಳು.
ಮಹಿಳೆಯರು ಮಾತ್ರ ಎಳೆಯಲು 640 ಕೆಜಿ ಬೆಳ್ಳಿಯ ರಥ ನಿರ್ಮಾಣ ಮಾಡಿದ ಶ್ರೀ ಡಾ.ಅಭಿನವ ಅನ್ನದಾನ ಮಹಾಸ್ವಾಮಿಗಳವರ ಅಭಿವೃದ್ಧಿಯ ಕನಸು ನನಸು ಮಾಡಿದ್ದಾರೆ. ಅವರ ಕಾರ್ಯ ಶ್ಲ್ಯಾಘನೀಯ ಎಂದರು.
ಇದೇ ಸಂದರ್ಭದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಮರಣೋತ್ತರ ಗೌರವ ಡಾಕ್ಟರೇಟ್ಗೆ ಭಾಜನರಾದ ಶ್ರೀ ಸಿದ್ದಗಂಗಾ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಶಿಕ್ಷಣ ಶಿಲ್ಪಿ ಲಿಂ. ಎಂ.ಎಸ್. ಶಿವಣ್ಣ ಅವರ ಧರ್ಮಪತ್ನಿ ಶ್ರೀಮತಿ ಜಸ್ಟಿನ್ ಡಿ ಸೋಜಾ ಅವರನ್ನು ಶ್ರೀಗಳವರು ಶಾಲು ಹೊದಿಸಿ ಸನ್ಮಾನಿಸಿದರು.
ಸೋಮ ಸಮುದ್ರದ ಶ್ರೀ ಸಿದ್ದಲಿಂಗ ದೇವರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಟ್ರಸ್ಟಿನ ಅಧ್ಯಕ್ಷ ಅಥಣಿ ಎಸ್. ವೀರಣ್ಣ, ಪ್ರಧಾನ ಕಾರ್ಯದರ್ಶಿ ಎನ್. ಅಡಿವೆಪ್ಪ, ದಂಡೆಪ್ಳರ ರೇವಣಸಿದ್ದಪ್ಪ, ಕೆ.ಟಿ. ಮಹಾಲಿಂಗೇಶ್, ನಾಗರಾಜ ಯರಗಲ್ ಮತ್ತಿತರರು ಉಪಸ್ಥಿತರಿದ್ದರು.
ಅಕ್ಕನ ಬಳಗದ ಅಧ್ಯಕ್ಷೆ ಶ್ರೀಮತಿ ಮಂಗಳ ವೀರಪ್ಪ ಅಧ್ಯಕ್ಷತೆ ವಹಿಸಿದ್ದರು. ಇಂದಿನ ಸುದ್ದಿ ಸಂಪಾದಕ ವೀರಪ್ಪ ಎಂ.ಬಾವಿ ಸ್ವಾಗತಿಸಿದರು. ಶ್ರೀಮತಿ ಸುಜಾತ ಮತ್ತು ಶ್ರೀಮತಿ ತನುಜ ವಿ.ಬಿ. ರವರು ಕಾರ್ಯಕ್ರಮ ನಿರೂಪಿಸಿದರು.
ದಿ. ಬಸವಲಿಂಗಮ್ಮ ಶ್ರೀ ಎಂ.ಸಿ. ಸದಾಶಿವಯ್ಯ ಇವರ ಸ್ಮರಣಾರ್ಥ ಶ್ರೀಮತಿ ನಾಗರತ್ನ ಹೊಸಮನಿ ನರೇಂದ್ರ ಪ್ರಕಾಶ್ ಭಕ್ತಿ ಸೇವೆಯನ್ನು ವಹಿಸಿಕೊಂಡಿದ್ದರು.