ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮದಲ್ಲಿ ಎ.ಕೆ. ಫೌಂಡೇಶನ್ ಸಂಸ್ಥಾಪಕ ಕೊಟ್ರೇಶ್
ದಾವಣಗೆರೆ, ಮೇ 3- ಶ್ರಮಿಕರ ಶ್ರಮ ಜೀವನದಿಂದಲೇ ದೇಶ ಅಭಿವೃದ್ಧಿ ಹೊಂದಲು ಕಾರಣವಾಗಿದೆ. ಪ್ರತಿಯೊಂದು ರಂಗದಲ್ಲೂ ಶ್ರಮಿಕರ ಬದುಕು ಪ್ರಮುಖವಾದುದು ಎಂದು ಎ.ಕೆ. ಫೌಂಡೇಶನ್ ಸಂಸ್ಥಾಪಕ ಕೆ.ಬಿ. ಕೊಟ್ರೇಶ್ ಹೇಳಿದರು.
ನಗರದ ಭಾರತ ಸೇವಾ ದಳ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಎ.ಕೆ. ಫೌಂಡೇಶನ್ ವತಿಯಿಂದ ಇಂದು ಹಮ್ಮಿಕೊಂಡಿದ್ದ ಕಾಯಕ ದಿನಾಚರಣೆ ಮತ್ತು ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದಲ್ಲಿರುವ ಅಸಂಘಟಿತ ವಲಯದ ಕಾರ್ಮಿಕರನ್ನು ಸಂಘಟಿತ ವಲಯಕ್ಕೆ ಸೇರಿಸುವ ಮೂಲಕ ಸರ್ಕಾರ ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ನೀಡುವ ಅಗತ್ಯವಿದೆ ಎಂದು ಹೇಳಿದರು.
ವರ್ತಕ ಎಸ್.ಟಿ.ಕುಸುಮ ಶ್ರೇಷ್ಠಿ ಮಾತನಾಡಿ, ಸಮಾಜದಲ್ಲಿ ಶ್ರಮಿಕರ ಪಾತ್ರ ಅತ್ಯಂತ ಪ್ರಮುಖವಾದುದು. ಅವರ ಶ್ರಮದಿಂದಲೇ ಜನರು ನೆಮ್ಮದಿಯ ಜೀವನ ಮಾಡುತ್ತಿದ್ದಾರೆ ಎಂದರು.
ಮಾಲೀಕ ಮತ್ತು ಕಾರ್ಮಿಕ ಪರಸ್ಪರ ಹೊಂದಾಣಿಕೆಯಿಂದ ಇದ್ದರೆ, ಕೆಲಸಗಳು ಸುಗಮವಾಗಿ ಸಾಗುತ್ತವೆ. ಪ್ರತಿಯೊಬ್ಬರಲ್ಲೂ ಕಾಯಕ ಪ್ರಜ್ಞೆ ಮುಖ್ಯ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಲಾಪ್ರಕಾಶ ವೃಂದದ ಅಧ್ಯಕ್ಷ ರಮಣ್ಲಾಲ್ ಪಿ.ಸಂಘವಿ ಮಾತನಾಡಿ, ಕಾಯಕ ಜೀವಿಗಳನ್ನು ಗೌರವಿಸುವ ಕಾರ್ಯ ಪ್ರಶಂಸನೀಯ. ಸೇವಾದಳ ಭವನದಲ್ಲಿ ನಿರಂತರವಾಗಿ ಕಾರ್ಯ ಚಟುವಟಿಕೆ ಗಳು ನಡೆಯುವಂತೆ ನೋಡಿಕೊಳ್ಳುವಂತೆ ಸಂಘಟಕರಿಗೆ ಮನವಿ ಮಾಡಿದರು.
ಕದಳಿ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷರಾದ ವಿನೋದ ಅಜಗಣ್ಣನವರ್ ಮಾತನಾಡಿ, ರೈತ ಮತ್ತು ಯೋಧ ಈ ದೇಶದ ಬೆನ್ನೆಲುಬು. ರೈತರು ಬೆಳೆದರೆ ದೇಶ ಉಳಿಯಲು ಸಾಧ್ಯ. ಅದರಂತೆ ಯೋಧರು ಗಡಿಯಲ್ಲಿದ್ದು ರಕ್ಷಣೆ ಮಾಡುವುದರಿಂದಲೇ ಜನರು ನೆಮ್ಮದಿ ಜೀವನ ನಡೆಸಲು ಸಾಧ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಬಿಎಸ್ಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಡಾ. ಮೃದುಲಾ ಎಂ. ಲಿಂಗರಾಜ್ ಅವರನ್ನೊಳಗೊಂಡಂತೆ ವಿವಿಧ ಕ್ಷೇತ್ರಗಳ ಕಾಯಕ ಜೀವಿಗಳಾದ ಕೆ.ಟಿ. ಗೋಪಲಗೌಡ್ರು, ಸುಲೋಚನಾ ಶ್ರೀಕುಮಾರ್ ಆನೆಕೊಂಡ, ಅಂಜಿನಪ್ಪ, ನಾಗರಾಜ್, ಶ್ರೀನಿವಾಸ್, ಆನಂದ್ ಮತ್ತಿತರರನ್ನು ಗೌರವಿಸಲಾಯಿತು.
ನಿವೃತ್ತ ಪ್ರಾಚಾರ್ಯ ಪರಶುರಾಮ್ ಖಟಾವ್ಕರ್, ನಿವೃತ್ತ ಶಿಕ್ಷಕ ಹೆಚ್.ಹನುಮಂತಪ್ಪ, ಶರಣ ಸಾಹಿತ್ಯ ಪರಿಷತ್ ನಗರ ಘಟಕದ ಅಧ್ಯಕ್ಷ ಎ. ಪರಮೇಶ್ವರಪ್ಪ ಸಿರಿಗೆರೆ ಮತ್ತಿತರರು ಉಪಸ್ಥಿತರಿದ್ದರು.
ಕದಳಿ ಮಹಿಳಾ ವೇದಿಕೆ ಸದಸ್ಯೆಯರು ಪ್ರಾರ್ಥಿಸಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ಸ್ವಾಗತಿಸಿದರು. ಶಿಕ್ಷಕ ಕೆ.ಟಿ. ಜಯಪ್ಪ ನಿರೂಪಿಸಿದರು.