ಜಿಲ್ಲಾ ಕಾಂಗ್ರೆಸ್ ಸಮಿತಿಯ ಇಂಟೆಕ್ ಕಾರ್ಯಕ್ರಮದಲ್ಲಿ ಕೆಪಿಸಿಸಿ ರಾಜ್ಯ ವಕ್ತಾರ ಡಿ. ಬಸವರಾಜ್
ದಾವಣಗೆರೆ, ಏ.14- ಓಟಿಗಾಗಿ ಸಂವಿಧಾನಕ್ಕೆ ಅಪಚಾರ ಎಸಗಲು ಬೊಮ್ಮಾಯಿ ಸರ್ಕಾರ ಒಳಮೀಸಲಾತಿ ನೀಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದು ಅವೈಜ್ಞಾನಿಕವೆಂದು ಸುಪ್ರೀಂ ಕೋರ್ಟ್ ರಾಜ್ಯ ಬಿಜೆಪಿ ಸರ್ಕಾರಕ್ಕೆ ಕಪಾಳ ಮೋಕ್ಷ ಮಾಡಿದೆ ಎಂದು ಕೆಪಿಸಿಸಿ ರಾಜ್ಯ ವಕ್ತಾರ ಡಿ. ಬಸವರಾಜ್ ಹೇಳಿದರು.
ನಗರದ ಹದಡಿ ರಸ್ತೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಸರ್ಕ ಲ್‍ನಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಇಂಟೆಕ್ ವಿಭಾಗ ಏರ್ಪಡಿಸಿದ್ದ ಡಾ. ಅಂಬೇಡ್ಕರ್‍ರವರ 132ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಆಡಳಿತಕ್ಕೆ ಬಂದ ದಿನದಿಂದಲೂ ಡಾ.ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಬದಲಿಸಲು ಹುನ್ನಾರ ನಡೆಸುತ್ತಾ ಬಂದಿದೆ. ಒಂದೊಮ್ಮೆ ಬಿಜೆಪಿ ಸಂವಿಧಾನ ಬದಲಿಸಿದರೆ ದೇಶದಲ್ಲಿ ರಕ್ತಕ್ರಾಂತಿ ಆಗಲಿದೆ ಎಂದು ಅವರು ಎಚ್ಚರಿಕೆ ನೀಡಿದರು.
ವೋಟಿಗಾಗಿ ಸಂವಿಧಾನಕ್ಕೆ ಅಪಚಾರ ಎಸಗಲು ಬೊಮ್ಮಾಯಿ ಸರ್ಕಾರ ಒಳಮೀಸಲಾತಿ ನೀಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದು ಅವೈಜ್ಞಾನಿಕವೆಂದು ಸುಪ್ರೀಂ ಕೋರ್ಟ್ ರಾಜ್ಯ ಬಿಜೆಪಿ ಸರ್ಕಾರಕ್ಕೆ ಕಪಾಳ ಮೋಕ್ಷ ಮಾಡಿದೆ ಎಂದು ಬಸವರಾಜ್ ತಿಳಿಸಿದರು.
ಮುಸ್ಲಿಮರಿಗೆ ನೀಡಲಾಗುತ್ತಿದ್ದ ಶೇ. 4ರ ಮೀಸಲಾತಿಯನ್ನು ರದ್ದು ಪಡಿಸಲು ತೆಗೆದುಕೊಂಡಿರುವ ನಿರ್ಧಾರವು ಸಂಪೂರ್ಣ ತಪ್ಪು ಕಲ್ಪನೆಯನ್ನು ಆಧರಿಸಿದೆ ಎನ್ನುವುದು ಮೆಲ್ನೋಟಕ್ಕೆ ಕಂಡು ಬರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಐತಿಹಾಸಿಕವಾಗಿದೆ.
ಇದೇ ರೀತಿ ಪರಿಶಿಷ್ಟ ಜಾತಿ ವರ್ಗ ಗಳಿಗೆ ಒಳಮೀಸಲಾತಿ ನೀಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದು ಸಂವಿಧಾನ ವಿರೋಧಿಯಾಗಿದೆ. ಇದರ ಬಗ್ಗೆಯೂ ಮುಂದಿನ ದಿನಗಳಲ್ಲಿ ಭೋವಿ, ಬಂಜಾರ, ಕೊರಮ, ಕೊರಚ ಜಾತಿಯ ಸಮುದಾಯಗಳಿಂದ ಸುಪ್ರೀಂ ಕೋರ್ಟಿಗೆ ರಾಜ್ಯ ಸರ್ಕಾರದ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಡಿ. ಬಸವರಾಜ್ ತಿಳಿಸಿದರು.
ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಇಂಟೆಕ್ ವಿಭಾಗದ ಅಧ್ಯಕ್ಷ ಕೆ.ಎಂ. ಮಂಜುನಾಥ್, ಕಾಂಗ್ರೆಸ್ ಮುಖಂಡರಾದ ಬಿ.ಎನ್. ವಿನಾಯಕ, ಮಹ್ಮದ್ ಜಿಕ್ರಿಯಾ, ಆಲೂರ್ ಸಿದ್ದೇಶ್, ಬಸವಾಪಟ್ಟಣ ಖಲೀಲ್ ಸಾಬ್, ಕೆ.ಜಿ. ರಹಮತ್‌ವುಲ್ಲಾ, ಚಿನ್ನಸಮುದ್ರ ಶೇಖರ್ ನಾಯ್ಕ್, ಭಾಸಿತ್‍ಖಾನ್, ಹುಲಿಕಟ್ಟೆ ಚಂದ್ರಪ್ಪ, ಇಟ್ಟಿಗುಡಿ ಮಂಜುನಾಥ್, ಆರ್. ಸೂರ್ಯಪ್ರಕಾಶ್, ಎನ್.ಎಸ್. ವೀರಭದ್ರಪ್ಪ, ಬಿ.ಹೆಚ್. ಉದಯಕುಮಾರ್, ಡಿ. ಶಿವಕುಮಾರ್, ಮುಬಾರಕ್, ಕೆ. ವಸಂತ್‍ನಾಯ್ಕ್, ಬಸವರಾಜ್, ಹೊನ್ನೂರು-ಗೊಲ್ಲರಹಟ್ಟಿ ಲಿಂಗರಾಜ್, ಖಲೀಲ್ ಅಹ್ಮದ್, ಗಣೇಶ್, ವಸಂತ್, ಗಂಗಾಧರ್, ಪರಮೇಶ್ ಸೇರಿದಂತೆ ಇತರರು ಹಾಜರಿದ್ದರು.