ಪಕ್ಷೇತರ ಅಭ್ಯರ್ಥಿ ರಾಜೇಶ್ ನಾಮಪತ್ರ ಸಲ್ಲಿಕೆ

ಪಕ್ಷೇತರ ಅಭ್ಯರ್ಥಿ ರಾಜೇಶ್ ನಾಮಪತ್ರ ಸಲ್ಲಿಕೆ

ಜಗಳೂರು; ಪಕ್ಷಕ್ಕಾಗಿ ದುಡಿದರೂ ಕಾಂಗ್ರೆಸ್‌ ನಿರ್ಲಕ್ಷ್ಯ: ರಾಜೇಶ್ ಆರೋಪ

ಜಗಳೂರು, ಏ.19- ಕಾಂಗ್ರೆಸ್ ಪಕ್ಷದ ಟಿಕೆಟ್ ಗಾಗಿ ಕೊನೆಯ ಗಳಿಗೆವರೆಗೂ ಹೋರಾಟ ನಡೆಸಿ ವಿಫಲರಾದ ಮಾಜಿ ಶಾಸಕ ಎಚ್.ಪಿ. ರಾಜೇಶ್ ಅವರು ಬೃಹತ್ ಅಭಿಮಾನಿಗಳ ಜನಸ್ತೋಮ ದೊಂದಿಗೆ ಮೆರವಣಿಗೆ ನಡೆಸಿ  ಪಕ್ಷೇತರ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದರು.

ಪಟ್ಟಣದ ಈಶ್ವರ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ  ನಡೆದ ಮೆರವಣಿಗೆಯಲ್ಲಿ ಸಹಸ್ರಾರು ಸಂಖ್ಯೆಯ ಅಭಿಮಾನಿಗಳು  ಭಾಗವಹಿಸಿದ್ದರು.

ನಾಮಪತ್ರ ಸಲ್ಲಿಸಿ ನಂತರ ಮಾತನಾಡಿದ ಅವರು, ನಾನು ನಿಷ್ಠಾವಂತ ಕಾರ್ಯಕರ್ತನಾಗಿ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೆ. ಆದರೆ ಪಕ್ಷದ ಅಭ್ಯರ್ಥಿಯಾಗಿ ಟಿಕೆಟ್ ನೀಡುವಲ್ಲಿ ಕಾಂಗ್ರೆಸ್ ಪಕ್ಷದ ವರಿಷ್ಠರು ಮೋಸ ಮಾಡಿದ್ದರೆ ಎಂದು ದೂರಿದರು.

ಪಕ್ಷಕ್ಕಾಗಿ ದುಡಿದಿರುವೆ ಆದರೂ ಕಾಂಗ್ರೆಸ್  ಪಕ್ಷ ನನ್ನನ್ನು ನಿರ್ಲಕ್ಷಿಸಿದೆ. ಸ್ವಾಭಿಮಾನಿ ಕಾಂಗ್ರೆಸ್ ಅಭಿಮಾನಿಗಳ ಒತ್ತಾಯ, ಅವರ ಬೆಂಬಲದಿಂದ ಪಕ್ಷೇತರ ಅಭ್ಯರ್ಥಿ ಯಾಗಿ ಸ್ಪರ್ಧಿಸಿರುವೆ.  ನಿಮ್ಮ ಆಶೀರ್ವವಾದ ನನ್ನ ಮೇಲೆ ಇರಲಿ ಎಂದು ರಾಜೇಶ್ ಮನವಿ ಮಾಡಿದರು.

ಬರದ ನಾಡಿನಲ್ಲಿ ಬಡತನವಿರಬಹುದು. ಆದರೆ ಕಾರ್ಯಕರ್ತರ ಸ್ವಾಭಿಮಾನಕ್ಕೆ ಬರವಿಲ್ಲ. ಅಶ್ವತ್ಥರೆಡ್ಡಿ, ಇಮಾಂ ಸಾಹೇಬರಂತಹ ಧೀಮಂತ ನಾಯಕರು ಜನಿಸಿದ ಕ್ಷೇತ್ರದಲ್ಲಿ ನಾನು ಸ್ಪರ್ಧಿಸಿರುವೆ. ಕ್ಷೇತ್ರದ ಜನರ ತೀರ್ಮಾನಕ್ಕೆ ನಾನೂ ಬದ್ಧನಾಗಿರುವೆ ಎಂದು ತಿಳಿಸಿದರು.

ಕೋವಿಡ್  ಸಂದರ್ಭದಲ್ಲಿ ಬ್ಲಾಕ್ ಫಂಗಸ್ ಆವರಿಸಿದ ವೇಳೆ ನನಗೆ ಸಿರಿಗೆರೆ ಶ್ರೀಗಳು, ಜಿಲ್ಲೆಯ ವರಿಷ್ಠರಾದ ಎಸ್ ಎಸ್ ಮಲ್ಲಿಕಾರ್ಜುನ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದುಬೈನಿಂದ ಲಸಿಕೆ ಆಮದು ಮಾಡಿಸಿ ಚಿಕಿತ್ಸೆ ಕೊಡಿಸಿ ನನ್ನನ್ನು ಬದುಕಿಸಿದ ಪರಿಣಾಮ ನಾನು ಪುನರ್ಜನ್ಮ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಿರುವೆ ಎಂದು ಭಾವುಕರಾದರು.

ನನ್ನ ಆಡಳಿತಾವಧಿಯಲ್ಲಿ ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ ಮಂಜೂರಾದ 57 ಕೆರೆ ತುಂಬಿಸುವ ಯೋಜನೆ ಕಾಮಗಾರಿ  ತ್ವರಿತಗತಿಯಲ್ಲಿ ಸಾಗಿದೆ. ಒಟ್ಟಾರೆ 3000 ಕೋಟಿ ರೂ. ಅನುದಾನದಲ್ಲಿ  ಕೈಗೊಂಡ‌ ಅಭಿವೃದ್ದಿ ಕಾಮಗಾರಿಗಳೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದರು.

ಮೆರವಣಿಗೆ ಸಂದರ್ಭದಲ್ಲಿ ಮಾಜಿ ಶಾಸಕ ಗುರುಸಿದ್ದನಗೌಡ ಅವರು ಆಗಮಿಸಿ ದಾಗ, ರಾಜೇಶ್  ರೋಡ್ ಶೋ ವಾಹನದಿಂದ ಇಳಿದು ಬಂದು ಆಶೀರ್ವಾದ ಪಡೆದುಕೊಂಡರು. ಕಾಂಗ್ರೆಸ್ ಮುಖಂಡರುಗಳಾದ  ಕಿತ್ತೂರು ಜಯ್ಯಣ್ಣ, ಎಲ್.ಬಿ. ಭೈರೇಶ್, ಯು.ಜಿ. ಶಿವಕುಮಾರ್, ತಿಪ್ಪೇಸ್ವಾಮಿ ಗೌಡ, ಗಡಿಗುಡಾಳ್ ಸುರೇಶ್, ಚಿತ್ತಪ್ಪ, ಜೆ.ಎನ್.ಶಿವನಗೌಡ, ಟಿ.ಜಿ.ಅರವಿಂದ್, ಪವನ್ ಕುಮಾರ್, ಪುರಶೋತ್ತಮ ನಾಯ್ಕ್ , ಬಸವಾಪುರ ರವಿಚಂದ್ರ  ಸೇರಿದಂತೆ ಅನೇಕ ಮುಖಂಡರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

error: Content is protected !!