ಹರಿಹರ, ಏ.18- ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಪಿ. ಹರೀಶ್ ಅವರು, ಸಂಸದ ಜಿ.ಎಂ.ಸಿದ್ದೇಶ್ವರ ಸೇರಿದಂತೆ, ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಅಪಾರ ಅಭಿಮಾನಿಗಳೊಂದಿಗೆ ಬೃಹತ್ ಮೆರವಣಿಗೆ ಮೂಲಕ ತೆರಳಿ ಚುನಾವಣಾ ಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ಬೆಳಿಗ್ಗೆ ಬೂದಿಹಾಳ್ ಗ್ರಾಮಕ್ಕೆ ಭೇಟಿ ಕೊಟ್ಟು ಗೋ ಮಾತೆಗೆ ಪೂಜೆ ಸಲ್ಲಿಸಿ, ದೇವಸ್ಥಾನ ದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ನಂತರ ಮೆರವಣಿಗೆ ನೀರಾವರಿ ಇಲಾಖೆಯಿಂದ ಪ್ರಾರಂಭಗೊಂಡು ಶಿವಮೊಗ್ಗ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ಮುಖ್ಯರಸ್ತೆಯಲ್ಲಿ ಸಾಗಿ ತಹಶೀಲ್ದಾರ್ ಕಚೇರಿಗೆ ಅಂತ್ಯಗೊಂಡಿತು. ಡ್ರಮ್ ಸೆಟ್, ಸೌಂಡ್ ಸಿಸ್ಟಮ್, ಡೊಳ್ಳು ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿ ಮೆರವಣಿಗೆಗೆ ಮೆರಗನ್ನು ನೀಡಿದವು.
ನಾಮಪತ್ರ ಸಲ್ಲಿಸಿದ ನಂತರ ಪತ್ರಕರ್ತ ರೊಂದಿಗೆ ಮಾತನಾಡಿದ ಹರೀಶ್, ದೇಶದ ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿಯವರು ಜನರ ಒಳಿತಿಗಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಜನರಿಗೆ ಯಾವುದೇ ರೀತಿಯ ಆರ್ಥಿಕ ತೊಂದರೆ ಆಗದಂತೆ ಸುಭದ್ರ ಆಡಳಿತ ನೀಡಿದ್ದಾರೆ. ಇದರಿಂದಾಗಿ ಈ ಬಾರಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಅಧಿಕ ಮತಗಳ ಅಂತರದಿಂದ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ಹೊಂದಿರುವುದಾಗಿ ತಿಳಿಸಿದರು.
ನಾನು ಕೂಡ ಹಿಂದೆ ಶಾಸಕನಾಗಿದ್ದ ಅವಧಿಯಲ್ಲಿ ಸೇತುವೆ ನಿರ್ಮಾಣ, ಕೋರ್ಟ್, ಡಿಗ್ರಿ ಕಾಲೇಜು, ತಾಲ್ಲೂಕು ಕಚೇರಿ ಸೇರಿದಂತೆ ಹಲವು ಬಗೆಯ ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರದಲ್ಲಿ ಮಾಡಿದ್ದು, ಅದು ಜನರ ಮನಸ್ಸಿನಲ್ಲಿ ಇರುವುದರಿಂದ ನಾನು ಗೆಲ್ಲುವುದು ನಿಶ್ಚಿತ ಮತ್ತು ರಾಜ್ಯದಲ್ಲಿ ಕೂಡ ಬಿಜೆಪಿ ಪಕ್ಷ ಮತ್ತೊಮ್ಮೆ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು.
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ದಾವಣಗೆರೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿಗಳು ಭಾರೀ ಬಹುಮತದೊಂದಿಗೆ ಗೆಲ್ಲುತ್ತಾರೆ. ಜೊತೆಗೆ ಹರಪನಹಳ್ಳಿಯಲ್ಲಿ ಕೂಡ ಬಿಜೆಪಿ ಅಭ್ಯರ್ಥಿ ಬಹುಮತದೊಂದಿಗೆ ಗೆಲ್ಲುವ ವಿಶ್ವಾಸ ಇದ್ದು, ನಮ್ಮಲ್ಲಿ ಯಾವುದೇ ರೀತಿಯ ಬಂಡಾಯದ ಮಾತಿಲ್ಲ.
ಎಲ್ಲರೂ ಒಗ್ಗಟ್ಟಿನಿಂದ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ. ಮಾಯಕೊಂಡ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿರುವ ಜಿಪಂ ಮಾಜಿ ಸದಸ್ಯ ವಾಗೀಶ್ ಸ್ವಾಮಿ ಬಗ್ಗೆ ನನಗೆ ಏನೂ ಗೊತ್ತಿಲ್ಲ, ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ದರೆ ಮಾತನಾಡಿ ಸರಿಪಡಿಸಲು ಮುಂದಾಗುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಉಸ್ತುವಾರಿ ಜೀವನಮೂರ್ತಿ, ಹಿರಿಯ ಮುಖಂಡರಾದ ಎನ್.ಜಿ. ನಾಗನಗೌಡ್ರು, ಚಂದ್ರಶೇಖರ್ ಪೂಜಾರ್, ನಗರಸಭೆ ಸದಸ್ಯರಾದ ಎ.ಬಿ. ವಿಜಯಕುಮಾರ್, ಅಶ್ವಿನಿ ಕೃಷ್ಣ, ಹನುಮಂತಪ್ಪ ಇತರರು ಹಾಜರಿದ್ದರು.